ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿಲ್ಲ: ಕೃಷಿ ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Nov 2, 2024, 7:29 AM IST

ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿಯೂ ಇಲ್ಲ. ಅವುಗಳನ್ನು ನಿಲ್ಲಿಸುವ ಪ್ರಶ್ನೆಯೂ ಸರ್ಕಾರದ ಮುಂದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. 


ಮಂಡ್ಯ (ನ.02): ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿಯೂ ಇಲ್ಲ. ಅವುಗಳನ್ನು ನಿಲ್ಲಿಸುವ ಪ್ರಶ್ನೆಯೂ ಸರ್ಕಾರದ ಮುಂದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಕ್ತಿ ಯೋಜನೆಯನ್ನು ನಿಲ್ಲಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಕೆಲ ಮಹಿಳೆಯರು ಟಿಕೆಟ್ ಬೇಡ ಎನ್ನುತ್ತಿದ್ದಾರೆ. ಆ ಬಗ್ಗೆ ಚರ್ಚೆ ನಡೆಸುವುದಾಗಷ್ಟೇ ಹೇಳಿದ್ದಾರೆ. ಸಿಎಂ ಕೂಡ ಯೋಜನೆ ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ರಾಜಕೀಯವಾಗಿ ಈ ವಿಷಯವನ್ನು ಚರ್ಚಿಸುವುದು ಬೇಡ ಎಂದರು.

ಗ್ಯಾರಂಟಿ ಯೋಜನೆಗಳ ಜಾರಿ ನಡುವೆಯೂ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿಲ್ಲ. ಯಾವುದೇ ವಿಧವಾದ ಮಾಸಾಶನ ನೀಡುವುದನ್ನೂ ನಿಲ್ಲಿಸಿಲ್ಲ. ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳು, ಯೋಜನೆಗಳಿಗೆ ಹಣ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಒಳ್ಳೆಯ ಕೆಲಸವನ್ನು ಸಹಿಸದೆ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ದೂಷಿಸಿದರು. ನ್ಯಾಯಬದ್ಧವಾಗಿ ಕೇಂದ್ರ ಸರ್ಕಾರ ನೀಡಬೇಕಿದ್ದ ತೆರಿಗೆ ಹಣವನ್ನು ನೀಡದಿದ್ದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹಣ ಬಿಡುಗಡೆ ಮಾಡಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಬಿಜೆಪಿಯವರು ಸಂಸದರಾಗಿದ್ದುಕೊಂಡು ತೆರಿಗೆ, ಬರಪರಿಹಾರ ಹಣವನ್ನು ಕೇಂದ್ರದಿಂದ ಕೊಡಿಸಲಾಗಲಿಲ್ಲ. ರಾಜ್ಯಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುವಾಗ ಅದನ್ನು ಬೆಂಬಲಿಸಬೇಕೇ ಹೊರತು ಟೀಕಿಸಬಾರದು ಎಂದು ಕಿವಿಮಾತು ಹೇಳಿದರು.

Tap to resize

Latest Videos

undefined

ಕಾಂಗ್ರೆಸ್‌ನ ಚುನಾವಣಾ ವಾಗ್ದಾನ ಪಂಚ ಗ್ಯಾರಂಟಿಗಳು ನಿಲ್ಲಲ್ಲ: ಡಿಸಿಎಂ ಡಿಕೆಶಿ ಲೇಖನ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಷಡ್ಯಂತ್ರ ಮಾಡುವುದೇನಿದೆ. ಗೆಲುವಿಗೆ ಬೇಕಾದ ತಂತ್ರಗಳನ್ನು ರೂಪಿಸುವುದು ಸಹಜ. ನಿಖಿಲ್ ಕುಮಾರಸ್ವಾಮಿ ಎರಡು ಚುನಾವಣೆಯಲ್ಲಿ ಸೋತಿದ್ದಾರೆ. ಸಹಜವಾಗಿ ನೋವಿನಿಂದ ಮಾತನಾಡಿರಬಹುದು. ಸಿ.ಪಿ. ಯೋಗೇಶ್ವರ್ ಕೂಡ ಸೋತಿಲ್ಲವೇ. ಚನ್ನಪಟ್ಟಣದ ಕೆರೆಗಳನ್ನೆಲ್ಲಾ ತುಂಬಿಸಿ ಭಗೀರಥ ಎನಿಸಿಕೊಂಡಿದ್ದವರು ಚುನಾವಣೆಯಲ್ಲಿ ಸೋತರು. ಅದೂ ಕೂಡ ಷಡ್ಯಂತ್ರವಲ್ಲವೇ. ಅವರಿಗೆ ನೋವಾಗುವುದಿಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರೈತರು ಆತಂಕಕಕ್ಕೆ ಒಳಗಾಗುವುದು ಬೇಡ. ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಾಕ್ಷಣ ಅದು ವಕ್ಫ್ ವಶವಾಗುವುದಿಲ್ಲ. ಅದನ್ನು ಕಾರ್ಯರೂಪಕ್ಕೆ ತರದಂತೆ ಜಿಲ್ಲಾಡಳಿತಕ್ಕೆ ತಿಳಿಸುತ್ತೇನೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುವ ಭರವಸೆ ನೀಡಿದರು. ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಇದ್ದರು.

ಸಾಹಿತ್ಯ ಪರಿಷತ್ ಅಧ್ಯಕ್ಷರ ತೀರ್ಮಾನವೇ ಅಂತಿಮವಲ್ಲ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ತೀರ್ಮಾನವೇ ಅಂತಿಮವಲ್ಲ. ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಪರಂಪರೆಯನ್ನು ನಾವು ಮರೆಯುವಂತಿಲ್ಲ. ಸಾಹಿತಿಗಳಿಗೇ ಪ್ರಾತಿನಿಧ್ಯತೆ ನೀಡಬೇಕಿದೆ. ಆಯ್ಕೆಯಲ್ಲಿ ಯಾವುದೇ ವೈರುಧ್ಯಗಳು ಎದುರಾಗದಂತೆ ಎಚ್ಚರ ವಹಿಸುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಸಮ್ಮೇಳನಕ್ಕೆ ಸರ್ಕಾರ ೩೦ ಕೋಟಿ ರು. ನೀಡುತ್ತಿದೆ. ಪರಿಷತ್ ಅಧ್ಯಕ್ಷರು ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಜಿಲ್ಲಾಡಳಿತ, ಶಾಸಕರು ಎಲ್ಲರೂ ಇರುತ್ತಾರೆ. ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳು-ಸಾಹಿತ್ಯೇತರರ ಕುರಿತು ಏನೇ ಚರ್ಚೆ ನಡೆದರೂ ಅಂತಿಮ ತೀರ್ಮಾನ ಒಳ್ಳೆಯದಾಗಿರುತ್ತದೆ ಎಂದು ಭರವಸೆ ನೀಡಿದರು.

ಕನ್ನಡಿಗರ ಅವಹೇಳನ ಮಾಡಿದರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ ಗುಡುಗು

ಉಪ ಚುನಾವಣೆ ಬಳಿಕ ಮೈಷುಗರ್ ಪುನಶ್ಚೇತನ ಕುರಿತು ನಿರ್ಧಾರ: ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ಬಳಿಕ ಮೈಷುಗರ್ ಕಾರ್ಖಾನೆಯ ಆಧುನೀಕರಣ ಕುರಿತಂತೆ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಎರಡು ಮಾದರಿಯ ವರದಿಗಳು ಸರ್ಕಾರದ ಮುಂದಿದೆ. ಈಗಿರುವ ಕಾರ್ಖಾನೆಯಲ್ಲೇ ನಿತ್ಯ ೬ ರಿಂದ ೭ ಸಾವಿರ ಟನ್ ಕಬ್ಬು ಅರೆಯುವಂತೆ ವ್ಯವಸ್ಥೆ ಮಾಡುವುದು. ಡಿಸ್ಟಿಲರಿ, ಎಥೆನಾಲ್ ಘಟಕವನ್ನು ಆರಂಭಿಸುವುದು. ಮೊದಲ ಹಂತದಲ್ಲಿ ಕಬ್ಬು ಅರೆಯುವಿಕೆ ಸಾಮರ್ಥ್ಯವನ್ನು ೫ ಸಾವಿರ ಟನ್‌ಗೆ ಹೆಚ್ಚಿಸುವುದು. ಎರಡನೇ ಹಂತದಲ್ಲಿ ಕಬ್ಬು ಬೆಳೆಯುವ ಪ್ರದೇಶವನ್ನು ಹೆಚ್ಚಿಸಿಕೊಂಡು ಮತ್ತೆ ೫ ಸಾವಿರ ಟನ್ ಕಬ್ಬು ಅರೆಯುವಿಕೆ ಸಾಮರ್ಥ್ಯ ಹೆಚ್ಚುಸುವುದು. ಇಲ್ಲದಿದ್ದರೆ ಸಾತನೂರು ಫಾರಂನಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭಿಸುವುದು ಎರಡನೇ ಆಯ್ಕೆಯಾಗಿದೆ.. ಈ ಕುರಿತು ಮೈಷುಗರ್ ವ್ಯಾಪ್ತಿಗೆ ಒಳಪಡುವ ಮೂವರು ಶಾಸಕರೊಟ್ಟಿಗೆ ಕುಳಿತು ಚರ್ಚಿಸಿ, ನಂತರ ತಜ್ಞರ ವರದಿಗಳನ್ನೂ ಮುಂದಿಟ್ಟುಕೊಂಡು ಸಿಎಂ ಮತ್ತು ಡಿಸಿಎಂ ಜೊತೆ ಸಮಾಲೋಚಿಸಿ ನಿರ್ಧಾರ ಮಾಡಲಾಗುವುದು ಎಂದರು.

click me!