
ಬೆಂಗಳೂರು (.18): ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಭಟ್ಕಳ ಶಾಸಕ, ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಕಾಳ ವೈದ್ಯ ಪರವಾಗಿ ಸಿಎಂ ಡಿ ಕೆ ಶಿವಕುಮಾರ್ ಮಂಡಿಸಿದ ಪ್ರಸ್ತಾಪಕ್ಕೆ ಇಡೀ ಸದನ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ಸಭಾಧ್ಯಕ್ಷ ಜಿ ಎಸ್ ಪಾಟೀಲ್ ಅಧಿಕೃತವಾಗಿ ಮಂಕಾಳ ಸುಬ್ಬಾ ವೈದ್ಯ ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು. ನೂತನ ಉಪಸಭಾಧ್ಯಕ್ಷ ವೈದ್ಯ ಕುರಿತು ಸಿಎಂ ಡಿಕೆಶಿ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅಭಿನಂದನೆ ಸಲ್ಲಿಸಿದರು.
ಸದನದಲ್ಲಿ ಬಿಜೆಪಿ ಶಾಸಕರಾದ ದಿನಕರ್ ಶೆಟ್ಟಿ, ಹರೀಶ್ ಪೂಂಜಾ, ಯಶಪಾಲ ಸುವರ್ಣ, ಆರ್ ವಿ ದೇಶಪಾಂಡೆ, ಎಚ್ ಡಿ ತಮ್ಮಯ್ಯ, ಅರವಿಂದ ಬೆಲ್ಲದ್ ಅವರು ವೈದ್ಯ ಅವರ ರಾಜಕೀಯ ಹಾದಿಯ ಕುರಿತು ಸದನಕ್ಕೆ ವಿವರಿಸಿದರು. ನಂತರ ಮಾತನಾಡಿದ ನೂತನ ಉಪಸಭಾಧ್ಯಕ್ಷ ಮಂಕಾಳ ವೈದ್ಯ, ಹೊಸ ಜವಾಬ್ದಾರಿ ನೀಡಿದಕ್ಕೆ ಕೃತಜ್ಞತೆ ಸಲ್ಲಿದರು. 'ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ..ನಾನು ಬೆಂಗಳೂರಿಗೆ ಬಂದು ಅನೇಕ ಕೆಲಸ ಮಾಡಿದ್ದೇನೆ. ಹೋಟೆಲ್ ನಲ್ಲಿ ಕೆಲಸ ಮಾಡಿದ್ದೇನೆ, ನಂತರ ಊರಿಗೆ ಹೋಗಿ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದೆ' ಎಂದರು.
ನಾನು ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದೆ.ಆಗ ಎಲ್ಲರೂ ನಾಮಪತ್ರ ವಾಪಸ್ ತಗೊಳಿ ಅಂತ ಒತ್ತಡ ಹಾಕಿದ್ದರು.ನಾನು ಇಡಗುಂಜಿ ಗಣೇಶನನ್ನ ನಂಬಿದವನು. ಅವನನ್ನು ನಂಬಿ ಕೆಲಸ ಮಾಡುವವನು. ಅಲ್ಲಿ ಭೇಟಿ ಕೊಟ್ಟು ನಾಮಿನೇಷನ್ ಹಾಕಿದೆ. 180 ವೋಟಿನಿಂದ ನಾನು ಗೆದ್ದಿದ್ದೆ. ಸೋತೆ ಅಂತ ಹಲವರು ಹೇಳಿದರು. ನಾನು ಮನೆಗೆ ಹೊರಟಿದ್ದೆ, ಆಗ ನನಗೆ 180 ವೋಟಿನಿಂದ ಗೆದ್ದಿದ್ದು ಹೇಳಿದರು.ಮತ್ತೆ ಹೋಗಿ ಪ್ರಮಾಣ ಪತ್ರ ತಗೊಂಡೆ ಎಂದರು.
ಆರ್.ವಿ ದೇಶಪಾಂಡೆ ಅವರು ಪಕ್ಷಕ್ಕೆ ಸೇರಿಸಿಕೊಂಡರು.ನನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮಾಡಿದ್ದರು. ಬಡವರಿಗೆ ಸಹಾಯ ಮಾಡುವುದು ನನ್ನ ಕೆಲಸ. ಶಾಲೆ ಕಟ್ಟಿದ್ದೇನೆ, ಬಡವರಿಗೆ ಸಹಾಯ ಮಾಡಿದ್ದೇನೆ.ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದ ಹಾಗೆ ಮೀಸಲಾತಿ ಬಂತು. ಇದ್ದ ಒಂದು ಜಿಲ್ಲಾಪಂಚಾಯತ್ ಜಾಲಿ ಜಿ.ಪಂ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ರೂ ಕೊಡಲಿಲ್ಲ. ಅದಕ್ಕೆ ಎರಡನೆಯ ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದೆ. ಬಿಜೆಪಿ ಕಾಂಗ್ರೆಸ್ ಸೋಲಿಸಿ ಮತ್ತೇ ಸದಸ್ಯ ಆದೆ.ದೇಶಪಾಂಡೆ ಅವರಲ್ಲಿ ಟಿಕೆಟ್ ಕೇಳಿಕೊಂಡೆ. ಜಾಲಿ ಕ್ಷೇತ್ರ ಜನರಲ್ ಇದೆ ಆಗಲ್ಲ ಅಂದ್ರು. ಆದರೂ ಪಕ್ಷೇತರನಾಗಿ 1800 ಮತಗಳಿಂದ ಮತ್ತೆ ಜಿಲ್ಲಾ ಪಂಚಾಯತಿ ಗೆದ್ದೆ ಎಂದು ಹೇಳಿದರು.
2013ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್ ಕೊಡಲಿಲ್ಲ. ಆಗ ಟಿಕೆಟ್ ಕೇಳಿದೆ ಸಿಗಲಿಲ್ಲ. ಆಗಲೂ ಬೇರೆ ಪಕ್ಷಕ್ಕೆ ಹೋಗದೆ ಪಕ್ಷೇತರ ಆಗಿ ನಿಂತೆ ಗೆದ್ದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತು 5000 ಮತಗಳ ಅಂತರದಿಂದ ಸೋತೆ. ಆಗ ಡಿ ಕೆ ಶಿವಕುಮಾರ್ ಅವರು, ನೀನು ಕ್ಷೇತ್ರದಲ್ಲಿ ಕೆಲಸ ಮಾಡು, ಬಿ ಫಾರಂ ಚಿಂತೆ ಬೇಡ ಅಂತ ಹೇಳಿ ಧೈರ್ಯ ಹೇಳಿದ್ರು. 2023ರಲ್ಲಿ ಬಿ ಫಾರಂ ಮನೆಗೆ ಕಳುಹಿಸಿದ್ದರು. ಬೇರೆ ರೀತಿಯ ಸಹಾಯ ಸಹ ಮಾಡಿದ್ದರು. ಚುನಾವಣೆಯಲ್ಲಿ 30 ಸಾವಿರ ಅಂತರದಿಂದ ಗೆದ್ದೆ, ಮೂರು ವರ್ಷ ಮಂತ್ರಿ ಆಗಿದ್ದೆ.ಆದರೆ ನನ್ನ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಿಲ್ಲ. ಅದಕ್ಕೆಬೇರೆ ಬೇರೆ ಕಾರಣ ಇದೆ. ಅದನ್ನು ಸದನದಲ್ಲಿ ಹೇಳಲಾರೆ ಅಂತ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.
ಮೊನ್ನೆ ಕೂಡ ಸಚಿವರಾಗಿದ್ದೀಯಾ ಅಂತ ಕರೆ ಮಾಡಿದ್ರು. ಬಳಿಕ ಏನೋ ವ್ಯತ್ಯಾಸ ಆಯ್ತು ಅಂದ್ರು. ನನ್ನ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡರು. ನಾನು ಏನೂ ಮಾತನಾಡಲಿಲ್ಲ ಎಂದು ವೈದ್ಯ ಹೇಳಿದರು.
ಏನೂ ಆಸೆ ಇಲ್ಲದ ನನಗೆ, ನನ್ನ ಕ್ಷೇತ್ರದ ಜನ ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದ್ದಾರೆ.ಈಗ ಉಪಾಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ.ಈ ಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಸಹಾಯ ಆಗುವ ಕೆಲಸ ಮಾಡ್ತೇನೆ. ನನ್ನ ಬಗ್ಗೆ ಬಹಳ ಶಾಸಕರು ಹತ್ತಿರದಿಂದ ತಿಳಿದುಕೊಂಡು ಮಾತನಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ತಿಳಿಸ್ತೇನೆ. ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ ಅಂತ ಭಾವುಕರಾಗಿ ಸದನದಲ್ಲಿ ಮಂಕಾಳ ವೈದ್ಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.