ಜಾತ್ಯಾತೀತ ಜನತಾದಳ ಇದೀಗ ಕೋಮುವಾದಿ ಜನತಾದಳವಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲೇವಡಿ ಮಾಡಿದರು.
ಹಿರಿಯೂರು (ಮಾ.10): ಜಾತ್ಯಾತೀತ ಜನತಾದಳ ಇದೀಗ ಕೋಮುವಾದಿ ಜನತಾದಳವಾಗಿ ಪರಿವರ್ತನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಲೇವಡಿ ಮಾಡಿದರು. ನಗರದ ಹರಿಶ್ಚಂದ್ರ ಘಾಟ್ ಬಡಾವಣೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ನಡೆದ ಭೋವಿ ಸಮುದಾಯ ಭವನ, ಅಂಬೇಡ್ಕರ್ ಭವನ, ಶ್ರೀಕೃಷ್ಣ ಸಮುದಾಯ ಭವನ ಮುಂದುವರಿದ ಕಾಮಗಾರಿ ಚಾಲನಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಸರ್ಕಾರ ಬಂದು 9 ತಿಂಗಳಾಯಿತು. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೆವು.
ಅನಂತರ ಕೊಟ್ಟ ಮಾತಿನಂತೆ ಎಲ್ಲಾ ಭರವಸೆ ಈಡೇರಿಸಿದ್ದೇವೆ. ನಾವು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ವಿರೋಧ ಪಕ್ಷದವರು ಗ್ಯಾರಂಟಿ ಜಾರಿ ಮಾಡಲು ಆಗುವುದಿಲ್ಲ ಎಂಬ ಭಾವನೆಯಿಂದ ಟೀಕೆ ಮಾಡಲು ಶುರು ಮಾಡಿದ್ದರು. ಆದರೆ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇ ತಡ ವಿರೋಧಿಗಳು ಗಪ್ ಚುಪ್ ಆದರು. 15 ಲಕ್ಷ ರು. ಹಾಕುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂಬಂತಹ ಹುಸಿ ಸುಳ್ಳುಗಳನ್ನು ಹೇಳುವುದು ಕಾಂಗ್ರೆಸ್ ಸಿದ್ಧಾಂತವಲ್ಲ. ಇನ್ನು ನಾಲ್ಕು ವರ್ಷದಲ್ಲಿ ರಾಜ್ಯ ಸಂಪೂರ್ಣ ಅಭಿವೃದ್ಧಿಯ ಪಥದಲ್ಲಿ ಇರಲಿದೆ. ಈಗಾಗಲೇ ನಮ್ಮ ತಾಲೂಕಲ್ಲಿ ಗೋ ಶಾಲೆಗಳನ್ನು ತೆರೆಯುತ್ತಿದ್ದೇವೆ.
ಚುನಾವಣೆ ಬಂದಾಗ ಆಸ್ಪತ್ರೆಯಿಂದ ಬರ್ತಾರೆ: ಸಂಸದ ಅನಂತ್ ಬಗ್ಗೆ ಸತೀಶ್ ವ್ಯಂಗ್ಯ
ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಭರದಲ್ಲಿ ಸಾಗುತ್ತಿದೆ. ಐಮಂಗಲ ಭಾಗದ 36 ಹಳ್ಳಿಗಳಿಗೆ ಕುಡಿಯುವ ನೀರು ತಲುಪಿವೆ ಎಂದರು. ಇನ್ನೊಂದು ವರ್ಷದಲ್ಲಿ ಇಡೀ ತಾಲೂಕಿನ ಜನ ಶುದ್ಧ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ. ಅಧಿಕಾರ ಜನರ ಸೇವೆ ಮಾಡಲು ಇದೆಯೇ ಹೊರತು ಅಧಿಕಾರದಾಸೆಗೆ ಕೋಮುವಾದಿಗಳ ಜೊತೆ ಕೈಜೋಡಿಸುವುದಕ್ಕಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು. ಅಧಿಕಾರಕ್ಕಾಗಿ ಹೋದವರನ್ನು ಜನ ಕ್ಷಮಿಸಲ್ಲ. 2013ರಿಂದ 2018ರವರೆಗೆ ಸಾವಿರಾರು ದೇವಾಲಯಗಳಿಗೆ ಅನುದಾನ ನೀಡಿದ್ದೆವು. ಆದರೆ ಬಹಳಷ್ಟು ಕೆಲಸ 5 ವರ್ಷ ಹಾಗೇ ಉಳಿದವು.
ಇದೀಗ ಮತ್ತೆ ಅನುದಾನ ನೀಡಿ ಅವುಗಳನ್ನು ನಾವೇ ಮುಗಿಸಬೇಕಿದೆ. ಈ ಮೂರೂ ಸಮುದಾಯ ಭವನಗಳನ್ನು ಇನ್ನೊಂದೇ ವರ್ಷದಲ್ಲಿ ಪೂರ್ಣಗೊಳಿಸುತ್ತೇವೆ. ಎಲ್ಲಾ ವರ್ಗದ ಜನರ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಆಶೋತ್ತರಗಳನ್ನು ಈಡೇರಿಸಬಲ್ಲುದು ಎಂಬುದನ್ನು ಮರೆಯಬೇಡಿ ಎಂದರು. ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಮೂರೂ ಸಮುದಾಯಗಳನ್ನು ಒಂದೇ ಕಡೆ ಸೇರಿಸುವ ಪರಿಕಲ್ಪನೆ ಈ ಸಭೆಯಲ್ಲಿ ನೆರವೇರಿದೆ. ಅಭಿವೃದ್ಧಿ ಮಾಡಲು ಹೃದಯವಂತಿಕೆ ಬೇಕು. ಆ ಅಭಿವೃದ್ಧಿ ಮನಸು ಸಚಿವರಿಗಿದೆ. ಜಾತಿಮೀರಿ ರಾಜಕಾರಣ ಮಾಡಿ ಗೆದ್ದವರು ಸುಧಾಕರ್. ಪ್ರಚಾರಪ್ರಿಯರ ಮಧ್ಯ ಹೆಚ್ಚು ಮಾತನಾಡದ ಸುಧಾಕರ್ ಕೆಲಸ ಮಾಡುವ ಮೂಲಕ ಉತ್ತಮ ನಾಯಕರಾಗಿ ರೂಪುಗೊಂಡಿದ್ದಾರೆ.
ಸುಳ್ಳನ್ನೇ ಪದೇ ಪದೇ ಹೇಳಿ ಸತ್ಯವೆಂದು ನಂಬಿಸಿ ಅಧಿಕಾರಕ್ಕೆ ಬರುವ ಪಕ್ಷವನ್ನು ನೀವೆಲ್ಲಾ ನೋಡಿದ್ದೀರಿ. ಆದರೆ ನಾವು ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ನಮ್ಮ ಪಕ್ಷ ಮಾಡಿದ ಕೆಲಸಗಳನ್ನು ಮುಖಂಡರುಗಳು ಕರಾರುವಕ್ಕಾಗಿ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು. ರಾಜ್ಯ ಕಾರ್ಮಿಕ ನಿಗಮ ಮಂಡಳಿಯ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ದೇಶದ ಚಿತ್ರಣವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕಾಂಗ್ರೆಸ್ ಪಕ್ಷದ ಬಗ್ಗೆ ಬಿಜೆಪಿಯವರು ಬೀದಿಯಲ್ಲಿ ನಿಂತು ಸುಳ್ಳು ಹೇಳುತ್ತಿದ್ದಾರೆ. ಸಿಲಿಂಡರ್ ಬೆಲೆ 100 ರು. ಇಳಿಸಿದ್ದಾರೆ. 9 ವರ್ಷ 11 ತಿಂಗಳು ಬೆಲೆ ಇಳಿಸದೇ ಕತ್ತೆ ಕಾಯ್ತಿದ್ರಾ ಎಂದು ಇಂದಿನ ಯುವಕರು ಕೇಳಬೇಕಿದೆ. ಇನ್ನು 20 ದಿನಕ್ಕೆ ಚುನಾವಣೆ ಬರಲಿದೆ. ಇಂತಹ ಹೊತ್ತಲ್ಲಿ ಬೆಲೆ ಇಳಿಸಿದ್ದಾರೆ.
465 ರು. ಇದ್ದ ಗ್ಯಾಸ್ ಅನ್ನು 1150 ರು.ಗೆ ತಂದದ್ದು ಯಾರು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. 100 ರು. ಕಡಿಮೆ ಮಾಡಿದ್ದೇವೆ ಎಂದು ಹೇಳಿ ಸಾವಿರಾರು ರುಪಾಯಿ ದೋಚಿದ್ದನ್ನು ಮರೆ ಮಾಚಿದ್ದಾರೆ. ಬಾಯಿ ತೆಗೆದರೆ 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎನ್ನುತ್ತಾರೆ. 1278 ಯೂನಿವರ್ಸಿಟಿಯನ್ನು ದೇಶದಲ್ಲಿ ಕಟ್ಟಿದ್ದೇ ಕಾಂಗ್ರೆಸ್ ಎಂಬುದನ್ನು ವಿರೋಧಿಗಳು ಮರೆಯಬಾರದು. ಕೋಟಿಗಟ್ಟಲೇ ಉದ್ಯೋಗದ ಆಸೆ ಹುಟ್ಟಿಸಿ ಒಂದೇ ಒಂದು ಉದ್ಯೋಗ ಕೊಡಲಿಕ್ಕಾಗದ ಪಕ್ಷದಿಂದ ಏನು ನಿರೀಕ್ಷೆ ಮಾಡುತ್ತೀರಾ ಹೇಳಿ? 21 ಮಂದಿ ವ್ಯಾಪಾರಸ್ಥರ 11.50 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ ಮೋದಿ ಅವರಿಗೆ ರೈತರ, ಬಡವರ ಸಾಲ ಮನ್ನಾ ಮಾಡಿ ಎಂದರೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎನ್ನುತ್ತಾರೆ. ತಮಾಷೆ ಎಂದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಶೇ.41ರಷ್ಟು ಬಿಜೆಪಿಯವರು, ಶೇ.16ರಷ್ಟು ದಳದವರು ಪಡೆಯುತ್ತಿದ್ದಾರೆ ಎಂದರು.
ಯಾರೋ ಪಾಕ್ ಪರ ಘೋಷಣೆ ಕೂಗಿದ್ರೆ ನಾಸಿರ್ ಏಕೆ ಹೊಣೆ: ಸಚಿವ ಎಂ.ಬಿ.ಪಾಟೀಲ್
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಖಾದಿ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ನಾಗಕುಮಾರ್, ನಗರಸಭೆ ಸದಸ್ಯ ಬಿಎನ್ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಆರ್.ಶಿವಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಪಿ.ಆರ್.ದಾಸ್, ಶಿವು ಯಾದವ್, ರಂಗಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಎಸ್.ಆರ್.ತಿಪ್ಪೇಸ್ವಾಮಿ, ಮಹಲಿಂಗಪ್ಪ, ಹೇಮಂತ್ ಕುಮಾರ್, ಜಿ.ಎಲ್.ಮೂರ್ತಿ, ಭೂತಾಭೋವಿ, ಜಿ.ಪ್ರೇಮ್ ಕುಮಾರ್, ಕಲ್ಲಟ್ಟಿ ಹರೀಶ್, ಶಿವರಂಜಿನಿ,ನಟೇಶ್, ಸಣ್ಣಪ್ಪ, ಜ್ಞಾನೇಶ್, ಶಿವಕುಮಾರ್, ಗುರುಪ್ರಸಾದ್ ಮುಂತಾದವರು ಹಾಜರಿದ್ದರು.