ತಮ್ಮಣ್ಣ, ಪುಟ್ಟರಾಜು, ಸುರೇಶ್ ಗೌಡರನ್ನ ನಿಲ್ಲಿ ಅಂದಿದ್ದೆ. ಅವರೆಲ್ಲರೂ ನಿಲ್ಲೋದಕ್ಕೆ ಹಿಂದೇಟು ಹಾಕಿದ್ರು. ದೇವರ ದಯೆಯಿಂದ ನಾನು ಇಲ್ಲಿ ಅಭ್ಯರ್ಥಿ ಆಗಿದ್ದೀನಿ. ಇದೊಂದು ಬಾರಿ ನನ್ನ ಪರೀಕ್ಷೆ ಮಾಡಿ. ದಯವಿಟ್ಟು ನನಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡ ಎಚ್.ಡಿ.ಕುಮಾರಸ್ವಾಮಿ
ಮಂಡ್ಯ(ಏ.23): ಇದೊಂದು ಐತಿಹಾಸಿಕ ಸಭೆಯಾಗಿದೆ. ನಿಮ್ಮ ಕುಟುಂಬದ ಮಗನಿಗೆ ಹಾರೈಸಲು ಬಂದಿರುವ ಸಂದೇಶ ಕೊಟ್ಟಿದ್ದೀರಿ. ಸಿಎಂ, ಡಿಸಿಎಂ ಸಾರ್ವಜನಿಕವಾಗಿ ಹೆಚ್ಡಿಕೆ ಗೆಲ್ಲಲ್ಲ ಅಂದಿದ್ದಾರೆ. ನನ್ನನ್ನ ಸೋಲಿಸುವ ಶಕ್ತಿ ಸಿದ್ದುಗೂ ಇಲ್ಲ, ಡಿಕೆಶಿಗೂ ಇಲ್ಲ. ನೀವು ದುಡ್ಡು ಇಟ್ಕೊಂಡು ಬರಬಹುದು. ಮಂಡ್ಯ ಕ್ಷೇತ್ರದ ಜನರಲ್ಲಿ ಮಾತ್ರ ಗೆಲ್ಲಿಸುವ, ಸೋಲಿಸುವ ಶಕ್ತಿ ಇರೋದು ಎಂದು ಮಂಡ್ಯ ಕ್ಷೇತ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು(ಮಂಗಳವಾರ) ಜಿಲ್ಲೆಯ ಮದ್ದೂರಿನಲ್ಲಿ ನಡೆಸ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಸೋಲಿಸಿದ್ದು ಕಾಂಗ್ರೆಸ್‌ನವರು ಅಂತಾ ಹೇಳಿದ್ದಾರೆ. ಅದಕ್ಕೆ ನನಗೆ ನೋವು ಇಲ್ಲ, ದುಃಖವೂ ಇಲ್ಲ. ನೀರು ಕೊಡದೆ, ಭತ್ತ ಬೆಳೆಯಬೇಡಿ ಅಂತಾ ಜಿಲ್ಲಾ ಮಂತ್ರಿ ಹೇಳ್ತಾರೆ. ಸಕ್ಕರೆ ನಾಡಿಗೆ ಸ್ವಾಗತ ಅಂತಾ ಇದೆ. ಈ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಬರದ ನಾಡಾಗಿದೆ. ಈ ಸರ್ಕಾರ ನನ್ನ ಮಂಡ್ಯ ಜಿಲ್ಲೆಯ ಜನಕ್ಕೆ ಕೊಟ್ಟ ಉಡುಗೊರೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಮಂಡ್ಯ: ಕಾಂಗ್ರೆಸ್‌ನ ಹಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ
ದೇವೇಗೌಡರನ್ನ ಕಾವೇರಿ ವಿಚಾರವಾಗಿ ಕೊಡುಗೆ ಏನು ಅಂತಾ ಕೇಳ್ತಾರೆ. ದೇವೇಗೌಡರು ರಾಜಕೀಯಕ್ಕೆ ಬಂದಾಗ ಸಿಎಂ, ಡಿಸಿಎಂ ಎಲ್ಲಿದ್ದರು?. ವ್ಹೀಲ್ ಚೇರ್ ನಲ್ಲಿ ಹೋಗಿ ರಾಜ್ಯಸಭೆಯಲ್ಲಿ ದೇವೇಗೌಡರು ಬೇಡುತ್ತಾರೆ. ದೇವೇಗೌಡರು ಬಗ್ಗೆ ಯಾವ ನೈತಿಕತೆ ಇಟ್ಕೊಂಡು ಮಾತಾಡ್ತೀರಿ?. ಮೇಕೆದಾಟು ಪಾದಯಾತ್ರೆ ಚುನಾವಣೆಗಾಗಿ ವಿನಃ, ಡ್ಯಾಂ ಕಟ್ಟಲಲ್ಲ. ದೇವೇಗೌಡರು ಕೊಡಿಸಲಿ ಅಂತೀರಿ. ನಮ್ಮ ಮನೆ ರೈತರನ್ನ ಬದುಕು ಹಾಳು ಮಾಡಿ, ಕಾವೇರಿ ನೀರನ್ನ ಮಾರಾಟ ಮಾಡಿದವರು ನೀವು. ತಮಿಳುನಾಡಿನವರು ಪ್ರಣಾಳಿಕೆಯಲ್ಲಿ ಮೇಕೆದಾಟು ಬಗ್ಗೆ ಪ್ರಸ್ತಾಪ ಮಾಡಿದಾಗ ಯಾಕೆ ಚಕಾರ ಎತ್ತಲಿಲ್ಲ ಎಂದು ಹರಿಹಾಯ್ದಿದ್ದಾರೆ.
ಜೆಡಿಎಸ್ ಪಕ್ಷವನ್ನ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ
ದೇವೇಗೌಡರು ನನ್ನ ಜೊತೆ ಹೇಳ್ತಿರುತ್ತಾರೆ. ಕಾವೇರಿ ವಿಚಾರವಾಗಿ ನಿನ್ನ ಮೂಲಕವೇ ನ್ಯಾಯ ಕೊಡಿಸ್ತೀನಿ ಅಂತಾ ಹೇಳಿದ್ದಾರೆ. ಮೋದಿ ಅವರೇ ಹೇಳಿದ್ದಾರೆ, ಕುಮಾರಸ್ವಾಮಿಗೆ ಜವಾಬ್ದಾರಿ ಕೊಡ್ತೀನಿ ಅಂತಾ. ನೀವು ಕೊಟ್ಟ ಶಕ್ತಿಯಿಂದ ದೇವೇಗೌಡರಿಗೆ ಮೋದಿ ಗೌರವ ಕೊಡ್ತಾರೆ. ಜೆಡಿಎಸ್ ಪಕ್ಷವನ್ನ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಪಕ್ಷವನ್ನ ಬೆಳೆಸಿದ್ದು ನೀವು. ಕಾಂಗ್ರೆಸ್ ಬಂದಾಗಲೆಲ್ಲ ಬರಗಾಲವನ್ನೂ ಜೊತೆ ಕರೆ ತರ್ತಾರೆ. ಬಡವರಿಗೆ ಮಾತ್ರ ಬರಗಾಲ. ಸರ್ಕಾರದಲ್ಲಿ ಇರುವವರಿಗೆ ದುಡ್ಡು ಲೂಟಿ ಮಾಡಲು ಸುವರ್ಣ ಕಾಲ. ಕುಮಾರಣ್ಣ ಕೇಂದ್ರದಲ್ಲಿ ಮಂತ್ರಿ ಆಗ್ತಾನೆ ಅಂತಾ ನೀವೇ ಕೂಗ್ತಿದ್ದೀರಿ. ಇದು ದೇವರೇ ನಿಮ್ಮ ಬಾಯಲ್ಲಿ ನುಡಿಸುತ್ತಿರುವುದು. ಅದನ್ನ ಡಿಸಿಎಂ ವ್ಯಂಗ್ಯ ಮಾಡ್ತಾರೆ. ನಾನು ಸ್ವಾರ್ಥಕ್ಕೆ ಎಂದೂ ಅಧಿಕಾರ ಕೇಳಲಿಲ್ಲ. ನನ್ನನ್ನ ಮಂತ್ರಿ ಮಾಡೋದಾದ್ರೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಕೊಡಿ ಅಂತಾ ಮೋದಿಯನ್ನ ಕೇಳ್ತೀನಿ. ಮಂಡ್ಯವನ್ನ ಅಭಿವೃದ್ಧಿ ಮಾಡದಿದ್ದರೇ ಮತ್ತೆಂದೂ ಮಂಡ್ಯಕ್ಕೆ ಮತ ಕೇಳಲು ಬರಲ್ಲ ಎಂದು ಮಾತು ಕೊಟ್ಟಿದ್ದಾರೆ.
622 ಕೋಟಿ ಆಸ್ತಿಯ ಒಡೆಯ ಮಂಡ್ಯ ಕೈ ಅಭ್ಯರ್ಥಿ ಕಣದಲ್ಲಿರುವ ಅತ್ಯಂತ ಶ್ರೀಮಂತ ಕುಳ, 2ನೇ ಸ್ಥಾನ ಯಾರಿಗೆ?
ಐದು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸುವೆ. ಒಕ್ಕಲಿಗ ಸಮಾಜ ಕೊಟ್ಟಿದ್ದನ್ನ ದೇವೇಗೌಡರು ನಿಮ್ಮಂತಹ ಹಿಂದುಳಿದ ವರ್ಗದವರಿಗೆ ಕೊಟ್ರು. ನಿಮ್ಮನ್ನ ಆರ್ಥಿಕ ಸಚಿವರನ್ನಾಗಿ ಮಾಡಿದ್ದು ದೇವೇಗೌಡರು. ಆರ್ಥಿಕ ಸಚಿವರನ್ನ ಮಾಡಿದಾಗ ನೀವು ದೊಡ್ಡ ಆರ್ಥಿಕ ತಜ್ಞರು ಅಂತಾ ಮಾಡಲಿಲ್ಲ. ನಿಮ್ಮನ್ನ ಆರ್ಥಿಕ ತಜ್ಞರನ್ನಾಗಿ ಮಾಡಲಿಕ್ಕೆ ದೇವೇಗೌಡರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ತಮ್ಮಣ್ಣ, ಪುಟ್ಟರಾಜು, ಸುರೇಶ್ ಗೌಡರನ್ನ ನಿಲ್ಲಿ ಅಂದಿದ್ದೆ. ಅವರೆಲ್ಲರೂ ನಿಲ್ಲೋದಕ್ಕೆ ಹಿಂದೇಟು ಹಾಕಿದ್ರು. ದೇವರ ದಯೆಯಿಂದ ನಾನು ಇಲ್ಲಿ ಅಭ್ಯರ್ಥಿ ಆಗಿದ್ದೀನಿ. ಇದೊಂದು ಬಾರಿ ನನ್ನ ಪರೀಕ್ಷೆ ಮಾಡಿ. ದಯವಿಟ್ಟು ನನಗೊಂದು ಅವಕಾಶ ಕೊಡಿ ಎಂದು ಎಚ್.ಡಿ.ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.