* ಎಲೆಕ್ಷನ್ ಒಂದು ವರ್ಷ ಬಾಕಿ ಇರುವಾಗಲೇ ಗರಿಗೆದರಿದ ರಾಜ್ಯ ರಾಜಕಾರಣ
* ಮಂಡ್ಯದಲ್ಲಿ ಬಿಜೆಪಿ ಬಿಗ್ ಆಪರೇಷನ್
* ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆಪ್ತ ಬಿಜೆಪಿ ಸೇರ್ಪಡೆ ಖಚಿತ
ಬೆಂಗಳೂರು, (ಮೇ.06): ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಯುವ ನಾಯಕರನ್ನ ಪಕ್ಷಕ್ಕೆ ಸೆಳೆಯುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೌದು...ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಅದಕ್ಕಾಗಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಆಪರಮೇಷನ್‌ಗೆ ಇಳಿದೆ.
ಅದರಲ್ಲೂ ಸುಮಲತಾ ಆಪ್ತ, ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಇಂಡುವಾಳು ಸಚ್ಚಿದಾನಂದ ಅವರು ಬಿಜೆಪಿ ಸೇರುವುದು ಪಕ್ಕಾ ಆಗಿದೆ. ಇದನ್ನು ಸ್ವತಃ ಕಂದಾಯ ಸಚಿವ ಆರ್. ಅಶೋಕ್ ಬಹಿರಂಗಪಡಿಸಿದ್ದಾರೆ.
ಹೌದು...ಬೆಂಗಳೂರಿನಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲೂರು ಮಂಜುನಾಥ್ ಬಿಜೆಪಿ ಸೇರುವ ಬಗ್ಗೆ ತೀರ್ಮಾನ ಆಗಿದೆ, ನಾಳೆ(ಶನಿವಾರ) ಸೇರ್ಪಡೆ ಆಗುತ್ತಾರೆ ಎಂದರು.
ಬಿಜೆಪಿ ಸೇರ್ತಾರಾ ಮಂಡ್ಯ ಸಂಸದೆ? ಸುಮಲತಾ ಅಂಬರೀಶ್ ಫಸ್ಟ್ ರಿಯಾಕ್ಷನ್
ಇನ್ನು ಯುವ ನಾಯಕರು ಮಾಜಿ ಶಾಸಕರು ಅವರೆಲ್ಲಾ ಬಿಜೆಪಿ ಸೇರ್ಪಡೆ ಆಗುತ್ತಾರೆ. ಹೈಕಮಾಂಡ್ ಯಾರಿಗೆಲ್ಲಾ ಒಪ್ಪಿಗೆ ಕೊಟ್ಟಿದೆಯೋ ಅವರೆಲ್ಲಾ ಸೇರುತ್ತಾರೆ. ವರ್ತೂರು ಪ್ರಕಾಶ್ ಕೂಡಾ ಬಿಜೆಪಿಗೆ ಬರುತ್ತಾರೆ. ಇನ್ನು , ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಇಂಡುವಾಳು ಸಚ್ಚಿದಾನಂದ ಅವರು ಬಿಪಿಗೆ ಸೇರ್ತರೆ ಎಂದು ಸ್ಪಷ್ಟಪಡಿಸಿದ ಅಶೋಕ್, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಕಾದು ನೋಡಿ ಎಂದರು.
ಇನ್ನು ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ರಾಜ್ಯದ ಎಲ್ಲಾ ಭಾಗದಿಂದಲೂ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಬ್ಯಾಚ್ ವೈಸ್, ಪಕ್ಷ ಸೇರಿಸುವ ಪ್ರಕ್ರಿಯೆ ಆಗುತ್ತದೆ. ಬಹಳ ದೊಡ್ಡ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪಕ್ಷಕ್ಕೆ ಒಲವು ಇದೆ. ಮಂಡ್ಯ ಜಿಲ್ಲೆಯಲ್ಲಿ ಹೊಸ ಯುವ ನಾಯಕತ್ವ ಹೊರ ಹೊಮ್ಮುವ ಲಕ್ಷಣಗಳು ಕಾಣುತ್ತಿದೆ. ಬಿಜೆಪಿ ಪರವಾದ ಅಲೆ ಮುಂದೆ ಕಾಣಲಿದೆ. ಯಾರು ನಮ್ಮ ಪಕ್ಷದ ಪರ ಒಲವು ತೋರಿಸಿದ್ದಾರೆ ಅವರನ್ನು ಪಕ್ಷಕ್ಕೆ ಕರೆತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೆಲ ದಿನಗಳಿಂದ ಇಂಡುವಾಳು ಸಚ್ಚಿದಾನಂದ ಬಿಜೆಪಿ ಸೇರುತ್ತಾರೆ ಎಂಬ ಮಾತು ಚರ್ಚೆಯಲ್ಲಿತ್ತು. ಆದರೆ ಈಗ ಈ ಮಾತಿಗೆ ಪುಷ್ಠಿ ಎನ್ನುವಂತೆ ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಶ್ರೀರಂಗಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿದಾನಂದ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಸಚ್ಚಿದಾನಂದ ಹುಟ್ಟುಹಬ್ಬ, ಶುಭಕೋರಿದ್ದ ಬಿಜೆಪಿ ನಾಯಕರು:
ಇತ್ತೀಚೆಗೆ ಇಂಡುವಾಳು ಸಚ್ಚಿದಾನಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಂಡುವಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹಲವಾರು ಬಿಜೆಪಿ ನಾಯಕರ ಆಗಮಿಸಿ ಶುಭಕೋರಿದ್ದಾರೆ. ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಸಚ್ಚಿದಾನಂದ ಮನೆಗೆ ಭೇಟಿ ನೀಡಿದ್ದರು. ಸಚ್ಚಿ ಬಿಜೆಪಿ ಸೇರ್ಪಡೆ ಚರ್ಚೆಗೂ, ಸಚ್ಚಿದಾನಂದ ಮನೆಗೆ ಬಿಜೆಪಿ ನಾಯಕರ ಭೇಟಿಗೂ ಸಂಬಂಧ ಇರುವ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿವೆ.
ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು:
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದ ಸಂಸದೆ ಸುಮಲತಾ ಯಾವ ಪಕ್ಷ ಸೇರುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ದಳಪತಿಗಳ ವಿರುದ್ಧವೇ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿರುವುದರಿಂದ ಸದ್ಯ ಸುಮಲತಾ ಕಾಂಗ್ರೆಸ್ ಅಥವಾ ಬಿಜೆಪಿ ಸೇರಬಹುದು ಎನ್ನಲಾಗ್ತಿದೆ. ಆದರೆ ಸ್ವತಃ ಕಾಂಗ್ರೆಸ್ ನಾಯಕರಿಗೆ ಸುಮಲತಾ ಪಕ್ಷ ಸೇರ್ಪಡೆ ಇಷ್ಟವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ಸಂಸದೆ ಸುಮಲತಾ ಮುಂದಿರುವ ಏಕೈಕ ಆಯ್ಕೆ ಬಿಜೆಪಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಎಲ್ಲಿಯೂ ತುಟಿಬಿಚ್ಚದ ಸಂಸದೆ ನಾನು ಯಾವ ಪಕ್ಷ ಸೇರಬೇಕು ಎಂಬುದನ್ನ ಜನರೇ ತೀರ್ಮಾನ ಮಾಡ್ತಾರೆ ಎಂದಿದ್ದಾರೆ. ಆದರೆ ಸುಮಲತಾ ಬೆಂಬಲಿಗರು ಮಾತ್ರ ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿದ್ದು, ಬೆಂಬಲಿಗರ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಸುಳಿವು ನೀಡ್ತಿದ್ದಾರ ಎಂಬ ಅನುಮಾನ ಮೂಡಿವೆ.