* ಬಿಜೆಪಿ ಶಾಸಕ ಪ್ರೀತಂಗೌಡಗೆ ಪ್ರತಿಸವಾಲು ಹಾಕಿದ ಕುಮಾರಸ್ವಾಮಿ
* ಹಾಸನ ವಿಧಾನಸಭಾ ಚುನಾವಣೆಯನ್ನ ಈ ಬಾರಿ ನಾನೇ ಮುಂದಾಳತ್ವ ವಹಿಸಿಕೊಳ್ಳುತ್ತೇನೆ ಎಂದ ಎಚ್‌ಡಿಕೆ
* ಈ ಸಲ ಹಾಸನ ರಾಜಕೀಯ ರಣಾಂಗಣ ಗ್ಯಾರಂಟಿ
ಹಾಸನ, (ಮೇ.06): ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹಾಗೂ ಜೆಡಿಎಸ್ ನಡುವೆ ಮತ್ತೆ ರಾಜಕೀಯ ಕಿತ್ತಾಟ ಶುರುವಾಗಿದೆ. ಎಚ್‌ಡಿ ರೇವಣ್ಣಗೆ ಪ್ರೀತಂಗೌಡಗೆ ಹಾಕಿದ್ದ ಸವಾಲಿಗೆ ಎಚ್‌ಡಿ ಕುಮಾರಸ್ವಾಮಿ ಪ್ರತಿಸವಾಲು ಹಾಕಿದ್ದಾರೆ.
ಹೌದು...ತಾಕತ್ತಿದ್ದರೆ ರೇವಣ್ಣ ಹಾಸನಕ್ಕೆ ಬಂದು ನನ್ನ ಎದುರು ನಿಲ್ಲಲಿ ಎಂದು ಪ್ರೀತಂಗೌಡ ಸವಾಲು ಹಾಕಿದ್ದರು. ಇದಕ್ಕೆ ಇದೀಗ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸಮಾನ್ಯ ಕಾರ್ಯಕರ್ತನನ್ನ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಪ್ರೀತಂಗೌಡಗೆ ಟಾಂಗ್ ಕೊಟ್ಟಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಕುಟುಂಬ ಸದಸ್ಯರು ಯಾರೂ ಬೇಡ. ಹಾಸನದಲ್ಲಿ ಓರ್ವ ಸಮಾನ್ಯ ಕಾರ್ಯಕರ್ತನನ್ನ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಪ್ರೀತಂಗೌಡಗೆ ಸವಾಲ್ ಹಾಕಿದರು.
ಸರ್ಕಾರದ ಸ್ಪಷ್ಟ ಆದೇಶ, ಮೇಲುಗೈ ಸಾಧಿಸಿದ ಪ್ರೀತಂ ಗೌಡ, ರೇವಣ್ಣಗೆ ಹಿನ್ನಡೆ
ಇನ್ನು ಹಾಸನ ವಿಧಾನಸಭಾ ಚುನಾವಣೆಯನ್ನ ಈ ಬಾರಿ ನಾನೇ ಮುಂದಾಳತ್ವ ವಹಿಸಿಕೊಳ್ಳುತ್ತೇನೆ. ಅಲ್ಲಿನ ಶಾಸಕರಿಗೆ ಹಣದ ಅಹಾಂಕರ ಮದ, 50 ಸಾವಿರಕ್ಕಿಂತ ಕಡಿಮೆ ಮತ ಬಂದರೆ ರಾಜೀನಾಮೆ ನೀಡುತ್ತೇನೆ ಎಂದರು.
ಪಾಪ ಅವರು ಆ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಎಂತಂತವರನ್ನು ನೋಡಿದ್ದೇವೆ. ಇಂತಹ ಸವಾಲುಗಳನ್ನು ನಮ್ಮ ಕುಟುಂಬ ಎದುರಿಸಿದೆ ಚುನಾವಣೆ ಸಮಯದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಪ್ರೀತಂಗೌಡ ಹೇಳಿದ್ದೇನು?
ನಾನು ಇಂದೇ ಹೇಳುತ್ತಿದ್ದೇನೆ ಬರೆದಿಟ್ಟುಕೊಳ್ಳಿ, ನನ್ನ ವಿರುದ್ಧ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಹಾಸನ ವಿಧಾನಸಭಾ ಕ್ಷೇತ್ರದಿಂದ (Hassan Assembly Constituency) ಸ್ಪರ್ಧೆ ಮಾಡಿದ್ದೇ ಆದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ನಾನು ಗೆಲ್ಲುತ್ತೇನೆ. ರೇವಣ್ಣ ಅವರಿಗೆ ತಾಕತ್ತಿದ್ದರೆ ಬಂದು ನಿಲ್ಲಲಿ ಎಂದು ಶಾಸಕ ಪ್ರೀತಮ್ ಜೆ. ಗೌಡ (Preetham J Gowda) ಅವರು ಸವಾಲೆಸೆದಿದ್ದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದ ಅವರು, ನನ್ನ ವಿರುದ್ಧ ರೇವಣ್ಣ ನಿಂತರೆ, 50 ಸಾವಿರಕ್ಕಿಂತ ಒಂದು ಮತ ಕಡಿಮೆ ನನಗೆ ಬಂದರೂ ಅಂದೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ರೀ ಎಲೆಕ್ಷನ್‌ಗೆ ಹೋಗುತ್ತೇನೆ ಎಂದಿದ್ದರು.
ಪ್ರೀತಮ್ ಗೌಡ ವಿರುದ್ಧ ಹಾಸನದಿಂದ ಸ್ಪರ್ಧಿಸುತ್ತೇನೆ ಎಂದು ತಾಕತ್ತಿದ್ದರೆ ನೀವು ಘೋಷಣೆ ಮಾಡಿ ರೇವಣ್ಣಗೆ ಸವಾಲು ಹಾಕಿದ್ದರು. ಹಾಸನದಲ್ಲಿ ಬಂದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇಲ್ಲ. ಆದ್ದರಿಂದ ಹತಾಶರಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಅಭಿವೃದ್ಧಿಗೆ ತೊಡಕು ಉಂಟುಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನಾನು ದಾರಿಯಲ್ಲಿ ಹೋಗುವ ದಾಸಯ್ಯ ಅಲ್ಲ. ರೇವಣ್ಣ ಅವರು ಮಕ್ಕಳಂತೆ ಮಾತನಾಡುವುದನ್ನು ಬಿಟ್ಟು ಅವರ ಹುದ್ದೆಗೆ ಗಂಭೀರವಾಗಿ ನಡೆದುಕೊಳ್ಳಬೇಕು. ಡೀಸಿ ಆಫೀಸಿನಲ್ಲಿ ಅಧಿಕಾರಿಗಳನ್ನು ಬಯ್ಯುವ ಇವರು ನಂತರ ಕ್ಷಮೆ ಕೇಳುತ್ತಾರೆ ಎಂದು ವ್ಯಂಗ್ಯವಾಡಿದ್ದರು.