ಸಿದ್ದುಗೆ ನೋವಾದಾಗ ಖುಷಿಪಡುವುದು, ಡಿಕೆಶಿ ಸಮಸ್ಯೆ ಸಿಕ್ಕಾಗ ಸಂತಸಪಡುವುದು ಸರಿಯಲ್ಲ: ಖರ್ಗೆ ಎಚ್ಚರಿಕೆ

By Kannadaprabha NewsFirst Published Nov 2, 2024, 7:59 AM IST
Highlights

‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ನಮ್ಮನ್ನು ಒಡೆದು ಆಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಒಬ್ಬರಿಗೆ ನೋವಾದಾಗ ಮತ್ತೊಬ್ಬರು ಖುಷಿಪಡಬೇಡಿ. ಇಂತಹ ಮನಃಸ್ಥಿತಿಯಿಂದಲೇ ನೀವು ಹಾಳಾಗುತ್ತೀರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. 

ಬೆಂಗಳೂರು (ನ.02): ‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ನಮ್ಮನ್ನು ಒಡೆದು ಆಳಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಒಬ್ಬರಿಗೆ ನೋವಾದಾಗ ಮತ್ತೊಬ್ಬರು ಖುಷಿಪಡಬೇಡಿ. ಇಂತಹ ಮನಃಸ್ಥಿತಿಯಿಂದಲೇ ನೀವು ಹಾಳಾಗುತ್ತೀರಿ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆಯಾದರೆ ಮತ್ತೊಬ್ಬರು ಖುಷಿಪಡುವುದು. ಡಿ.ಕೆ.ಶಿವಕುಮಾರ್‌ ‘ಒಳಗೆ ಹೋದರೆ’ ಮತ್ತೊಬ್ಬರು ಖುಷಿಯಾಗುವುದು ಸರಿಯಲ್ಲ. ಯಾರಿಗೇ ಏನೇ ಆದರೂ ನನಗೇ ನೋವಾಗಿದೆ ಎನ್ನುವ ಮಟ್ಟಿಗೆ ಒಗ್ಗಟ್ಟಾಗಿರಬೇಕು. ಆಗ ನಿಮ್ಮ ಮೇಲೆ ಯಾರೂ ಕೈ ಎತ್ತಲಾಗುವುದಿಲ್ಲ’ ಎಂದು ಎಂದು ಒಗ್ಗಟ್ಟಿನ ಪಾಠ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಸಂಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ನಿಮ್ಮನ್ನು ಹಾಳು ಮಾಡಲು ಬೇರೆಯವರು ಬೇಕಾಗಿಲ್ಲ. ನೀವು ಒಟ್ಟಾಗಿ ಇಲ್ಲದಿದ್ದರೆ ಅದರಿಂದಲೇ ನೀವು ಹಾಳಾಗುತ್ತೀರಿ. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಒಬ್ಬರಿಗೆ ಸಮಸ್ಯೆ ಆದಾಗ ಮತ್ತೊಬ್ಬರು ಖಷಿಯಾಗಿರುವುದು ಶೋಭೆಯಲ್ಲ. ಈ ಖುಷಿ ಶಾಶ್ವತ ಅಲ್ಲ. ನೀವೆಲ್ಲರೂ ಗಟ್ಟಿಯಾಗಿ ಒಟ್ಟಾಗಿ ಇದ್ದರೆ ರಾಜ್ಯದಲ್ಲಿ ಯಾವ ಬಿಜೆಪಿ ಇರುತ್ತದೆ ರೀ?’ ಎಂದು ಪ್ರಶ್ನಿಸಿದರು.

Latest Videos

‘ಬಿಜೆಪಿಯವರ ಮಾತು ಕೇಳಿಕೊಂಡು ನಮ್ಮಲ್ಲಿ ನಾವೇ ವಿಭಜನೆ ಆದರೆ ಹೇಗೆ? ಎಲ್ಲರೂ ಒಗ್ಗಟ್ಟಾಗಿದ್ದರೆ ನಿಮ್ಮ ಮೇಲೆ ಯಾರೂ ಕೈ ಎತ್ತಲಾಗುವುದಿಲ್ಲ. ನಿಮ್ಮನ್ನು ಅಟ್ಟಕ್ಕೇರಿಸುವವರ ಮಾತು ಕೇಳಿದರೆ ಪಕ್ಷವೇ ಒಡೆದು ಹೋಗುತ್ತದೆ. ಅನುಭವದಿಂದ ಹೇಳುತ್ತಿದ್ದೇನೆ’ ಎಂದು ಸಲಹೆ ನೀಡಿದರು. ‘ಕೆಲವರು ಸಿದ್ದರಾಮಯ್ಯ ಬಳಿ ಬಂದು ನೀವೇ ಎಲ್ಲಾ ಎನ್ನುವುದು, ಡಿ.ಕೆ. ಶಿವಕುಮಾರ್‌ ಬಳಿ ಹೋದರೆ ನಿಮ್ಮನ್ನು ಬಿಟ್ಟರೆ ಪಕ್ಷ ಇಲ್ಲ ಎನ್ನುವುದು, ಹರಿಪ್ರಸಾದ್‌ ಬಳಿ ಹೋಗಿ ನಿಮ್ಮ ಥರ ಮಾತನಾಡುವ ಗಂಡಸು ಇನ್ನಿಲ್ಲ ಎಂದು ಹುರಿದುಂಬಿಸುತ್ತಾರೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವವರನ್ನು ನಂಬಬೇಡಿ. ಸಿಹಿ ಇದ್ದಾಗಲಷ್ಟೇ ನೊಣಗಳು ಬರುತ್ತವೆ. ಇಲ್ಲಿದ್ದರೆ ಯಾರೂ ಬರುವುದಿಲ್ಲ. ಹಿಂದೆ ಐದು ವರ್ಷ ನಿಮಗೆ ಅನುಭವ ಆಗಿದೆ’ ಎಂದು ಸೂಕ್ಷ್ಮವಾಗಿ ತಿಳಿಸಿದರು.

ಕನ್ನಡಿಗರ ಅವಹೇಳನ ಮಾಡಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ ಗುಡುಗು

‘ನಾನು ನಿಮ್ಮ ಕಡೆ (ರಾಜ್ಯ) ಕೈ ಹಾಕುವುದೇ ಇಲ್ಲ. ನನ್ನದೇ ಬರಲಿ ನಾನು ಕೈ ಹಾಕುವುದಿಲ್ಲ. ನಾನು ಏನೇ ಮಾತನಾಡಿದರೂ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತದೆ. ನನಗೆ ಹಾಗೂ ನನ್ನ ಪಕ್ಷಕ್ಕೆ ಹಾನಿಯಾಗುತ್ತದೆ. ಹೀಗಾಗಿ ಬಾಯಿ ಮುಚ್ಚಿಕೊಂಡು ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು. ‘ಕೆ.ಎಚ್‌. ಮುನಿಯಪ್ಪ ಅವರೆಲ್ಲರೂ ನನ್ನ ಬಳಿ ಬಂದು ನೀವು ಮನಸ್ಸು ಮಾಡಿದರೆ ಆಗುತ್ತದೆ ಮಾಡಿ ಎನ್ನುತ್ತಾರೆ. ವಿಷಯ ಯಾವುದೇ ಇರಲಿ ನಾನು ಯಾವುದಕ್ಕೂ ಮನಸ್ಸು ಮಾಡುವುದಿಲ್ಲ. ರಾಜ್ಯದ ವಿಚಾರವನ್ನು ನೀವೇ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

click me!