ಕಾಂಗ್ರೆಸ್ ಸರ್ಕಾರ ರಚನೆಯಾಯ್ತು; ಧಾರವಾಡ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗುತ್ತೆ?

By Kannadaprabha NewsFirst Published Jun 1, 2023, 10:30 AM IST
Highlights

ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಮಂತ್ರಿ ಮಂಡಳವೂ ರಚನೆಯಾಗಿದೆ. ಎಲ್ಲ ಮಂತ್ರಿಗಳಿಗೆ ಖಾತೆಗಳನ್ನು ಹಂಚಿಯೂ ಆಗಿದೆ. ಇದೀಗ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸಿಗುತ್ತದೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಜೂ.1) : ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಮಂತ್ರಿ ಮಂಡಳವೂ ರಚನೆಯಾಗಿದೆ. ಎಲ್ಲ ಮಂತ್ರಿಗಳಿಗೆ ಖಾತೆಗಳನ್ನು ಹಂಚಿಯೂ ಆಗಿದೆ. ಇದೀಗ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸಿಗುತ್ತದೆ ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಧಾರವಾಡ ಜಿಲ್ಲಾ ಉಸ್ತುವಾರಿ ಪಟ್ಟಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್‌(Minister santosh lad) ಅವರಿಗೆ ಸಿಗುತ್ತದೆಯೋ? ಬೆಳಗಾವಿ ಜಿಲ್ಲೆಯ ಲಕ್ಷ್ಮೇ ಹೆಬ್ಬಾಳಕರ್‌(Lakshmi hebbalkar) ಗೆ ಒಲಿಯುವುದೋ? ಎಂಬುದೀಗ ಚರ್ಚೆಗೆ ಗ್ರಾಸವಾಗಿದೆ.

ಹಿಂದೆ ಯಡಿಯೂರಪ್ಪ(BS Yadiyurappa) ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಆಗ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ್‌ ಅವರೇ ಉಸ್ತುವಾರಿಗಳಾಗಿದ್ದರು. ಮುಂದೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಬಂದಾಗ ಆಯಾ ಜಿಲ್ಲೆಗಳ ಶಾಸಕರಿದ್ದರೂ ಅವರನ್ನು ಬೇರೆ ಬೇರೆ ಜಿಲ್ಲೆಗಳ ಉಸ್ತುವಾರಿಗಳನ್ನಾಗಿ ಆ ಸರ್ಕಾರ ನೇಮಿಸಿತ್ತು. ಗುಜರಾತ್‌ ಹಾಗೂ ಉತ್ತರ ಪ್ರದೇಶದ ಮಾದರಿಯನ್ನು ಬಿಜೆಪಿ ಅನುಸರಿಸಿತ್ತು. ಇದರಿಂದಾಗಿ ಈ ಜಿಲ್ಲೆಯ ಶಂಕರ ಪಾಟೀಲ ಮುನೇನಕೊಪ್ಪ(Shankar patil munenakoppa) ರಾಯಚೂರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಕೊಪ್ಪಳ ಜಿಲ್ಲೆಯ ಹಾಲಪ್ಪ ಆಚಾರ್‌ ಧಾರವಾಡ ಜಿಲ್ಲೆಯ ಉಸ್ತುವಾರಿ ನಿಭಾಯಿಸಿದ್ದರು.

 

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ತ್ವರಿತ ಪರಿಹಾರ ನೀಡಿ: ಲಕ್ಷ್ಮೀ ಹೆಬ್ಬಾಳ್ಕರ್‌

ಈಗ ಹೇಗೆ?

ಇದೀಗ ಮುಂದಿನ ವರ್ಷವೇ ಲೋಕಸಭೆ ಚುನಾವಣೆ, ಹೀಗಾಗಿ ಅಳೆದು ತೂಗಿ ಪಕ್ಷಕ್ಕೆ ಲಾಭವಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಮಾಡಿ ಆ ಮೂಲಕ ಮತಗಳನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಲಿದೆ ಎಂದು ಹೇಳಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹೆಬ್ಬಾಳಕರ್‌ ಹಾಗೂ ಸತೀಶ ಜಾರಕಿಹೊಳಿ ಸಚಿವರಾಗಿದ್ದಾರೆ. ಅಲ್ಲಿನ ಉಸ್ತುವಾರಿ ಸತೀಶ ಜಾರಕಿಹೊಳಿ ಅವರಿಗೆ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಲಕ್ಷ್ಮೇ ಹೆಬ್ಬಾಳಕರ್‌ ಅವರಿಗೆ ಪಕ್ಕದ ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡಿದರೆ ಲಿಂಗಾಯತ ಸಮುದಾಯವೇ ನಿರ್ಣಾಯಕವಾಗಿರುವ ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೊಂಚ ಅನುಕೂಲವಾಗಬಹುದೆಂಬ ಲೆಕ್ಕಾಚಾರ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಬ್ಬಾಳಕರ್‌ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಿಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಾಠಾ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿನ ಸಂತೋಷ ಲಾಡ್‌ ಅವರನ್ನು ಅಲ್ಲಿಗೆ ಉಸ್ತುವಾರಿಯನ್ನಾಗಿ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಪಕ್ಷದ ಮುಖಂಡರದು. ಜತೆಗೆ ಲಾಡ್‌ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು ಆಗಿರುವುದರಿಂದ ಆ ಜಿಲ್ಲೆಗೆ ಕೊಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಲಾಡ್‌ ಗುರುತಿಸಿಕೊಂಡಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಪ್ತ ಬಳಗದಲ್ಲಿ ಹೆಬ್ಬಾಳ್ಕರ್‌ ಗುರುತಿಸಿಕೊಂಡಿದ್ದಾರೆ. ಆದರೆ ಯಾರು ಯಾವ ಮಟ್ಟದಲ್ಲಿ ಲಾಬಿ ನಡೆಸಿ ಧಾರವಾಡ ಜಿಲ್ಲಾ ಉಸ್ತುವಾರಿ ತರುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.

 

Karnataka cabinet: ಕಲಘಟಗಿ ಕ್ಷೇತ್ರಕ್ಕೆ ಸಂತೋಷ್ ತಂದ ಲಾಡ್ ಸಚಿವ ಸ್ಥಾನ!

ಸದ್ಯ ಧಾರವಾಡ ಉಸ್ತುವಾರಿ ರೇಸ್‌ನಲ್ಲಿ ಲಾಡ್‌ ಹಾಗೂ ಹೆಬ್ಬಾಳಕರ್‌ ಹೆಸರು ಚಾಲ್ತಿಯಲ್ಲಿವೆ. ಆದರೆ ಯಾರನ್ನೇ ಉಸ್ತುವಾರಿಗಳನ್ನಾಗಿ ಮಾಡಿದರೆ ಈ ಭಾಗದ ಹಿರಿಯ ನಾಯಕರೆನಿಸಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರ ಅಭಿಪ್ರಾಯ ಕೇಳಿಯೇ ಮುಂದಿನ ಹೆಜ್ಜೆ ಸರ್ಕಾರ ಇಡುವುದು ಗ್ಯಾರಂಟಿ.

click me!