‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ನಿಮ್ಮ ಸ್ವಕ್ಷೇತ್ರಗಳಲ್ಲಿ ಆ ಅಭ್ಯರ್ಥಿ ಗೆಲವಿಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟವಾಗಿ ಹೇಳಿದ್ದಾರೆ.
ಬೆಂಗಳೂರು (ನ.05): ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ನಿಮ್ಮ ಸ್ವಕ್ಷೇತ್ರಗಳಲ್ಲಿ ಆ ಅಭ್ಯರ್ಥಿ ಗೆಲವಿಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟವಾಗಿ ಹೇಳಿದ್ದಾರೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದಿಂದ ಯಲಹಂಕದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸರಣಿ ಸಭೆಯಲ್ಲಿ ಶುಕ್ರವಾರ ಹುಬ್ಬಳ್ಳಿ-ಧಾರವಾಡ, ಹಾವೇರಿ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಗಳು, ಪ್ರಮುಖ ನಾಯಕರ ಸಭೆಯಲ್ಲಿ ‘ಒಗ್ಗಟ್ಟಿನ ಮಂತ್ರ’ ಬೋಧಿಸಿದ ಸುರ್ಜೇವಾಲಾ, ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಶ್ರಮವೂ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈಗಿನಿಂದಲೇ ಚುನಾವಣಾ ಅಖಾಡಕ್ಕಿಳಿದು ರಣತಂತ್ರ ರೂಪಿಸಲು ಮುಂದಾಗಿರುವ ಸುರ್ಜೇವಾಲಾ, ಟಿಕೆಟ್ ಆಕಾಂಕ್ಷಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ಆರಂಭಿಸಿದ್ದಾರೆ. ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿ, ಜನ ಬೆಂಬಲವಿರುವವರಿಗೆ ಟಿಕೆಟ್ ನೀಡಲಾಗುವುದು. ಯಾರಿಗೇ ಟಿಕೆಟ್ ನೀಡಿದರೂ ಇನ್ನುಳಿದ ಆಕಾಂಕ್ಷಿಗಳು ಬಂಡಾಯ ಏಳದೇ ಹೊಂದಾಣಿಕೆ ಮಾಡಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ತಾಕತ್ತಿದ್ದರೆ ಬಾದಾಮಿಯಿಂದಲೇ ಸ್ಪರ್ಧಿಸಿ: ಸಿದ್ದುಗೆ ರಾಮುಲು ಸವಾಲು
ಯಾವ್ಯಾವ ಜಿಲ್ಲೆಯಲ್ಲಿ ಯಾವ್ಯಾವ ಜಾತಿಯ ಮತದಾರರು ಎಷ್ಟಿದ್ದಾರೆ, ಯಾವ ಜಾತಿಯವರನ್ನು ಚುನಾವಣಾ ಅಖಾಡಕ್ಕೆ ಇಳಿಸಿದರೆ ಅನುಕೂಲವಾಗುತ್ತದೆ ಎಂಬ ನೀಲನಕ್ಷೆಯನ್ನೂ ನೀವೇ ನೀಡಿ. ಟಿಕೆಟ್ ನೀಡುವ ಸಮಯದಲ್ಲಿ ಇದನ್ನೂ ಪರಿಗಣಿಸಲಾಗುವುದು. ಒಟ್ಟಾರೆ ಅಸಮಾಧಾನ ಭುಗಿಲೇಳಬಾರದು. ಪಕ್ಷ ನಿಷ್ಠೆ ಇರುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಟಿಕೆಟ್ ಸಿಗದಿದ್ದರೂ ಅದಕ್ಕೆ ಈಗಿನಿಂದಲೇ ಮಾನಸಿಕವಾಗಿ ಸಿದ್ಧವಾಗಿರಿ ಎಂಬ ಸಂದೇಶ ರವಾನಿಸಿದ್ದಾರೆ.
ಬಸ್ ಯಾತ್ರೆ ಯಶಸ್ವಿಗೆ ಸಹಕರಿಸಿ: ಚುನಾವಣೆ ದೃಷ್ಟಿಯಿಂದ ಕೆಪಿಸಿಸಿಯಿಂದ ಆಯೋಜಿಸಲಿರುವ ಬಸ್ ಯಾತ್ರೆಯು ನಿಮ್ಮ ಜಿಲ್ಲೆಗಳಿಗೆ ಆಗಮಿಸಿದಾಗ ಹೆಚ್ಚು ಜನರನ್ನು ಸೇರಿಸಿ ಯಶಸ್ವಿಗೊಳಿಸಬೇಕು. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಗಳನ್ನು ಕೈಗೊಳ್ಳಬೇಕು, ಸಭೆ ನಡೆಸಬೇಕು. ಕೃಷ್ಣಾ, ಮಹದಾಯಿ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬ, ಕಳಪೆ ಕಾಮಗಾರಿ ವಿರೋಧಿಸಿ ನಡೆಸಲಿರುವ ಟ್ರ್ಯಾಕ್ಟರ್ ರಾರಯಲಿ ಯಶಸ್ಸಿಗೆ ಆಯಾ ಜಿಲ್ಲೆಯ ಮುಖಂಡರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದೂ ಸುರ್ಜೇವಾಲಾ ಸೂಚಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಕೋಲಾರ ಸಭೆಗೆ ಮುನಿಯಪ್ಪ, ರಮೇಶ್ ಗೈರು: ಖುದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿಯೇ ಚುನಾವಣಾ ರಣತಂತ್ರದ ಬಗ್ಗೆ ಸಭೆ ನಡೆಸುತ್ತಿದ್ದರೂ ಕೋಲಾರ ಜಿಲ್ಲಾ ಸಭೆಗೆ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಗೈರು ಹಾಜರಾಗಿದ್ದು ಕಂಡುಬಂತು. ರಮೇಶ್ ಕುಮಾರ್ ಅವರ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿರಲಿಲ್ಲ. ಆದರೆ ಮುನಿಯಪ್ಪ ಅವರು ಬೆಂಗಳೂರಿನ ನಿವಾಸದಲ್ಲಿದ್ದರೂ ಸಭೆಯತ್ತ ಮುಖ ಮಾಡಲಿಲ್ಲ. ಆದರೆ ತಮ್ಮ ನಿವಾಸದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮುನಿಯಪ್ಪ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್‌ಗೆ ಹೋಗಲ್ಲ: ಡಿಕೆಶಿಗೆ ಮೂರು ಸಚಿವರ ತಿರುಗೇಟು
ಕ್ಷೇತ್ರದ ಬಗ್ಗೆ ಸಿದ್ದು ನಿರ್ಧಾರ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜನನಾಯಕರು. ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ. ಕೋಲಾರ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟದ್ದು. ಕ್ಷೇತ್ರದ ಬಗ್ಗೆ ಅವರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕೋಲಾರ ಜಿಲ್ಲಾ ಮುಖಂಡರು, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕು. ಇಲ್ಲಿಂದ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಸುರ್ಜೇವಾಲಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಆಯ್ಕೆ ಬಗ್ಗೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಸಭೆಯಲ್ಲಿ ಹಾಜರಿದ್ದ ಸಿದ್ದರಾಮಯ್ಯ ಮಾತ್ರ ತುಟಿಪಿಟಕ್ ಎಂದಿಲ್ಲ.