ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ರಾಜಕೀಯ ಸ್ಥಾನಮಾನ ಕಲ್ಪಿಸುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸುವ ಮೂಲಕ ಜನ ಜಾಗೃತಿ ಮಾಡುವ ಕೆಲಸ ಮಾಡಲಾಗುತ್ತಿದೆ: ನರೇಂದ್ರ ಬಾಬು
ಚವಡಾಪುರ(ಅ.21): ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಅ.30ರಂದು ಕಲಬುರಗಿ ನಗರದಲ್ಲಿ ವಿರಾಟ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ನರೇಂದ್ರ ಬಾಬು ತಿಳಿಸಿದರು. ಅಫಜಲ್ಪುರ ತಾಲೂಕಿನ ದೇವಲ ಗಾಣಗಾಪೂರದಲ್ಲಿ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ರಾಜಕೀಯ ಸ್ಥಾನಮಾನ ಕಲ್ಪಿಸುವ ಕೆಲಸ ಬಿಜೆಪಿಯಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸುವ ಮೂಲಕ ಜನ ಜಾಗೃತಿ ಮಾಡುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಬರುವ ವಿಧಾನ ಸಭೆ ಚುನಾವಣೆಗೆ ಇದು ತಾಲೀಮು ಆಗಿದ್ದು ಚುನಾವಣೆಗಳಲ್ಲಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಮಾತನಾಡಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ನಿಜಕ್ಕೂ ಭಾರತ್ ಜೋಡೊ ಅಲ್ಲ ಹರಿದು ಹಂಚಿ ಹೋಗಿರುವ ಕಾಂಗ್ರೆಸ್ ಪಕ್ಷದ ಜೋಡೊ ಯಾತ್ರೆ ನಡೆಯುತ್ತಿದೆ. ಟಿಕೇಟ್ ಆಕಾಂಕ್ಷಿಗಳಿಗೆ ಆಮಿಷ ಒಡ್ಡಿ ಜನರನ್ನು ಹಣ ಕೊಟ್ಟು ಕರೆತಂದು ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಮುಳುಗುತ್ತಿರುವ ಹಡುಗು ಇಂತಹ ಮುಳುಗುವ ಹಡುಗಿಗೆ ಗಾಂಧಿ ಕುಟುಂಬದ ನಂಬಿಕಸ್ಥರಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿಸಿದ್ದಾರೆ. ಖರ್ಗೆ ರಬ್ಬರ್ ಸ್ಟಾಂಪ್ ಅಧ್ಯಕ್ಷರೆ ಹೊರತು ಸ್ವಂತ ನಿರ್ಧಾರ ತೆಗೆದುಕೊಂಡು ಪಕ್ಷವನ್ನು ಸಂಘಟಿಸಲು ಅವರಿಂದ ಸಾದ್ಯವಾಗುವುದಿಲ್ಲ.
ಅಭಿಮಾನ, ಶಿಳ್ಳೆ ಮತವಾಗಿ ಪರಿವರ್ತನೆಯಾಗಲಿ; ಸಿದ್ದರಾಮಯ್ಯ
ಕಾಂಗ್ರೆಸ್‌ನವರಿಗೆ ಈಗ ದಲಿತ ನಾಯಕರ ನೆನಪಾಗಿದೆ. ಖರ್ಗೆ ಅವರ ಹಿರಿತನ, ಅನುಭವಕ್ಕೆ ಎಂದೋ ಮುಖ್ಯಮಂತ್ರಿ ಮಾಡಬೇಕಾಗಿತ್ತು. ಈಗ ದಲಿತ ಮತಗಳು ತಮ್ಮನ್ನು ಬಿಟ್ಟು ಹೋಗುತ್ತವೆ ಎನ್ನುವ ಆತಂಕದಿಂದ ಅದ್ಯಕ್ಷ ಸ್ಥಾನ ನೀಡಿ ಮತ ಸೆಳೆಯುವ ಕೆಲಸಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ ಎಂದ ಅವರು 30ರಂದು ಕಲಬುರಗಿಯಲ್ಲಿ ನಡೆಯುವ ಬಿಜೆಪಿ ಹಿಂದುಳಿದ ಸಮಾವೇಶಕ್ಕೆ ಅಫಜಲ್ಪುರ ತಾಲೂಕಿನಿಂದ 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನ ಬರಲಿದ್ದಾರೆ. ಒಟ್ಟಾರೆ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಅರುಣ ಭಿನ್ನಾಡಿ, ನಿತೀನ್ ಗುತ್ತೇದಾರ, ಶೈಲೇಶ ಗುಣಾರಿ, ಶರಣಪ್ಪ ತಳವಾರ, ಶೋಭಾ ಬಾಣಣಿ, ಅಶೋಕ ಬಗಲಿ, ನಾಗಪ್ಪ ಕೊಳ್ಳಿ, ರವಿ ಪಾಟೀಲ್, ಶರಣು ಪದಕಿ ಸೇರಿದಂತೆ ಅನೇಕರು ಇದ್ದರು.