Karnataka Politics: ಯತ್ನಾಳ್ ನಾಯಕನಲ್ಲ ಹೇಳಿಕೆಯ ಹಿಂದಿನ ಕಾರಣಗಳು?!

By Suvarna News  |  First Published Oct 21, 2022, 7:32 PM IST

Arun Singh Slams Basangouda Patil Yatnal: ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯತ್ನಾಳ್ ಯಾರು? ಅವರು ಲೀಡರೆ ಅಲ್ಲ ಎನ್ನುವ ಖಾರವಾದ ಉತ್ತರವನ್ನು ನೀಡಿ ತಮ್ಮ ಮಾತಿನಲ್ಲಿ ಎರಡು ಮೂರು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ


By: Ravi Shivaram, Political Reporter, Asianet Suvarna News 

ನವದೆಹಲಿ (ಅ. 21): ಆಗ ಕಾಂಗ್ರೆಸ್ ಮತ್ತು ಜೆಡಿಎಸ್  ಸಮ್ಮಿಶ್ರ ಸರ್ಕಾರ ಅಧಿಕಾರಲ್ಲಿ ಇತ್ತು. ಕಾಂಗ್ರೆಸ್ ನಾಯಕರೊಬ್ಬರ ಒಂದು ಹೇಳಿಕೆಗೆ ಮಾಧ್ಯಮದರು ಬಿಜೆಪಿ ನಾಯಕರ ಪ್ರತಿಕ್ರಿಯೆ ಪಡೆಯೋಕೆ ವಿಧಾನಸೌಧದಲ್ಲಿ ನಿಂತಿದ್ದರು. ಮೊದಲಿಗೆ ಆರ್ ಅಶೋಕ್ ಬಳಿ ಪ್ರತಿಕ್ರಿಯೆ ಕೇಳಿದರು ಅಶೋಕ್ ಅವರು ಮಾಧ್ಯಮಕ್ಕೆ ಹೇಳಿಕೆ ನೀಡಲಿಲ್ಲ. ಅಧಿವೇಶನದ ಸಮಯ ಆಗಿದ್ದರಿಂದ ಎಲ್ಲಾ ಶಾಸಕರು ವಿಧಾನಸೌಧದಲ್ಲೇ ಇದ್ದರು. ಇರಿ ಕಾಂಗ್ರೆಸ್ ನವರಿಗೆ ಬೈಯಿಸಬೇಕಲ್ವಾ, ಒಂದು ಕೆಲಸ ಮಾಡ್ತೀನಿ ಎಂದು ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಹಿರಿಯ‌ ಬಿಜೆಪಿ ನಾಯಕರೊಬ್ಬರು ತಡ ಮಾಡದೇ ಯತ್ನಾಳ್ ಅವರನ್ನು ಹುಡುಕಿಕೊಂಡು ಬಂದು ಮಾಧ್ಯಮದ ಮುಂದೆ ನಿಲ್ಲಿಸಿದ್ರು. ಯತ್ನಾಳ್ ಆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಹಿಗ್ಗಾ ಮುಗ್ಗಾ ವಾಗ್ದಾಳಿ ಮಾಡಿದ್ರು. ಅಲ್ಲಿಗೆ ಯಾರಿಗಾದರೂ ಹಿಗ್ಗಾಮುಗ್ಗಾ ಜಾಡಿಸೋಕೆ ಯತ್ನಾಳ್ ಮುಂದೆ ಬಿಡ್ತಿದ್ದ ಕೆಲ ಬಿಜೆಪಿ ನಾಯಕರಿಗೆ , ಯತ್ನಾಳ್ ಮುಂದೊಂದು ದಿನ ಯಡಿಯೂರಪ್ಪನವರಿಗೆ ಈ ಪರಿ ಯದ್ವಾತದ್ವಾ ಮಾತಾಡ್ತಾರೆ ಎಂದು ಅನಿಸಿರಲಿಲ್ಲವೇನೊ? 

Tap to resize

Latest Videos

ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ತನಕ ಗಡ್ಡ ತೆಗೆಯೋದಿಲ್ಲ ( ಕ್ಲೀನ್ ಶೇವ್) ಎಂದು ಶಪತಗೈದಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಯಡಿಯೂರಪ್ಪರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ, ರಾಜಭವನದಲ್ಲಿ ಕೆಲ ಮಾಧ್ಯಮಗಳ ಮುಂದೆ ಬಂದು ನೋಡ್ರಿ, ಇಂದು ಕ್ಲೀನ್ ಶೇವ್ ಮಾಡಿದ್ದೇನೆ ಎಂದು ಗರ್ವದಿಂದ ಹೊಳೆಯುವ ತನ್ನ ಬಿಳಿ ಮುಖದ ಮೇಲೆ ಕೈ ಆಡಿಸಿದ್ದರು. ಹಾಗದರೆ ಅಲ್ಲಿಗೆ ಯತ್ನಾಳ್ ನೀಡುತ್ತಿದ್ದ ಹೇಳಿಕೆ ನಿಂತಿತೆ.? ಇಲ್ಲ, ಅದು ದಿನದಿಂದ ದಿನಕ್ಕೆ ಏರುಮುಖದಲ್ಲೇ ಸಾಗಿತ್ತು. ಮುಖ್ಯಮಂತ್ರಿ ಆಗಬೇಕು ಎಂದರೆ ಯಾವೆಲ್ಲಾ ಕಸರತ್ತು ಮಾಡಬೇಕು ಎನ್ನುವ ಮಾತಿನಿಂದ ಆರಂಭಗೊಂಡು ಯಡಿಯೂರಪ್ಪರ ಜೊತೆ ಪ್ರವಾಸ ಮಾಡಿದ್ರೆ ಬೊಮ್ಮಾಯಿಯವರೇ ನೀವು ಲಗಾಟೆ ಹೊಡೆಯುತ್ತೀರಿ ಎನ್ನುವ ತನಕ ಯತ್ನಾಳ್ ಕಾಮೆಂಟ್ರಿ ಮಾಡಿದ್ರು.  

ಅದು ಎಲ್ಲಿಗೆ ಬಂದು ನಿಂತಿತು ಅಂದರೆ ತೀರಾ ಇತ್ತೀಚೆಗೆ ಪಂಚಮಸಾಲಿ ಮೀಸಲಾತಿ ನೀಡುವಲ್ಲಿ ಮಾಜಿ ಮುಖ್ಯಮಂತ್ರಿ ಅಡ್ಡಗಾಲು ಹಾಕಿದ್ರು ಎನ್ನುವಲ್ಲಿಗೆ ಯಡಿಯೂರಪ್ಪ ಮೇಲೆ ಪರೋಕ್ಷವಾಗಿ ವಾಗ್ದಾಳಿ ಮಾಡಿದರು. ಬಳಿಕ‌ ಯಡಿಯೂರಪ್ಪ ಸದನದಲ್ಲಿ ನಿಂತು ನಾನು ಪಂಚಮಸಾಲಿ ಹೋರಾಟದ ಪರ ಇದ್ದೇನೆ ಎಂದು ಸಮರ್ಥನೆ ನೀಡಬೇಕಾದ ಸ್ಥಿತಿಗೆ ಬಂದು ತಲುಪಿತು. ಇಷ್ಟೆಲ್ಲಾ ಮಾತಾಡಿದ್ರು ಹೈಕಮಾಂಡ್ ಯಾಕೆ ಸುಮ್ಮನೆ ಇದೆ ಎಂದು ಮೇಲಿಂದ ಮೇಲೆ ಮಾಧ್ಯಮದವರು ಕೇಳುತ್ತಾ ಇದ್ದಂತೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೊನೆಗೂ ಮೌನ ಮುರಿದು ಯತ್ನಾಳ್ ಯಾರು? ಅವರು ಲೀಡರೆ ಅಲ್ಲ ಎನ್ನುವ ಖಾರವಾದ ಉತ್ತರವನ್ನು ನೀಡಿ ತಮ್ಮ ಮಾತಿನಲ್ಲಿ ಎರಡು ಮೂರು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ.

ಯಡಿಯೂರಪ್ಪರನ್ನು ಸಮಾಧಾನ ಮಾಡುವ ಪ್ರಯತ್ನ: ಹಾಗಾದರೆ ಅರುಣ್ ಸಿಂಗ್ ಯತ್ನಾಳ್ ಲೀಡರ್ ಅಲ್ಲ ಎಂದು ಹೇಳೊದಕ್ಕೆ ರಾಜಕೀಯ ಕಾರಣ ಇದೆಯೆ ಎಂದು ಸ್ವಲ್ಪ ಬಗ್ಗಿ ನೋಡಿದರೆ ಅನೇಕ ಕಾರಣಗಳು, ಒಳಾರ್ಥಗಳು ಸಿಗುತ್ತವೆ.‌ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಬೇಕು ಎಂದು ಕೂಗು ಹಾಕಿದ್ದು ಮೊದಲಿಗೆ ಯತ್ನಾಳ್, ಅರವಿಂದ ಬೆಲ್ಲದ್, ಸಿಪಿ ಯೋಗಿಶ್ವರ್ ಮೊದಲಾದವರು. ಯಡಿಯೂರಪ್ಪರನ್ನು ಬದಲಾಯಿಸುವ ತೀರ್ಮಾನವನ್ನು ಹೈಕಮಾಂಡ್ ಅಂತಿಮವಾಗಿ ಮಾಡಿತು. 

Karnataka Politics: ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿಯೇ ಸಂಜೀವಿನಿ!

ಆದರೆ ಯಾರು ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ರೊ ಅವರ್ಯಾರಿಗೂ ಸಚಿವ ಸ್ಥಾನ ಸಿಗದಂತೆ ನೋಡಿಕೊಂಡವರು ಯಡಿಯೂರಪ್ಪ. ಒಂದು ಹಂತದಲ್ಲಿ ಬೆಲ್ಲದ್ ಸಿಎಂ ಅಭ್ಯರ್ಥಿ ಆಗಿದ್ದವರು. ಆದರೆ ಅವರಿಗೆ ಕೊನೆ ಪಕ್ಷ ಒಂದು ಸಚಿವ ಸ್ಥಾನ ಕೂಡ ಸಿಗಲಿಲ್ಲ ಅಥವಾ ಸಚಿವ ಸ್ಥಾನ ನೀಡಲು ಯಡಿಯೂರಪ್ಪ ಬಿಡಲಿಲ್ಲ‌. ಅದು ಯಡಿಯೂರಪ್ಪರ ರಾಜಕೀಯ ತಾಕತ್ತು. ಅದಿಗ ಮುಗಿದ ಕತೆ. ಆದರೆ ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕೆ ತನ್ನ ವರ್ಚಸ್ಸಿನಿಂದ ಮತ ತರುವ ರಾಜಕೀಯ ಶಕ್ತಿ ಇರೋದು ಯಡಿಯೂರಪ್ಪನವರಿಗೆ ಮಾತ್ರ‌. ದೇಶದಾದ್ಯಂತ ಮೋದಿ ಪ್ರಚಾರ ಮಾಡಿದರೆ ಹೇಗೆ ಬಿಜೆಪಿಗೆ ಲಾಭವೊ ಹಾಗೆ ರಾಜ್ಯದಲ್ಲಿ ಯಡಿಯೂರಪ್ಪ. 

ಅದಕ್ಕಾಗಿಯೆ ಮೊನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ  ಈಗ ಚುನಾವಣೆ ಹೊಸ್ತಿಲಿನಲ್ಲಿ ಕರ್ನಾಟಕ ಇದೆ. ಗೆಲುವಿಗೆ  ಯಡಿಯೂರಪ್ಪ ಬೇಕೆ ಬೇಕು‌. ಆದರೆ ಯತ್ನಾಳ್ ಈ ಪರಿ ಯಡಿಯೂರಪ್ಪರನ್ನು ಬೈದಾಡಿಕೊಂಡು ಓಡಾಡಿದ್ರೂ ಹೈಕಮಾಂಡ್ ಯಾಕೆ ಸುಮ್ಮನೆ ಇದೆ ಎನ್ನುವ ಪ್ರಶ್ನೆ ಸ್ವತಃ ಯಡಿಯೂರಪ್ಪರಿಗೂ ಇರಬಹುದು. ಹೀಗಾಗಿ ಈಗಷ್ಟೇ ರಾಜ್ಯ ಪ್ರವಾಸ ಆರಂಭಿಸಿರುವ ಯಡಿಯೂರಪ್ಪನವರಿಗೆ ಆಗುತ್ತಿರುವ ಮುಜುಗರ ತಪ್ಪಿಸಲು ಯತ್ನಾಳ್ ಲೀಡರೆ ಅಲ್ಲ ಎಂದು ಅರುಣ್ ಸಿಂಗ್ ಹೇಳಿದಂತಿದೆ.

ಯಡಿಯೂರಪ್ಪ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿರಬೇಕು:  ಬೊಮ್ಮಾಯಿಯವರ ಚುನಾವಣೆ ನೇತೃತ್ವ ಇದ್ದರು ಕೂಡ, ಯಡಿಯೂರಪ್ಪನವರು ಮನಸ್ಸು ಮಾಡದೆ ಹೋದರೆ ಬಿಜೆಪಿಗೆ ಕಷ್ಟ. ಬೊಮ್ಮಾಯಿ ಯಾತ್ರೆ ಮಾಡಬಹುದು ಆದರೆ ಮತ ಹೆಕ್ಕಲು ಯಡಿಯೂರಪ್ಪ ಓಡಾಡಲೇಬೇಕು. ಅದಕ್ಕಾಗಿಯೆ ಯಡಿಯೂರಪ್ಪರಿಗೆ ಕೇಂದ್ರ ಚುನಾವಣಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಯಡಿಯೂರಪ್ಪರನ್ನು ಹೈಕಮಾಂಡ್ ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನೆ ಮಾಡಿದೆ. 

ಯಡಿಯೂರಪ್ಪ ಕೂಡ ಉತ್ಸಾಹದಿಂದಲೇ ಯಾತ್ರೆ ಹೊರಟಿದ್ದಾರೆ. ಬೊಮ್ಮಾಯಿ ಯಡಿಯೂರಪ್ಪ ಯಾತ್ರೆ ಒಟ್ಟಿಗೆ ಹೊರಟಿದ್ದರು ಕೂಡ, ಯಡಿಯೂರಪ್ಪನವರೇ ಕಾಂಗ್ರೆಸ್ ನಾಯಕರ ಮೇಲೆ ತಮ್ಮ ಹಳೆ ಸ್ಟೈಲ್ ನಲ್ಲಿ ವಾಗ್ದಾಳಿ ಮಾಡ್ತಾ ಇದ್ದರೂ ಸಹ, ಕಾಂಗ್ರೆಸ್ ಯಡಿಯೂರಪ್ಪರನ್ನು ಟಾರ್ಗೆಟ್ ಮಾಡಿ ಮಾತಾಡುತ್ತಿಲ್ಲ. ಬದಲಾಗಿ ಯಡಿಯೂರಪ್ಪರಿಗೆ ಬಿಜೆಪಿ ಹೈಕಮಾಂಡ್ ಅನ್ಯಾಯ ಮಾಡಿತು ಎಂದು ಪ್ರಚಾರ ಮಾಡಿ, ಯಡಿಯೂರಪ್ಪ ಮೇಲೆ ಸಾಪ್ಟ್ ಕಾರ್ನ್ ತೋರಿಸಿ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯುವ ಎಡೆಬಿಡದ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ಇಂತಹ ಸಮಯದಲ್ಲಿ ಯಡಿಯೂರಪ್ಪರನ್ನು ಸಮಾಧಾನದಲ್ಲಿಟ್ಟು ಪ್ರಚಾರ  ಅನಿವಾರ್ಯತೆ ಬಿಜೆಪಿಗೆ ಇದೆ. 
 
ಯತ್ನಾಳ್ ಬೆಂಬಲಿಗರಿಗೆ ಸಂದೇಶವೇ?: ಯತ್ನಾಳ್ ಈಗ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಸುಮಾರು 60 ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯ ನೂರಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಹರಡಿದೆ. ಈ ನೂರು ವಿಧಾನಸಭೆ ಕ್ಷೇತ್ರದಲ್ಲಿ ಸರಾಸರಿ ಪಂಚಮಸಾಲಿ ಮತ ಲೆಕ್ಕಾಚಾರ ನೋಡಿದರೆ 30 ಸಾವಿರ ಇದೆ. ಬೆಳಗಾವಿ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ದಾವಣಗೆರೆ,ಹಾವೇರಿ, ಗದಗ, ಚಾ.ನಗರ, ಕೊಪ್ಪಳ, ಕಲಬುರಗಿ, ಬೀದರ್, ಶಿವಮೊಗ್ಗ, ವಿಜಯಪುರ ಹೀಗೆ ಒಟ್ಟು 15 ಜಿಲ್ಲೆಗಳಲ್ಲಿ ಪಂಚಮಸಾಲಿ ಸಮುದಾಯ ಇದೆ. ಮೀಸಲಾತಿ ಹೋರಾಟ ಕೂಡ ಈಗ ಜೋರಾಗಿದೆ. 

ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ ಪಕ್ಷದ ನಾಯಕರಲ್ಲ: ಅರುಣ್‌ ಸಿಂಗ್‌

ಇದು ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಈ ಹೋರಾಟ ತಲೆಬಿಸಿಯಾಗಿದೆ. ಅದರಲ್ಲೂ ಯತ್ನಾಳ್ ಹೋದಲ್ಲಿ ಬಂದಲ್ಲಿ ಮೀಸಲಾತಿ ಹೋರಾಟ ವಿಚಾರದಲ್ಲಿ ಪಕ್ಷ ಬೇದ ಎನ್ನದೇ ಹೇಳಿಕೆ ನೀಡುತ್ತಿದ್ದಾರೆ‌. ಇಂತಹ ಸಮಯದಲ್ಲಿ ಯತ್ನಾಳ್ ನಮ್ಮ ಲೀಡರೆ ಅಲ್ಲ, ಅವರನ್ನು ಪಕ್ಷ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ, ಯತ್ನಾಳ್ ಜೊತೆ ನಿಂತರೆ ಪ್ರಯೋಜನ ಇಲ್ಲ, ಪಾರ್ಟಿ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಸಂದೇಶವನ್ನು ಅವರ ಬೆಂಬಲಿಗರಿಗೆ ನೀಡಿದಂತೆ ಕಾಣುತ್ತದೆ.

ಯತ್ನಾಳ್ ಜೊತೆ ಹೈಕಮಾಂಡ್ ಇಲ್ಲ!?:  ಹಾಗೆ ನೋಡಿದ್ರೆ ಯತ್ನಾಳ್ ಜೊತೆ ಸದಾ ನಿಂತಿದ್ದು ಯಡಿಯೂರಪ್ಪ ಮಾತ್ರ. 2018 ರಲ್ಲಿ ಪಕ್ಷದ ರಾಜ್ಯ ಅಧ್ಯಕ್ಷ ಆಗಿದ್ದ ಬಿಎಸ್ ಯಡಿಯೂರಪ್ಪನವರ ಪೂರ್ಣ ಬೆಂಬಲದಿಂದ ಯತ್ನಾಳ್ ಬಿಜೆಪಿಗೆ ಮರು ಸೇರ್ಪಡೆ ಆಗಿದ್ದರು. ಕೇಂದ್ರದ ಮಾಜಿ ಸಚಿವ ರಮೇಶ್ ಜಿಗಜಿಣಗಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಪ್ರಮುಖ ನಾಯಕರ ವಿರೋಧದ ಮಧ್ಯೆಯೆ ಯತ್ನಾಳ್ ಕೈಗೆ ಕಮಲದ ಧ್ವಜ ನೀಡಿ ಸ್ವಾಗತ ಮಾಡಿದ್ದೇ ಬಿಎಸ್ ಯಡಿಯೂರಪ್ಪ. 

ಮುಂದೆ ಯಡಿಯೂರಪ್ಪನವರು ಸಿಎಂ ಆದ್ರು. ಸಿಎಂ ಆಗಿ ಆರಂಭದ ದಿನಗಳಲ್ಲಿ, ಯಾರೆ ಯಡಿಯೂರಪ್ಪರಪ್ಪನ ಕೈ ಬಿಟ್ಟರು ನಾನು ಬಿಡೋದಿಲ್ಲ ಎಂದು ಸದನದಲ್ಲಿ ನಿಂತು  ಯಡಿಯೂರಪ್ಪ ಪರ ಮಾತಾಡುತ್ತಿದ್ದ ಯತ್ನಾಳ್, ಮುಂದೆ ಅದೇ ಸದನದಲ್ಲಿ ನಿಂತು ಯಡಿಯೂರಪ್ಪ ವಿರುದ್ಧ ಗುಟರು ಹಾಕಿದ್ರು. ಹೋದಲ್ಲಿ ಬಂದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಮೇಲೆ ವಾಚಾಮಗೋಚರ ವಾಗ್ದಾಳಿ ಮಾಡೋದಕ್ಕೆ ಶುರು ಮಾಡಿದ ಯತ್ನಾಳ್ ಇದ್ದಕ್ಕಿದ್ದಂತೆ ಬದಲಾದವರು. ಯತ್ನಾಳ್ ಎಲ್ಲಿ ಕಂಡರು ಮಾಧ್ಯಮದವರು ಅವರನ್ನು ಬೆನ್ನುಹತ್ತಿ ಪ್ರತಿಕ್ರಿಯೆ ಪಡೆಯೋಕೆ ಪೈಪೋಟಿ ಕೂಡ ಶುರುವಾಗಿಬಿಡ್ತು.‌ 

ಯತ್ನಾಳ್ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಣಮಿಸಿದರು. ಯತ್ನಾಳ್ ನೀಡುತ್ತಿದ್ದ ಹೇಳಿಕೆ ಯಾವಾಗ ಅತಿ ಆಯ್ತೊ ಆಗ ಒಮ್ಮೆ ನೋಟಿಸ್ ನೀಡಿದ್ರು. ಅಷ್ಟಕ್ಕೆ ಅದು ಸೀಮಿತವಾಯಿತು. ಯತ್ನಾಳ್ ಮೂಲಕ ಈ ರೀತಿ ಹೈಕಮಾಂಡ್ ಹೇಳಿಸುತ್ತಿದೆ ಎನ್ನುವ ಚರ್ಚೆ ಕೂಡ ರಾಜ್ಯ ರಾಜಕೀಯದಲ್ಲಿ ತಣ್ಣಗೆ ಸುದ್ದಿ ಕೂಡ ಆಗುತ್ತಿದ್ದ ಹೊತ್ತಿನಲ್ಲೇ ಅರುಣ್‌ ಸಿಂಗ್ ನೀಡಿದ ಹೇಳಿಕೆ ಗಮನಿಸಿದಾಗ ಯತ್ನಾಳ್ ಜೊತೆ ಹೈಕಮಾಂಡ್ ನಾಯಕರು ಯಾರು ಇಲ್ಲ ಎನ್ನುವ ಸಂದೇಶವನ್ನು ಕೊಟ್ಟಂತೆ ಇದೆ.

click me!