ಫೆಬ್ರವರಿಗೆ ಕಾಂಗ್ರೆಸ್‌, ಜೆಡಿಎಸ್‌ ಮನೆಗಳು ಖಾಲಿ: ನಳಿನ್‌ ಕುಮಾರ್‌ ಕಟೀಲ್‌

By Govindaraj SFirst Published Nov 5, 2022, 1:40 AM IST
Highlights

ಮುಂದಿನ ಜನವರಿ, ಫೆಬ್ರವರಿ ವೇಳೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮನೆಗಳು ಖಾಲಿಯಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭವಿಷ್ಯ ನುಡಿದಿದ್ದಾರೆ.

ಶ್ರೀರಂಗಪಟ್ಟಣ (ನ.05): ಮುಂದಿನ ಜನವರಿ, ಫೆಬ್ರವರಿ ವೇಳೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮನೆಗಳು ಖಾಲಿಯಾಗಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭವಿಷ್ಯ ನುಡಿದಿದ್ದಾರೆ. ಪಟ್ಟಣದ ನಿಮಿಷಾಂಬ ದೇವಾಲಯದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸೇರುವಂತೆ ನಾವು ಯಾರನ್ನೂ ಕರೆಯುತ್ತಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಿಂದಲೇ ಬಿಜೆಪಿ ಸೇರುವುದಕ್ಕೆ ಹಲವಾರು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಎರಡೂ ಪಕ್ಷಗಳ ನಾಯಕರು ಬಿಜೆಪಿ ಸೇರುವುದರಿಂದ ಜನವರಿ ಅಥವಾ ಫೆಬ್ರವರಿ ಸಮಯಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮನೆಗಳು ಖಾಲಿಯಾಗುವುದು ನಿಶ್ಚಿತ ಎಂದು ಹೇಳಿದರು.

ಸಿದ್ದರಾಮಯ್ಯನವರು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವುದು ಕಾಂಗ್ರೆಸ್‌ ದುರ್ಬಲವಾಗಿರುವುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆಯಿದೆ. ಈ ಕಾರಣದಿಂದಲೇ ಡಿ.ಕೆ.ಶಿವಕುಮಾರ್‌ ಅವರು ಪಕ್ಷ ಬಿಟ್ಟು ಹೋಗಿರುವ 17 ಮಂದಿ ಶಾಸಕರನ್ನು ವಾಪಸ್‌ ಬರುವಂತೆ ಕರೆಯುತ್ತಿದ್ದಾರೆ. ಕಾಂಗ್ರೆಸ್‌ನೊಳಗೆ ಟಗರು ಮತ್ತು ಬಂಡೆ ಹೋರಾಟ ಹೆಚ್ಚಾಗುತ್ತಿದೆ. ಇವರಿಬ್ಬರ ಸಮರದಿಂದ ಶೀಘ್ರದಲ್ಲೇ ಕಾಂಗ್ರೆಸ್‌ ವಿಭಜನೆಯಾಗಲಿದೆ ಎಂದರು.

ಕಾಂಗ್ರೆಸ್‌ನಿಂದ ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ: ನಳೀನ್‌ಕುಮಾರ್‌ ಕಟೀಲ್‌

ಸಿದ್ದು ರಾಜ್ಯದ ಖಳನಾಯಕ: ಸಿದ್ದರಾಮಯ್ಯ ರಾಜ್ಯದ ಖಳನಾಯಕನಾದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಕಣ್ಣೀರ ನಾಯಕ. ಕುಮಾರಸ್ವಾಮಿಯವರು ಅಧಿಕಾರವಿಲ್ಲದಿರುವಾಗ ಜಾತಿಯನ್ನು ಮುಂದಿಟ್ಟು ಅಧಿಕಾರ ಕೊಡಿ ಎಂದು ಬೇಡುತ್ತಾರೆ. ಜನರು ಅಧಿಕಾರ ಕೊಟ್ಟಾಗ ತಾಜ್‌ ಹೋಟೆಲ್‌ನಿಂದ ಆಡಳಿತ ನಡೆಸುತ್ತಾರೆ ಎಂದು ಟೀಕಿಸಿದರು. ದಲಿತರೊಬ್ಬರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸುವ ಮೂಲಕ ಸಿದ್ದರಾಮಯ್ಯನವರು ದಲಿತರಿಗೆ ಅನ್ಯಾಯ ಮಾಡಿದರು. ಟಿಪ್ಪು ಜಯಂತಿ ಮಾಡಿದ ಸಿದ್ದುಗೆ ಜನರ ಶಾಪ ತಟ್ಟಿದೆ. ಅದಕ್ಕೇ ಅವರಿಗೆ ಸ್ಪರ್ಧೆಗೆ ಕ್ಷೇತ್ರ ಸಿಗುತ್ತಿಲ್ಲ. ಅವರಿಗೆ ತಾಕತ್ತಿದ್ದರೆ ಬಾದಾಮಿಯಿಂದಲೇ ಸ್ಪರ್ಧಿಸಿ, ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಶೀಘ್ರವೇ ಕಾಂಗ್ರೆಸ್‌ ಬಾಗಿಲು ಮುಚ್ಚಲಿದೆ: ಮುಂಬರುವ ವಿಧಾನಸಭಾ ಚುನಾವಣೆಯ ಒಳಗೆ ಕಾಂಗ್ರೆಸ್‌ ಮನೆಯ ಬಾಗಿಲು ಮುಚ್ಚುತ್ತಾರೆ. ಏಕೆಂದರೆ, ಕಾಂಗ್ರೆಸ್‌ನ ಹತ್ತಾರು ಜನ ನಮ್ಮ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಇದೊಂದು ವಿಶೇಷ ಸಂದರ್ಭ ಮಾತ್ರವಲ್ಲ, ರಾಜಕೀಯ ಬದಲಾವಣೆಯ ಸಂಕೇತವೂ ಆಗಿದೆ. ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಮೂಲಕ ಹೋದ ಕಡೆ ಕಾಂಗ್ರೆಸ್‌ ಪಕ್ಷ ಸೋತಿದೆ. ಕೊಳ್ಳೇಗಾಲದಲ್ಲಿ ಏಳರಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದೇ ಇದಕ್ಕೆ ಸಾಕ್ಷಿ. ವಿಜಯಪುರದಲ್ಲೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದಿದೆ. ಕಾಂಗ್ರೆಸ್‌ ಮನೆ ಖಾಲಿ ಆಗುವುದರ ಸಂಕೇತ ಇದಾಗಿದೆ. 

ರಸ್ತೆ ಅಭಿವೃದ್ಧಿ ಮೂಲಕ ಭಾರತ ಜೋಡಿಸುವ ಕೆಲಸ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿ ಕಮಲ ಮತ್ತೆ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಜನರು ಒಪ್ಪಿದ್ದಾರೆ. ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೊಮ್ಮಾಯಿ ಅವರು ಎಸ್ಸಿ, ಎಸ್ಟಿಸಮುದಾಯಕ್ಕೆ ಹಾಗೂ ಪೌರಕಾರ್ಮಿಕರಿಗೆ ನ್ಯಾಯ ನೀಡಿದ್ದಾರೆ. ಅದರ ನಂತರ ರಾಜ್ಯದ ಚಿತ್ರಣ ಬದಲಾಗಿದೆ. ಬಿಜೆಪಿ ಗೆಲುವು ಖಚಿತವಾಗಿದೆ. ಕಾಂಗ್ರೆಸ್‌ ಪಕ್ಷವು ತನ್ನ ತಲೆತಲಾಂತರದ ಮತಗಳೆಂದು ನಂಬಿದ್ದ ಮತಗಳು ಕೈಬಿಟ್ಟು ಹೋಗಿವೆ. ಕಾರ್ಯಕರ್ತರೇ ಆ ಪಕ್ಷವನ್ನು ಕೈಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

click me!