10 ವರ್ಷ ನರೇಂದ್ರ ಮೋದಿ ಗೆದ್ದಿದ್ದು ಮೋಸದಿಂದ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Nov 2, 2024, 6:59 AM IST

‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಳೆದ ಹತ್ತು ವರ್ಷದಿಂದ ಗೆದ್ದಿರುವ ಚುನಾವಣೆಗಳೆಲ್ಲವೂ ಮೋಸದಿಂದಲೇ ಗೆದ್ದಿದ್ದಾರೆ. ಹರಿಯಾಣದಲ್ಲಿ ರಾತ್ರೋ ರಾತ್ರಿ ಬದಲಾವಣೆ ಮಾಡಿಕೊಂಡರು. ಮತ ಎಣಿಕೆ ವೇಳೆ ಕಾಂಗ್ರೆಸ್‌ 66 ಸ್ಥಾನದಿಂದ ಏಕಾಏಕಿ 33 ಸ್ಥಾನಕ್ಕೆ ಬರಲು ಸಾಧ್ಯವೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.


ಬೆಂಗಳೂರು (ನ.02): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಳೆದ ಹತ್ತು ವರ್ಷದಿಂದ ಗೆದ್ದಿರುವ ಚುನಾವಣೆಗಳೆಲ್ಲವೂ ಮೋಸದಿಂದಲೇ ಗೆದ್ದಿದ್ದಾರೆ. ಹರಿಯಾಣದಲ್ಲಿ ರಾತ್ರೋ ರಾತ್ರಿ ಬದಲಾವಣೆ ಮಾಡಿಕೊಂಡರು. ಮತ ಎಣಿಕೆ ವೇಳೆ ಕಾಂಗ್ರೆಸ್‌ 66 ಸ್ಥಾನದಿಂದ ಏಕಾಏಕಿ 33 ಸ್ಥಾನಕ್ಕೆ ಬರಲು ಸಾಧ್ಯವೇ?’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

‘ಇಡೀ ವಿಶ್ವದಲ್ಲಿ ಬೆರಳೆಣಿಕೆ ದೇಶಗಳಲ್ಲಿ ಬಿಟ್ಟು ಎಲ್ಲಾ ದೇಶಗಳಲ್ಲೂ ಬ್ಯಾಲೆಟ್‌ ಪೇಪರ್‌ ಮೂಲಕವೇ ಚುನಾವಣೆ ನಡೆಸುತ್ತಾರೆ. ಇವಿಎಂ ಹ್ಯಾಕ್‌ ಮಾಡಬಹುದು ಎಂದು ಎಲಾನ್‌ ಮಸ್ಕ್‌ ಅವರೇ ಹೇಳಿದ್ದಾರೆ. ಇದನ್ನು ನಾವು ಹೇಳಿದರೆ ಸಾಬೀತುಪಡಿಸಿ ಎನ್ನುತ್ತಾರೆ ಅಥವಾ ಸಿದ್ದರಾಮಯ್ಯ ಗೆದ್ದಾಗ ಏನೂ ಇರಲಿಲ್ಲವೇ ಎನ್ನುತ್ತಾರೆ. ಯಾರಿಗೆ ಎಲ್ಲಿ ಹೇಗೆ ಮಾಡಬೇಕು ಎಂಬುದೂ ಸಹ ಪ್ರೋಗ್ರಾಂ ಮಾಡಿರುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಸಂಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Tap to resize

Latest Videos

undefined

ಕಾಂಗ್ರೆಸ್‌ನ ಚುನಾವಣಾ ವಾಗ್ದಾನ ಪಂಚ ಗ್ಯಾರಂಟಿಗಳು ನಿಲ್ಲಲ್ಲ: ಡಿಸಿಎಂ ಡಿಕೆಶಿ ಲೇಖನ

‘ಹರಿಯಾಣ ಮತ ಎಣಿಕೆ ವೇಳೆ 66 ಸೀಟಿನಿಂದ ಒಂದೂವರೆ ತಾಸಿನಲ್ಲಿ ಏಕಾಏಕಿ 33 ಸೀಟಿಗೆ ಬರಲು ಸಾಧ್ಯವೇ? ನರೇಂದ್ರ ಮೋದಿ ಅವರು ಯಾವ ಚುನಾವಣೆಯಲ್ಲೂ ನಿಜವಾಗಿ ಗೆದ್ದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಎಲ್ಲವೂ ಮೋಸದಿಂದಲೇ ಗೆದ್ದಿದ್ದಾರೆ. ಮತದಾರರ ಪಟ್ಟಿಯಲ್ಲಿ 10-20 ಸಾವಿರ ಹೆಸರು ಸೇರಿಸುವುದು ಅಥವಾ 10-20 ಸಾವಿರ ತೆಗೆಸುವುದು. ಇಲ್ಲವೇ 10-20 ಸಾವಿರ ಮತದಾರರನ್ನು ಮತ ಚಲಾಯಿಸದಂತೆ ಮಾಡುವುದು. ಇನ್ನು ಯಾವ ದೇಶದಲ್ಲೂ ಇಲ್ಲದ ಇವಿಎಂ ಯಂತ್ರ ಬಳಸುವುದು. ಇವೆಲ್ಲವೂ ನರೇಂದ್ರ ಮೋದಿ ಅವರ ಪಕ್ಷದ ಕೆಲಸಗಳು’ ಎಂದು ದೂರಿದರು.

‘ಇವಿಎಂ ಟ್ಯಾಂಪರ್‌ ಮಾಡಲಾಗುವುದಿಲ್ಲ ಎನ್ನುತ್ತಾರೆ. ಚಂದ್ರಯಾನ ಹೋಗುವ ಕಾಲದಲ್ಲಿ ಅದು ನಂಬುವ ಮಾತೇ? ಎಲಾನ್‌ ಮಸ್ಕ್‌ ಅವರೇ ಇವಿಎಂ ಹ್ಯಾಕ್‌ ಮಾಡಬಹುದು ಎಂದು ಹೇಳಿದ್ದಾರೆ. ಅಮೆರಿಕ ಸೇರಿದಂತೆ ಮುಂದುವರೆದ ದೊಡ್ಡ ದೊಡ್ಡ ದೇಶಗಳೆಲ್ಲಾ ಬ್ಯಾಲೆಟ್‌ ಪೇಪರ್‌ ಬಳಸುತ್ತಿವೆ. ಆದರೆ ಇವರು (ಮೋದಿ) ಇವಿಎಂ ಬಳಸುತ್ತಾರೆ’ ಎಂದು ದೂರಿದರು.

ಬಿಜೆಪಿಯನ್ನು ತಡೆಯಲು ಯಶಸ್ವಿ: ಬಿಜೆಪಿಯವರಿಗೆ ಲೋಕಸಭೆ ಚುನಾವಣೆಯಲ್ಲಿ 25-30 ಹೆಚ್ಚು ಬಂದಿದ್ದರೆ ಸಂವಿಧಾನ ಬದಲಾವಣೆ ಮಾಡುವ ಅವಕಾಶ ಸಿಗುತ್ತಿತ್ತು. ನಾವು ಸಿಂಗಲ್‌ ಪಾರ್ಟಿ ಬಹುಮತ ಬರಲು ಬಿಟ್ಟಿಲ್ಲ. ಇದು ನಿಮ್ಮ ಸಾಧನೆ. ಒಂದು ಹಂತಕ್ಕೆ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ಮೋದಿ ಮನಸ್ಸಿನಲ್ಲಿ ವಿಷ ತುಂಬಿದೆ: ‘ದೇಶವು ಒಕ್ಕೂಟವಾಗಿರಲು, ದೇಶದ ಐಕ್ಯತೆಗೆ ಇಂದಿರಾ ಗಾಂಧಿ ಪ್ರಾಣ ತ್ಯಾಗ ಮಾಡಿದರು. ಅವರು ತಮ್ಮ ಪ್ರಾಣ ಬಿಟ್ಟರೇ ಹೊರತು ಒಕ್ಕೂಟ ಸಿದ್ಧಾಂತ ಬಿಡಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದನ್ನು ನೆನೆಯುವುದು ಬಿಟ್ಟು ಅರ್ಬನ್‌ ನಕ್ಸಲೈಟ್‌, ದೇಶದ ಅಭಿವೃದ್ಧಿ ನೋಡಲಿಲ್ಲ ಎಂದೆಲ್ಲಾ ಜರಿದಿದ್ದಾರೆ. ಅವರಿಗೆ ಒಳ್ಳೆಯ ಮನಸ್ಸಿದ್ದರೆ ಪ್ರಾಣ ತ್ಯಾಗ ಮಾಡಿದ್ದನ್ನು ನೆನೆಯಬೇಕಿತ್ತು. ಅವರ ಮನಸ್ಸಿನಲ್ಲಿ ಆಗಲಿ ಅಥವಾ ಅವರ ಪಕ್ಷದ ಜನರಲ್ಲಿ ವಿಷ ತುಂಬಿದೆ’ ಎಂದು ದೂರಿದರು.

ಎಚ್‌.ಡಿ.ಕುಮಾರಸ್ವಾಮಿ ಶಾಸಕರಾದ ಮೇಲೆ ಕ್ಷೇತ್ರ ಅಭಿವೃದ್ಧಿ ಕುಂಠಿತ: ಸಿ.ಪಿ.ಯೋಗೇಶ್ವರ್‌

ಇನ್ನು ವಲ್ಲಭಭಾಯಿ ಪಟೇಲ್‌ ಅವರ ಹೆಸರನ್ನು ಕಾಂಗ್ರೆಸ್‌ನಿಂದ ಕಸಿಯಲು ಪ್ರಯತ್ನಿಸುತ್ತಿದ್ದಾರೆ. ಗಾಂಧೀಜಿ ಕೊಲೆಯಾದಾಗ ಆರ್‌ಎಸ್‌ಎಸ್‌ ನಿಷೇಧ ಮಾಡಿದ್ದವರು ವಲ್ಲಭಾಬಾಯ್‌ ಪಟೇಲ್‌. ಅವರಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿತ್ತು. ಅವರನ್ನು ನಮ್ಮಿಂದ ಕಸಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಎಚ್. ಮುನಿಯಪ್ಪ, ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವರು ಹಾಜರಿದ್ದರು.

click me!