ಕೇವಲ ಹಣ ಇದ್ದೋರಿಗೆ ಮಾತ್ರ ಟಿಕೆಟ್ ಎನ್ನುವುದು ಸರಿಯಲ್ಲ. ಹಣ ಇರುವವರೆಲ್ಲರೂ ಗೆಲ್ಲಲು ಸಾಧ್ಯವೂ ಇಲ್ಲ. ಜನ ಬೆಂಬಲ ಇದ್ದಾಗ ಮಾತ್ರ ಗೆಲುವು ಕಾಣಲು ಸಾಧ್ಯ ಎಂದು ಡಾ.ಎಚ್.ಎನ್.ರವೀಂದ್ರ ಆರೋಪಕ್ಕೆ ತಿರುಗೇಟು ನೀಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ
ಮಂಡ್ಯ(ಮಾ.10): ಕಾಂಗ್ರೆಸ್‌ನಲ್ಲಿ ದುಡ್ಡು ಇರುವವರಿಗೆ ಮಾತ್ರ ಟಿಕೆಟ್ ಕೊಡುವರು ಎನ್ನುವುದೆಲ್ಲಾ ಶುದ್ಧ ಸುಳ್ಳು. ದುಡ್ಡು ಇಟ್ಟುಕೊಂಡ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ತಿಳಿಸಿದರು.
ತಾಲೂಕಿನ ಕೆರಗೋಡಿನಲ್ಲಿ ನಡೆದ ಪಂಚಲಿಂಗೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಕೇವಲ ಹಣ ಇದ್ದೋರಿಗೆ ಮಾತ್ರ ಟಿಕೆಟ್ ಎನ್ನುವುದು ಸರಿಯಲ್ಲ. ಹಣ ಇರುವವರೆಲ್ಲರೂ ಗೆಲ್ಲಲು ಸಾಧ್ಯವೂ ಇಲ್ಲ. ಜನ ಬೆಂಬಲ ಇದ್ದಾಗ ಮಾತ್ರ ಗೆಲುವು ಕಾಣಲು ಸಾಧ್ಯ ಎಂದು ಡಾ.ಎಚ್.ಎನ್.ರವೀಂದ್ರ ಆರೋಪಕ್ಕೆ ತಿರುಗೇಟು ನೀಡಿದರು.
undefined
ಮಂಡ್ಯ ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲುತ್ತಾರೆ: ಸ್ಟಾರ್ ಚಂದ್ರು
ಪಕ್ಷದ ಸ್ಥಳೀಯ ನಾಯಕರು, ವರಿಷ್ಠರು ನನ್ನನ್ನು ನಂಬಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಇಷ್ಟು ದಿನ ಸಂಭಾವ್ಯ ಎಂದು ಬಿಂಭಿತವಾಗಿತ್ತು. ಇಂದು ಅಧಿಕೃತವಾಗಿ ಘೋಷಣೆ ಆಗಿದೆ. ನನ್ನ ಶಕ್ತಿ ಮೀರಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ದುಡಿಯುತ್ತೇನೆ. ಸ್ಟಾರ್ ಚಂದ್ರು ಹೆಸರಿನಲ್ಲಿ ಸ್ಟಾರ್ ಇದೆ ಅಂದುಕೊಂಡಿದ್ದೇನೆ. ಎಲ್ಲರೂ ಸಹಕರಿಸಿ ನನ್ನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ದೇವರಲ್ಲಿ ನನ್ನನ್ನು ಗೆಲ್ಲಿಸು ಎಂದು ಪ್ರಾರ್ಥಿಸಿದ್ದೇನೆ. ಶಿವರಾತ್ರಿ ಹಬ್ಬದಂದೇ ಟಿಕೆಟ್ ಸಿಕ್ಕಿದೆ. ನಾನು ಹಿಂದಿನಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಮನೆಯಲ್ಲಿ ಅಣ್ಣ, ಅಳಿಯ ಹಾಗೂ ಬೀಗರು ಕೂಡ ಶಾಸಕರು, ಸಂಸದರಾಗಿದ್ದಾರೆ ಎಂದರು.
ನಾನೂ ಸಹ ಮಂಡ್ಯದವನೇ, ನಾಗಮಂಗಲ ತಾಲೂಕಿನ ಕನಘಟ್ಟ ಗ್ರಾಮದ ವ್ಯವಸಾಯ ಕುಟುಂಬದಿಂದ ಬಂದವನು. ರಾಜಕಾರಣಕ್ಕೆ ಈಗ ಪಾದಾರ್ಪಣೆ ಮಾಡಿದ್ದೇನೆ. ಜನ ನನ್ನ ಕೈಬಿಡುವುದಿಲ್ಲ ಎನ್ನುವ ನಂಬಿಕೆ, ವಿಶ್ವಾಸ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ನನ್ನನ್ನು ಗೆಲ್ಲಿಸಲಿದೆ ಎಂಬ ವಿಶ್ವಾಸವೂ ಇದೆ. ಪಕ್ಷದ ಎಲ್ಲರ ಜೊತೆ ಮೊದಲೇ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಒಮ್ಮತದಿಂದ ನನ್ನ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಮಾ.ಸೋ. ಚಿದಂಬರ್, ವಿಜಯಕುಮಾರ್ ಇತರರು ಇದ್ದರು.
ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯಲಿವೆ: ರವಿಕುಮಾರ್
ಶಾಸಕ ಪಿ. ರವಿಕುಮಾರ್ ಮಾತನಾಡಿ, ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಚಂದ್ರು ಅವರು ಗೆಲುವು ಸಾಧಿಸುತ್ತಾರೆ. ನಾನೂ ಸಹ ಕೆರಗೋಡು ಶ್ರೀ ಪಂಚಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದೇ ರೀತಿ ಚಂದ್ರು ಅವರು ಶ್ರೀ ಪಂಚಲಿಂಗೇಶ್ವರಸ್ವಾಮಿ ದೇವಾಲಯದ ಬಾಗಿಲ ಬಳಿ ಬರುತ್ತಿದ್ದಂತೆ ಅವರಿಗೆ ಟಿಕೆಟ್ ಘೋಷಣೆಯಾಗಿರುವ ವಿಚಾರ ತಿಳಿಯಿತು. ದೇವಾಲಯದ ಒಳ ಹೋಗಿ ಸ್ವಾಮಿಯ ದರ್ಶನ ಮಾಡಿದೆವು. ಆಗ ದೇವರು ಬಲಗಡೆಯಿಂದ ಹೂ ಕೊಟ್ಟಿದ್ದಾನೆ. ಇದು ಶುಭ ಸೂಚಕ. ಹಾಗಾಗಿ ಚಂದ್ರು ನೂರಕ್ಕೆ ನೂರಷ್ಟು ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಹೇಳಿದರು.
ಜಿಲ್ಲೆಯ ಆರು ಮಂದಿ ಶಾಸಕರೂ ಮನೆ ಮನೆಗೂ ಭೇಟಿ ನೀಡಿ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಶಾಸಕರಾಗಿ ಏನೆಲ್ಲಾ ಕೆಲಸಗಳನ್ನು ಮಾಡಬೇಕೋ ಅಷ್ಟೂ ಕೆಲಸಗಳನ್ನೂ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಹುದ್ದೆಗೆ ಯಾವ ಜಾತಿ, ಕುಲದ ಮಾನದಂಡವಲ್ಲ: ಶಾಸಕ ಕೆ.ಎಂ.ಉದಯ್
ನಾಲ್ಕೈದು ಮಂದಿ ಹನುಮಧ್ವಜ ಹಿಡಿದು ಶ್ರೀ ರಾಮ, ಶ್ರೀ ಆಂಜನೇಯ ಎಂದು ಗೊಂದಲ ಸೃಷ್ಟಿಸಿದ್ದಾರೆ. ನಾವೂ ಬೆಳಗ್ಗೆ ಎದ್ದರೆ ದೇವರ ನಾಮದಿಂದಲೇ ಕೆಲಸ ಮಾಡುತ್ತಿದ್ದೇವೆ. ಅದನ್ನು ಬೆಳೆಸಲು ನನಗೆ ಇಚ್ಛೆ ಇಲ್ಲ. ಕೆರಗೋಡು ಅಭಿವೃದ್ಧಿ ಆಗಬೇಕು ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಾಲಿ ಧನಂಜಯ ಅವರು ಆತ್ಮೀಯರು. ಅವರು ಮತ್ತು ಹರ್ಷಿಕಾ ಪೂಣಚ್ಚ ಅವರನ್ನು ಕಾರ್ಯಕ್ರಮಕ್ಕೆ ಕರೆದಿದ್ದೇವೆ. ಬಂದಿದ್ದಾರೆ. ಮುಂದೆ ಚುನಾವಣೆಗೂ ಅವರನ್ನು ಕರೆಯುತ್ತೇವೆ. ಏನೂ ತೊಂದರೆ ಇಲ್ಲ ಎಂದು ಹೇಳಿದರು.