ಮಂತರ್ ಗೌಡ ಗೆಲುವು : ಕೊಡಗಿನಿಂದ ಚಾಮುಂಡಿಬೆಟ್ಟಕ್ಕೆ ಅಭಿಮಾನಿಗಳ ಪಾದಯಾತ್ರೆ

By Ravi JanekalFirst Published Jun 1, 2023, 2:52 PM IST
Highlights

ಮಡಿಕೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್ ನ ಡಾ. ಮಂತರ್ ಗೌಡ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೊಡಗಿನ ಕೂಡುಮಂಗಳೂರು ಗ್ರಾಮದಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಹರಕೆ ತೀರಿಸಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜೂ.1) : ಮಡಿಕೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಕಾಂಗ್ರೆಸ್ ನ ಡಾ. ಮಂತರ್ ಗೌಡ ಆಯ್ಕೆ ಆಗಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಕೊಡಗಿನ ಕೂಡುಮಂಗಳೂರು ಗ್ರಾಮದಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಹರಕೆ ತೀರಿಸಿದ್ದಾರೆ. 

ಕುಶಾಲನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದರಾದ ಸಂತೋಷ್ ಮತ್ತು ಅರುಣ್ ಮಾದಪ್ಪ ಅವರು ಪಾದಯಾತ್ರೆ ಮಾಡಿದ್ದಾರೆ. ಕೂಡುಮಂಗಳೂರಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಅರುಣ್ ಮತ್ತು ಸಂತೋಷ್ ಇಂದು ಬೆಳಿಗ್ಗೆ ಪಾದಯಾತ್ರೆ ಆರಂಭಿಸಿದ್ದಾರೆ. 

ಕೊಡಗು: ವನ್ಯಜೀವಿ - ಮಾನವ ಸಂಘರ್ಷಕ್ಕೆ ಸಿಕ್ಕೀತೆ ಶಾಶ್ವತ ಪರಿಹಾರ?

ಕೂಡುಮಂಗಳೂರಿನಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ 135 ಕಿಲೋ ಮೀಟರ್ ಇದ್ದು ಎರಡು ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದಾರೆ. ಇಂದು ಮೈಸೂರು ಜಿಲ್ಲೆಯ ಹುಣುಸೂರಿನವರಿಗೆ ಪಾದಯಾತ್ರೆಯಲ್ಲಿ ಸಾಗಲಿದ್ದು ಈ ಇಬ್ಬರು ಅಲ್ಲಿ ತಂಗಿ ಮತ್ತೆ ನಾಳೆ ಬೆಳಿಗ್ಗೆ ಪಾದಯಾತ್ರೆ ಆರಂಭಿಸಲಿದ್ದಾರೆ. ಚುನಾವಣೆಯಲ್ಲಿ ಡಾಕ್ಟರ್ ಮಂತರ್ ಗೌಡ ಗೆಲ್ಲಬೇಕೆಂದು ನಾಡದೇವಿ ಚಾಮುಂಡಿ ತಾಯಿಯ ಮೊರೆ ಹೋಗಿದ್ದರಂತೆ. ಮಂತರ್  ಗೌಡ ಅವರು ಗೆದ್ದರೆ, ನಾವು ಪಾದಯಾತ್ರೆ ಮಾಡಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ 101 ಈಡುಗಾಯಿ ಅರ್ಪಿಸುವುದಾಗಿ ಹರಕೆ ಹೊತ್ತಿದ್ದರಂತೆ. 

ಈಗ ಮಂತರ್ ಗೌಡ ಅವರು ಗೆಲುವು ಪಡೆದಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಕೂಡುಮಂಗಳೂರಿನ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಾಸಕ ಮಂತರ್ ಗೌಡ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಇಬ್ಬರು ಬಳಿಕ ಪಾದಯಾತ್ರೆ ಆರಂಭಿಸಿದರು. ಈ ವೇಳೆ ಮಾತನಾಡಿದ ಡಾ. ಮಂತರ್ ಗೌಡ ಕೊಡಗಿನಲ್ಲಿ ಬದಲಾವಣೆ ತರಬೇಕು. ಆ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆಯಬೇಕೆಂಬ ಹಿನ್ನೆಲೆಯಲ್ಲಿ ನನ್ನ ಮೇಲಿನ ಅಭಿಮಾನಕ್ಕೆ ಇಂತಹ ಹರಕೆ ಹೊತ್ತು ತೀರಿಸುತ್ತಿರುವುದು ನಿಜವಾಗಿಯೂ ಸಂತಸದ ವಿಷಯ. ಹರಕೆ ಅಷ್ಟೇ ಅಲ್ಲ ನನ್ನ ಗೆಲುವಿಗಾಗಿ ಸ್ನೇಹಿತರಾದ ಅರುಣ್ ಮಾದಪ್ಪ ಮತ್ತು ಸಂತೋಷ್ ಇಬ್ಬರು ದಿನದ 24 ಗಂಟೆಯೂ ದುಡಿದಿದ್ದಾರೆ. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ಗೆಲುವಿಗಾಗಿ ನನ್ನ ಪರಿಶ್ರಮ 20 ಪರ್ಸೆಂಟ್ ಇದ್ದರೆ, ಉಳಿದ 80 ಪರ್ಸೆಂಟ್ ಪರಿಶ್ರಮವನ್ನು ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷ ಹಾಕಿದೆ. ಇದಕ್ಕೆ ನಾನು ಯಾವಾಗಲೂ ಋಣಿಯಾಗಿರುತ್ತೇನೆ. ನನ್ನ ಗೆಲುವಿಗಾಗಿ ಹರಕೆ ಹೊತ್ತು ತೀರಿಸುತ್ತಿರುವ ಇವರಿಗೆ ಮತ್ತು ಇವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಆಶಿಸಿದ್ದಾರೆ.

Karnataka assembly election results: ನ್ಯಾಯವಾದಿ, ವೈದ್ಯರು ಕೊಡಗಿನ ನೂತನ ಶಾಸಕರು

 ಇನ್ನು ಪಾದಯಾತ್ರೆಯ ಹರಕೆ ಹೊತ್ತು ತೀರಿಸುತ್ತಿರುವ ಸಂತೋಷ್ ಮತ್ತು ಅರುಣ್ ಮಾದಪ್ಪ ಅವರು ಮಾತನಾಡಿ ಮಂತರ್ ಗೌಡ ಅವರ ಗೆಲುವಿಗಾಗಿ ಮತ ನೀಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜಿಲ್ಲೆಯಲ್ಲಿ ಒಂದು ಬದಲಾವಣೆ ಬರಬೇಕಾಗಿತ್ತು. 20 ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯಲಿಲ್ಲ. ಹೀಗಾಗಿ ಬದಲಾವಣೆ ಎನ್ನುವುದು ಅತ್ಯಗತ್ಯವಾಗಿತ್ತು. ಹೀಗಾಗಿ ನಾವು ಅವರ ಗೆಲುವಿಗಾಗಿ ಕೆಲಸ ಮಾಡುವುದರ ಜೊತೆಗೆ ದೇವರ ಮೊರೆ ಹೋಗಿದ್ದೆವು. ಗೆದ್ದರೆ ಪಾದಯಾತ್ರೆ ಮಾಡಿ ಸನ್ನಿಧಿಗೆ ಬಂದು ನೂರೊಂದು ತೆಂಗಿನ ಕಾಯಿಗಳನ್ನು ಈಡುಗಾಯಿ ಅರ್ಪಿಸುವುದಾಗಿ ಹರಕೆ ಹೊತ್ತಿದ್ದೆವು. ಈಗ ಅವರು ಗೆದ್ದಿರುವುದರಿಂದ ಹರಕೆ ತೀರಿಸುತ್ತಿದ್ದೇವೆ ಎಂದಿದ್ದಾರೆ.

click me!