
ಬೆಂಗಳೂರು(ಮಾ.02): ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS) ಪಕ್ಷಗಳ ಅನೇಕ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳ ಮತ್ತಷ್ಟು ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇವನಹಳ್ಳಿಯ ಜೆಡಿಎಸ್ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮತ್ತವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
Karnataka Budget 2022-23: ಸಿಎಂ ಚೊಚ್ಚಲ ಬಜೆಟ್ ಬಗ್ಗೆ ಹಲವು ನಿರೀಕ್ಷೆ
ದೇವನಹಳ್ಳಿಯ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಅವರ ಸೇರ್ಪಡೆಯಿಂದ ಬಿಜೆಪಿಗೆ(BJP) ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡ ಶಕ್ತಿ ಲಭಿಸಲಿದೆ. ದೇವನಹಳ್ಳಿ ಪ್ರಗತಿಪರ ಚಿಂತನೆ ಇರುವ ಕ್ಷೇತ್ರ. ಅಲ್ಲಿನ ಜನಸಮುದಾಯದ ಆಶಯ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿದೆ. ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಸೇರುತ್ತಿರುವುದರಿಂದ ಹೊಸ ರಾಜಕೀಯ ಸಮೀಕರಣ ಆಗುತ್ತಿದೆ. ಇಂತಹ ಸೇರ್ಪಡೆ ಕಾರ್ಯಕ್ರಮಗಳು ಮುಂದಿನ ಒಂದು ತಿಂಗಳು ನಡೆಯಲಿವೆ ಎಂದರು.
ಕಾಂಗ್ರೆಸ್ ಒಳಗೆ ಪೊಳ್ಳು:
ಕಾಂಗ್ರೆಸ್ ಪಕ್ಷದವರು ಹೊರಗಡೆ ಅಧಿಕಾರಕ್ಕೆ ಬಂದಂತೆ ಪೋಸ್ ಕೊಡುತ್ತಾರೆ. ಒಳಗಡೆ ಪೊಳ್ಳುತನ ಇದೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷದ ದುರಾಡಳಿತ, ಸರ್ವಾಧಿಕಾರ ಧೋರಣೆಯನ್ನು ಕರ್ನಾಟಕದ ಜನರು ಒಪ್ಪಿಕೊಳ್ಳುವುದಿಲ್ಲ. ದೇವನಹಳ್ಳಿಯ ಎಲ್ಲ ಸಮುದಾಯದ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ನವ ಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಶ್ರಮಿಸೋಣ. ಹೊರಗಿನವರು, ಒಳಗಿನವರು ಎಂಬ ಪ್ರಶ್ನೆ ಇಲ್ಲ. ಇಂದಿನಿಂದ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ದೇವನಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಿದೆ. ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ಕೊಡುವ ನೀತಿ ನಿಯಮಾವಳಿ ರೂಪಿಸಲಾಗುವುದು. 2023ರಲ್ಲಿ ದೇವನಹಳ್ಳಿಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ(North Karnataka) ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲಿದೆ ಎಂದರು.
ಈ ವೇಳೆ ಮಾತನಾಡಿದ ಪಿಳ್ಳಮುನಿಶಾಮಪ್ಪ, ಬಿಜೆಪಿ ತತ್ವ -ಸಿದ್ಧಾಂತವನ್ನು ಒಪ್ಪಿ ಬೆಂಬಲಿಗರ ಜತೆ ಪಕ್ಷಕ್ಕೆ ಸೇರಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯದ(Karnataka) ಯಡಿಯೂರಪ್ಪ(BS Yediyurappa), ಬಸವರಾಜ ಬೊಮ್ಮಾಯಿ ಅವರ ಜನಪರ ಕಾರ್ಯಕ್ರಮಗಳನ್ನು ಗಮನಿಸಿ ನಾನು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.
Maha Shivratri: ನಂದಿ ಬೆಟ್ಟದ ಶಿವರಾತ್ರಿ ಸಂಭ್ರಮದಲ್ಲಿ ಬೊಮ್ಮಾಯಿ ಕೊಟ್ಟ ಗುಡ್ ನ್ಯೂಸ್!
ಇದೇ ಸಂದರ್ಭ ಜೆಡಿಎಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ವಥಪ್ಪ, ದೇವನಹಳ್ಳಿ, ಚಿಕ್ಕಬಳ್ಳಾಪುರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ್, ಭೂ ಮಂಜೂರಾತಿ ಸಮಿತಿ ಮಾಜಿ ಸದಸ್ಯ ಆರ್.ಎನ್.ಸುಬ್ಬೇಗೌಡ, ಜೆಡಿಎಸ್‌ನ ಹಿರಿಯ ಅಲ್ಪಸಂಖ್ಯಾತ ಮುಖಂಡ ಸಿ.ರಿಯಾಜ, ದೇವನಹಳ್ಳಿ ಕಾಂಗ್ರೆಸ್‌ನ ಹಿರಿಯ ಮುಖಂಡ ಜೊಳ್ಳಪ್ಪನವರ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ಸಿ.ಟಿ.ರವಿ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್ ಮತ್ತಿತರರಿದ್ದರು.
ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ವರ್ಗಕ್ಕೂ ಸಮಾಧಾನ ಇರಲಿಲ್ಲ. ಅಲ್ಲದೆ, ಕೆಲವು ವರ್ಗಕ್ಕೆ ಬಹಳಷ್ಟು ಅನ್ಯಾಯವಾಗಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಮುಂದಾದರು. ಅಪವಿತ್ರ ಮೈತ್ರಿಯಿಂದ ಮಾಡಿದ ಸಮ್ಮಿಶ್ರ ಸರ್ಕಾರದಿಂದ ಜನರಿಗೆ ಭ್ರಮನಿರಸನವಾಗಿತ್ತು. ಬಿಜೆಪಿ ಎಲ್ಲ ಸಂದರ್ಭಗಳಲ್ಲೂ ಕೇಂದ್ರದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲೂ ಕ್ರಿಯಾಶೀಲ, ಜನಪರ ಸರ್ಕಾರವಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡುವುದಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.