ಸುಮಲತಾ ಪಕ್ಷ ಸೇರ್ಪಡೆ ಸದ್ಯಕ್ಕಿಲ್ಲ: 2023 ಚುನಾವಣೆವರೆಗೆ ಕಾದುನೋಡುವ ಸಾಧ್ಯತೆ

By Govindaraj S  |  First Published Sep 8, 2022, 2:16 PM IST

ಸಂಸದೆ ಸುಮಲತಾ ಪಕ್ಷ ಸೇರ್ಪಡೆ ವಿಚಾರವಾಗಿ ದಿನಕ್ಕೊಂದು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅವರು ಬಿಜೆಪಿ ಸೇರುವರೋ ಅಥವಾ ಕಾಂಗ್ರೆಸ್‌ ಕೈ ಹಿಡಿಯುವರೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. 


ಮಂಡ್ಯ ಮಂಜುನಾಥ

ಮಂಡ್ಯ (ಸೆ.08): ಸಂಸದೆ ಸುಮಲತಾ ಪಕ್ಷ ಸೇರ್ಪಡೆ ವಿಚಾರವಾಗಿ ದಿನಕ್ಕೊಂದು ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅವರು ಬಿಜೆಪಿ ಸೇರುವರೋ ಅಥವಾ ಕಾಂಗ್ರೆಸ್‌ ಕೈ ಹಿಡಿಯುವರೋ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದಾವುದರ ಬಗ್ಗೆಯೂ ಸಂಸದೆ ಸುಮಲತಾ ಅಂಬರೀಶ್‌ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. 2023ರ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಆಧರಿಸಿ ನಂತರ ಸೂಕ್ತ ನಿರ್ಧಾರ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Tap to resize

Latest Videos

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಸೆಲೆಬ್ರಿಟಿ ಎಂಬ ಕಾರಣಕ್ಕೆ ಉಭಯ ಪಕ್ಷಗಳಿಗೂ ಸುಮಲತಾ ಅಗತ್ಯವೆನಿಸಿರುವ ನಾಯಕಿಯಾಗಿದ್ದಾರೆ. ಎರಡೂ ಪಕ್ಷದವರಿಂದಲೂ ಸುಮಲತಾಗೆ ಪಕ್ಷ ಸೇರುವಂತೆ ಆಹ್ವಾನವಿದೆ. ಆದರೆ, ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮುಂದಿನ ರಾಜಕೀಯ ಪರಿಸ್ಥಿತಿ ಏನಾಗಲಿದೆ ಎನ್ನುವುದು ಸುಲಭವಾಗಿ ಲೆಕ್ಕಕ್ಕೆ ಸಿಗುತ್ತಿಲ್ಲ. ರಾಜ್ಯದ ಜನರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರ ಪರ ಒಲವು ತೋರಲಿದ್ದಾರೆ ಎಂಬುದೂ ಅರ್ಥವಾಗುತ್ತಿಲ್ಲ. ಹೀಗಾಗಿ ಪಕ್ಷ ಸೇರ್ಪಡೆ ವಿಚಾರದಲ್ಲಿ ಸುಮಲತಾ ಅಂಬರೀಶ್‌ ಅವರೇ ಗೊಂದಲದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Heavy Rain: ಮಂಡ್ಯದಲ್ಲಿ ವರುಣಾರ್ಭಟಕ್ಕೆ ಹಳ್ಳಿ ರಸ್ತೆ ಹಾಳು: ಕಬ್ಬು ಸಾಗಣೆಗೆ ಸಂಕಷ್ಟ

ಪಕ್ಷ ಸೇರ್ಪಡೆ ಅನಿವಾರ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಇತಿಹಾಸ. ಈಗ ಅಂತಹ ವಾತಾವರಣ ಜಿಲ್ಲೆಯೊಳಗೆ ಇಲ್ಲ. ಹಾಗಾಗಿ ಸುಮಲತಾ ಯಾವುದಾದರೂ ಪಕ್ಷ ಸೇರುವುದು ಅಗತ್ಯ ಮತ್ತು ಅನಿವಾರ್ಯ. ಹಾಗೆ ನೋಡಿದರೆ ಸುಮಲತಾ ಪಕ್ಷ ಸೇರುವುದಕ್ಕೆ ಇರುವುದು ಎರಡೇ ಅವಕಾಶ. ಒಂದು ಕಾಂಗ್ರೆಸ್‌. ಮತ್ತೊಂದು ಬಿಜೆಪಿ. ಇವೆರಡರಲ್ಲಿ ತಮ್ಮ ರಾಜಕೀಯ ಬೆಳವಣಿಗೆಗೆ ಸೂಕ್ತವಾದ ಪಕ್ಷ ಯಾವುದು ಎನ್ನುವುದು ಅವರನ್ನು ಗೊಂದಲಕ್ಕೆ ಸಿಲುಕಿಸಿದೆ. ಈಗಲೇ ಯಾವುದಾದರೂ ಒಂದು ಪಕ್ಷ ಸೇರುವ ನಿರ್ಧಾರ ಮಾಡಿದರೆ ಆ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದೇ ಹೋದರೆ ತಮಗೆ ಜಿಲ್ಲೆಯೊಳಗೆ ರಾಜಕೀಯ ಹಿನ್ನಡೆ ಉಂಟಾಗಬಹುದೆಂಬ ಭಯ ಅವರನ್ನು ಕಾಡುತ್ತಿದೆ.

ಲೆಕ್ಕಾಚಾರಕ್ಕೆ ಸಿಗುತ್ತಿಲ್ಲ: ಮೋದಿ ಹವಾ ದೇಶದಲ್ಲಿ ಇರುವಂತೆ ಕಂಡುಬಂದರೂ ರಾಜ್ಯದೊಳಗೆ ಬಿಜೆಪಿ ಸರ್ಕಾರದ ಬಗ್ಗೆ ಜನರಿಗೆ ಅಷ್ಟೊಂದು ಒಲವಿಲ್ಲವೆಂಬ ಮಾತುಗಳು ವ್ಯಕ್ತವಾಗುತ್ತಿವೆ. ಅದೇ ರೀತಿ ಕಾಂಗ್ರೆಸ್‌ನೊಳಗೆ ಮುಖ್ಯಮಂತ್ರಿ ಗಾದಿಗೆ ನಾಯಕರು ಪೈಪೋಟಿಗೆ ಬಿದ್ದು ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ. ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮಗಳೂ ಕಾಂಗ್ರೆಸ್‌ ಪಾಳಯದಲ್ಲಿ ಕಂಡುಬರುತ್ತಿಲ್ಲ. ಈ ನಡುವೆ ಯಾವ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆಯಬಹುದೆಂಬ ಲೆಕ್ಕಾಚಾರ ಅಂದಾಜಿಗೂ ಸಿಗುತ್ತಿಲ್ಲ. ಹಾಗಾಗಿ ಸದ್ಯಕ್ಕೆ ಪಕ್ಷ ಸೇರ್ಪಡೆ ನಿರ್ಧಾರದಿಂದ ದೂರ ಉಳಿಯುವುದೇ ಲೇಸು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಯಾವುದೂ ಖಚಿತತೆ ಇಲ್ಲ: ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲವರ್ಧನೆಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮಂಡ್ಯಕ್ಕೆ ಕರೆತರುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಚುನಾವಣೆ ಸಮೀಪಿಸುವ ಹೊತ್ತಿನಲ್ಲಿ ಮೋದಿ ಅವರನ್ನು ಕರೆತರಬೇಕೆಂಬ ಚಿಂತನೆಯೂ ನಡೆದಿದೆ. ಆ ಸಮಯಕ್ಕೆ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆಯಾಗುವರೆಂದು ಸ್ಥಳೀಯ ಬಿಜೆಪಿ ಮುಖಂಡರು-ಕಾರ್ಯಕರ್ತರು ಹೇಳುತ್ತಿದ್ದಾರೆಯಾದರೂ ಇದಾವುದರ ಬಗ್ಗೆಯೂ ಖಚಿತತೆ ಇಲ್ಲ.

ಆತುರದ ನಿರ್ಧಾರವಿಲ್ಲ: ಸುಮಲತಾ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದೊಳಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪಕ್ಷ ಸೇರ್ಪಡೆ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳದೆ, ನಿರ್ದಿಷ್ಟಪಕ್ಷದೊಂದಿಗೆ ಹೆಚ್ಚು ಗುರುತಿಸಿಕೊಳ್ಳುವ, ತಮ್ಮ ನಡವಳಿಕೆಯಿಂದಲೇ ಇಂತಹ ಪಕ್ಷವನ್ನು ಸೇರಲಿದ್ದಾರೆಂಬ ಸಣ್ಣ ಸುಳಿವೂ ಸಿಗದ ರೀತಿಯಲ್ಲಿ ಎಚ್ಚರಿಕೆಯಿಂದ ಹೆಜ್ಜೆಯನ್ನಿಡುತ್ತಿದ್ದಾರೆ. ಯಾವುದೇ ಪಕ್ಷದ ಪರವಾಗಿ ವಕಾಲತ್ತನ್ನು ವಹಿಸದೆ ಎರಡೂ ಪಕ್ಷಗಳೊಂದಿಗೆ ಸಮಾನ ಅಂತರ ಕಾಯ್ದುಕೊಂಡು ಹೋಗುತ್ತಿರುವುದರಿಂದ ಅವರ ರಾಜಕೀಯ ನಡೆ ಗ್ರಹಿಕೆಗೆ ಸಿಗದಂತಾಗಿದೆ.

ಲೋಕಸಭಾ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸುಮಲತಾ ಅವರಿಗೆ ಪಕ್ಷದ ಬಲ ಬೇಕೇ ಬೇಕು. ಹಾಗಾಗಿ 2023ರ ವಿಧಾನಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು. ಯಾವ ಪಕ್ಷದ ಪರವಾಗಿ ಜನಾಭಿಪ್ರಾಯ ವ್ಯಕ್ತವಾಗಬಹುದು ಎನ್ನುವುದನ್ನು ಅವಲೋಕಿಸಿ ಸುಮಲತಾ ಪಕ್ಷ ಸೇರ್ಪಡೆ ನಿರ್ಧಾರ ಕೈಗೊಳ್ಳಬಹುದು ಎಂದು ಆಪ್ತ ಮೂಲಗಳಿಂದ ಕೇಳಿಬರುತ್ತಿರುವ ಮಾತಾಗಿದೆ.

ಸುಮಲತಾ ಬಗ್ಗೆ ಕಾಂಗ್ರೆಸ್‌-ಬಿಜೆಪಿಯೊಳಗೆ ಅಸಮಾಧಾನ: ಸಂಸದೆ ಸುಮಲತಾ ಅಂಬರೀಶ್‌ ಪಕ್ಷ ಸೇರ್ಪಡೆ ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ಸ್ಥಳೀಯವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯೊಳಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್‌-ಬಿಜೆಪಿ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಸುಮಲತಾಗೆ ಬೆಂಬಲ ವ್ಯಕ್ತಪಡಿಸಿ ಗೆಲುವಿಗೆ ನೆರವಾದರು. ಆನಂತರದಲ್ಲಿ ಸ್ಥಳೀಯವಾಗಿ ನಡೆದ ಚುನಾವಣೆಗಳಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರ ಪರವಾಗಿ ಪ್ರಚಾರವನ್ನೂ ನಡೆಸದೆ, ಬೆಂಬಲವನ್ನೂ ವ್ಯಕ್ತಪಡಿಸದೆ ತಟಸ್ಥ ಧೋರಣೆ ಅನುಸರಿಸಿದ್ದರ ಬಗ್ಗೆ ಎರಡೂ ಪಕ್ಷದ ನಾಯಕರು-ಕಾರ್ಯಕರ್ತರಲ್ಲಿ ಬೇಸರವಿದೆ.

Mandya: ಪತಿಯ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಪ್ರಕರಣ: ಕಾಲಿನ ಭಾಗ ವಾಪಸ್‌ ಪಡೆದ ವೈದ್ಯರು

ಚುನಾವಣೆಯಾಗಿ ಮೂರೂವರೆ ವರ್ಷಗಳಾಗಿದೆ. ಇಂದಿಗೂ ಪಕ್ಷ ಸೇರ್ಪಡೆ ವಿಚಾರದಲ್ಲಿ ದೃಢ ನಿರ್ಧಾರ ಮಾಡದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ತಟಸ್ಥ ನಿಲುವನ್ನು ಅನುಸರಿಸಿದರೆ 2024ರ ಲೋಕಸಭಾ ಚುನಾವಣೆ ವೇಳೆ ಇವರು ಯಾವುದಾದರೂ ಪಕ್ಷ ಸೇರಿದರೆ ಆಗ ಎಲ್ಲರೂ ಸೇರಿ ಇವರ ಗೆಲುವಿಗೆ ಶ್ರಮಿಸಬೇಕೆ. ನಾವು ಚುನಾವಣೆ ಎದುರಿಸುವಾಗ ಬೆಂಬಲಕ್ಕೆ ನಿಲ್ಲದವರಿಗೆ ಅವರ ಚುನಾವಣೆಯಲ್ಲಿ ನಾವೇಕೆ ಬೆಂಬಲ ನೀಡಬೇಕು. ಗೆಲುವಿಗೆ ದುಡಿಯಬೇಕೆಂಬ ಮಾತುಗಳು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಕೇಳಿಬರುತ್ತಿದೆ.

ಸುಮಲತಾ ಅವರು ಚುನಾವಣೆಯಲ್ಲಿ ಗೆಲುವನ್ನು ಎದುರುನೋಡುವಂತೆಯೇ ನಾವು ಚುನಾವಣೆಗೆ ಸ್ಪರ್ಧಿಸಿದ ಸಮಯದಲ್ಲಿ ಗೆಲುವನ್ನು ಎದುರುನೋಡುತ್ತಿರುತ್ತೇವೆ. ಆ ಸಮಯದಲ್ಲಿ ನಮಗೆ ಬೆಂಬಲ ನೀಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಗೆಲುವಿನ ಭರವಸೆ ಮೂಡುತ್ತದೆ. ಆ ಸಮಯದಲ್ಲಿ ತಟಸ್ಥರಾಗಿ ಉಳಿದುಕೊಂಡು ತಾವು ನಿಂತ ಸಂದರ್ಭದಲ್ಲಷ್ಟೇ ತಮ್ಮ ಗೆಲುವಿಗೆ ಸಹಕಾರಿಯಾಗಿ ನಿಲ್ಲುವಂತೆ ಕೋರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಎರಡೂ ಪಕ್ಷದ ಕಾರ್ಯಕರ್ತರ ಪ್ರಶ್ನೆಯಾಗಿದೆ.

click me!