
ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿ ತೆರಳಿದ ನಂತರ, ಆ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಪ್ರಕರಣ ಇದೀಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ಖಂಡಿಸಿ ಸಂಸತ್ತಿನ ರಾಜ್ಯಸಭೆಯಲ್ಲಿ ವಿಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸುತ್ತ ಜೋರು ವಾಗ್ದಂಡನೆ ನಡೆದಿದೆ.
ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಭಾಷಣದ ನಂತರ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರು ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ನಾನು ದಲಿತ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕಾಗಿ ಈ ರೀತಿ ವೇದಿಕೆ ಶುದ್ಧೀಕರಣ ಮಾಡಿ ನನಗೆ ಹಾಗೂ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ. ನಾನು ಇದನ್ನು ರಾಜಕಾರಣಗೊಳಿಸಲು ಬಯಸುವುದಿಲ್ಲ' ಎಂದು ಭಾವುಕರಾಗಿ ಹೇಳಿದರು.
ತಮ್ಮ ಪಾರ್ಲಿಮೆಂಟರಿ ಜೀವನವನ್ನು ಸ್ಮರಿಸಿದ ಖರ್ಗೆ, ‘ನಾನು ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧ ಮಾತನಾಡಿಲ್ಲ. ಹಲವು ವರ್ಷಗಳಿಂದ ಸಂಸದನಾಗಿ ದೇಶದ ಸೇವೆ ಮಾಡುತ್ತಿದ್ದೇನೆ. ದಲಿತ ಎಂಬ ಕಾರಣಕ್ಕೆ ನಾನು ಯಾರ ಮುಂದೆಯೂ ಭಿಕ್ಷೆ ಬೇಡಿಲ್ಲ. ಬಿಜೆಪಿ ಬೆಂಬಲಿತ ಸಂಘಟನೆಗಳು ನನ್ನನ್ನು ಹಾಗೂ ನನ್ನ ಜಾತಿಯನ್ನು ಅವಮಾನಿಸಿವೆ. ಈ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಸರ್ಕಾರದ ಮುಂದೆ ಬಿಗಿ ಪಟ್ಟು ಹಿಡಿದರು. ‘ನನಗೆ ಹೋರಾಟ ಮಾಡುವ ಶಕ್ತಿ ಇದೆ, ಸಂವಿಧಾನಿಕವಾಗಿ ನಾನು ಈ ಅನ್ಯಾಯದ ವಿರುದ್ಧ ಹೋರಾಡುತ್ತೇನೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಖರ್ಗೆ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಕಳಕಳಿಯಿಂದ ಪ್ರಸ್ತಾಪಿಸುತ್ತಿದ್ದಾಗ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ಎಲ್ಲಾ ಸಂಸದರು ಎದ್ದು ನಿಂತು ಬಿಜೆಪಿ ವಿರುದ್ಧ 'ಶೇಮ್ ಶೇಮ್' (Shame Shame) ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಮಧ್ಯಪ್ರವೇಶಿಸಿದ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಇಂತಹ ಜಾತಿ ಆಧಾರಿತ ಅಥವಾ ತಾರತಮ್ಯದ ಚಟುವಟಿಕೆಗಳನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. "ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಸದನಕ್ಕೆ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.