ಸಚಿವರ ಶಪಥದ 10 ದಿನ ಬಳಿಕ, ಅಧಿವೇಶನಕ್ಕೆ 1 ದಿನ ಮುನ್ನ ಖಾತೆ ಹಂಚಿಕೆ! ಯಾರಾರಿಗೆ ಯಾವ ಖಾತೆ ಸಿಕ್ತು? ತಂಗಡಗಿ ಅಸಮಾಧಾನ ಏಕೆ?

Kannadaprabha News   | Kannada Prabha
Published : Aug 13, 2026, 06:08 AM IST
Karnataka Cabinet On the eve of Monsoon Session portfolios finally allocated

ಸಾರಾಂಶ

ಹಲವು ದಿನಗಳ ಬಿಕ್ಕಟ್ಟಿನ ನಂತರ ನೂತನ 19 ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಸಮಾಧಾನದ ನಡುವೆ ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರಿಗೆ ಪ್ರಬಲ ಖಾತೆಗಳು ಲಭಿಸಿದ್ದು, ಕೆ.ಎಚ್. ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆಗಳನ್ನು ಬದಲಿಸಲಾಗಿದೆ.

 ಬೆಂಗಳೂರು (ಆ.13): ಸಂಪುಟ ವಿಸ್ತರಣೆಯಿಂದ ಭುಗಿಲೆದ್ದಿದ್ದ ಅಸಮಾಧಾನ, ಪ್ರಮುಖ ಖಾತೆಗಳಿಗಾಗಿ ಸಚಿವರು ಪಟ್ಟು ಹಿಡಿದಿದ್ದರಿಂದ ಉಂಟಾಗಿದ್ದ ಬಿಕ್ಕಟ್ಟಿನ ನಡುವೆ ಕೊನೆಗೂ ನೂತನ 19 ಮಂದಿ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ನೂತನ ಸಚಿವರ ಪೈಕಿ ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರಿಗೆ ಪ್ರಬಲ ಖಾತೆಗಳು ಲಭಿಸಿವೆ. ಉಳಿದಂತೆ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ಸಚಿವರು ಸಾಮಾನ್ಯ ಖಾತೆಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಈ ತಿಂಗಳ 3ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಚಿವರಿಗೆ ಹತ್ತು ದಿನಗಳ ಬಳಿಕ ವಿಧಾನಮಂಡಲ ಅಧಿವೇಶನ ಶುರುವಾಗುವ ಹಿಂದಿನ ದಿನವಾದ ಬುಧವಾರ ಸಂಜೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರಿಂದ ಅಧಿಕೃತವಾಗಿ ಅಧಿಸೂಚನೆ ಹೊರಬಿದ್ದಿದೆ.

ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಎಂ. ಕೃಷ್ಣಪ್ಪ ಹಾಗೂ ಬಸವರಾಜ ಶಿವಣ್ಣನವರ್‌ ಅವರಿಗೆ ಈವರೆಗೂ ಅವಕಾಶ ಕಲ್ಪಿಸಿಲ್ಲ. ಒಂದು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಂಡಿದ್ದು, ಮಹಿಳಾ ಸಚಿವರಿಲ್ಲದ 33 ಸದಸ್ಯರ ಸಂಪುಟದೊಂದಿಗೆ ಡಿ.ಕೆ.ಶಿವಕುಮಾರ್‌ ಅಧಿವೇಶನ ಎದುರಿಸಲಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಯಿಂದ ಉಂಟಾಗಿದ್ದ ಅಸಮಾಧಾನ ಮುಂದುವರೆಯುವ ಸಾಧ್ಯತೆಯಿದೆ.

ಇನ್ನು ಖಾತೆ ಹಂಚಿಕೆ ಪಟ್ಟಿಯಲ್ಲಿ ಮುಖ್ಯಮಂತ್ರಿ ಶಿವಕುಮಾರ್‌ ಅವರ ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ತಮಗೆ ಇಷ್ಟವಿಲ್ಲದ ಖಾತೆ ನೀಡಿರುವ ಬಗ್ಗೆ ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಪರಿಣಾಮ ನೂತನ ಸಚಿವರ ಖಾತೆ ಹಂಚಿಕೆ ವೇಳೆ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆಗಳನ್ನೂ ಬದಲಿಸಲಾಗಿದೆ.

ಹಠ ಸಾಧಿಸಿ ಗೆದ್ದ ಮುನಿಯಪ್ಪ:

ಮೊದಲ ಹಂತದ ಸಂಪುಟದಲ್ಲಿ ಆಹಾರ ಇಲಾಖೆಯನ್ನೇ ಮುಂದುವರೆಸಿದ್ದರಿಂದ ಅಸಮಾಧಾನಗೊಂಡಿದ್ದ ಕೆ.ಎಚ್. ಮುನಿಯಪ್ಪ ಸಮಾಜ ಕಲ್ಯಾಣ ಖಾತೆಗಾಗಿ ಪಟ್ಟು ಹಿಡಿದಿದ್ದರು. ಮುನಿಯಪ್ಪ ಅವರ ಜತೆಗೆ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಶಿವರಾಜ್ ತಂಗಡಗಿ ಅವರು ಸಹ ಸಮಾಜ ಕಲ್ಯಾಣ ಇಲಾಖೆ ಖಾತೆಗಾಗಿ ತೀವ್ರ ಲಾಬಿ ನಡೆಸಿದ್ದರು. ಅಂತಿಮವಾಗಿ ತಮ್ಮ ಹಠ ಸಾಧಿಸುವಲ್ಲಿ ಮುನಿಯಪ್ಪ ಯಶಸ್ವಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಗಿಟ್ಟಿಸಿದ್ದಾರೆ.

ತಂಗಡಗಿ ಅಸಮಾಧಾನ:

ಸಮಾಜ ಕಲ್ಯಾಣ ಇಲಾಖೆ ಮೇಲೆ ಆಸಕ್ತಿ ಹೊಂದಿದ್ದ ಶಿವರಾಜ್‌ ತಂಗಡಗಿ ಅವರು ತೀವ್ರ ಪ್ರಯತ್ನ ನಡೆಸಿದ್ದರು. ವರಿಷ್ಠರಿಂದ ಭರವಸೆಯೂ ದೊರೆತಿತ್ತು ಎನ್ನಲಾಗಿದೆ. ಇದರ ನಡುವೆಯೂ ಹಿಂದೆ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೇ ಮುಂದುವರೆಸಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಖಾತೆ ಹಂಚಿಕೆ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಲು ಸಹ ನಿರಾಕರಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ.

ರಾಮಲಿಂಗಾರೆಡ್ಡಿ ಖಾತೆ ಬದಲು:

ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಖುದ್ದು ಶಿವಕುಮಾರ್‌ ಅವರು ತಡರಾತ್ರಿವರೆಗೆ ಮನವೊಲಿಸಿದ್ದರು. ಇದೀಗ ಸಂಪುಟ ವಿಸ್ತರಣೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಬದಲಿಗೆ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಅಲ್ಪಸಂಖ್ಯಾತರಿಗೆ ಆದ್ಯತೆ:

ಖಾತೆ ಹಂಚಿಕೆಯಲ್ಲೂ ಅಲ್ಪಸಂಖ್ಯಾತ ಸಚಿವರಿಗೆ ಆದ್ಯತೆ ನೀಡಲಾಗಿದೆ. ಜಮೀರ್‌ ಅಹ್ಮದ್‌ಖಾನ್‌ ಅವರಿಗೆ ವಸತಿ ಇಲಾಖೆ ತಪ್ಪಿಸಲು ತೀವ್ರ ಪ್ರಯತ್ನ ನಡೆದ ಹೊರತಾಗಿಯೂ ಜಮೀರ್‌ ಅವರು ವಸತಿ ಇಲಾಖೆ ಉಳಿಸಿಕೊಂಡಿದ್ದಾರೆ. ಯು.ಟಿ. ಖಾದರ್‌, ರಿಜ್ವಾನ್‌ ಅರ್ಷದ್ ಅವರಿಗೂ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ.

ಹಾಲಿ ಸಚಿವರ ಬದಲಾದ ಖಾತೆಗಳು

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ, ಅಲ್ಪಸಂಖ್ಯಾತ ಹಾಗೂ ಹಜ್‌, ವಕ್ಫ್‌ ಖಾತೆಗಳನ್ನು ಹೊಂದಿದ್ದ ಬಿ.ಝಡ್‌. ಜಮೀರ್‌ ಅಹ್ಮದ್‌ಖಾನ್‌ ಅವರ ಬಳಿ ವಸತಿ ಖಾತೆ ಮಾತ್ರ ಉಳಿಸಲಾಗಿದೆ. ಉಳಿದಂತೆ ಅಲ್ಪಸಂಖ್ಯಾತ ಹಾಗೂ ಹಜ್‌, ವಕ್ಫ್‌ ಖಾತೆಯನ್ನು ಸಚಿವ ಯು.ಟಿ. ಖಾದರ್‌ ಅವರಿಗೆ ಆರೋಗ್ಯ ಇಲಾಖೆಯ ಜತೆ ಹೆಚ್ಚುವರಿಯಾಗಿ ವಹಿಸಲಾಗಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಚಲುವರಾಯಸ್ವಾಮಿ ಅವರಿಗೆ ರಾಮಲಿಂಗಾರೆಡ್ಡಿ ಅವರಿಂದ ತೆರವಾದ ಬೃಹತ್‌ ಮತ್ತು ಮಧ್ಯಮ ನೀರಾವರಿ ಇಲಾಖೆ ಹೊಣೆ ನೀಡಲಾಗಿದೆ.

ಹಳೆ ಖಾತೆಯಲ್ಲೇ ಮುಂದುವರೆದವರು:

ಸಂತೋಷ್‌ ಲಾಡ್‌ ಅವರಿಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಖಾತೆ, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಶಿವರಾಜ್‌ ತಂಗಡಗಿ ಅವರ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳೇ ಮುಂದುವರೆಸಲಾಗಿದೆ.

ಹೊಸಬರಿಗೆ ಯಾವ ಖಾತೆ?

ಕೆ.ಎಚ್. ಮುನಿಯಪ್ಪ ಅವರಿಂದ ತೆರವಾದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೂತನ ಸಚಿವ ರಿಜ್ವಾನ್‌ ಅರ್ಷದ್ ಅವರಿಗೆ ನೀಡಲಾಗಿದೆ. ಹೊಸದಾಗಿ ಸಂಪುಟ ಸೇರಿರುವ ಲಕ್ಷ್ಮಣ ಸವದಿ ಅವರಿಗೆ ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ ಇಲಾಖೆ, ರುದ್ರಪ್ಪ ಲಮಾಣಿ ಅವರಿಗೆ ಸಕ್ಕರೆ ಮತ್ತು ಜವಳಿ, ಟಿ. ರಘು ಮೂರ್ತಿ ಅವರಿಗೆ ಪರಿಶಿಷ್ಟ ಪಂಡಗಳ ಕಲ್ಯಾಣ ಇಲಾಖೆ, ಡಾ. ಅಜಯ್‌ ಸಿಂಗ್‌ ಅವರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಇಲಾಖೆ, ಬಸವರಾಜ ರಾಯರಡ್ಡಿ ಅವರಿಗೆ ಉನ್ನತ ಶಿಕ್ಷಣ, ಶಿವಲಿಂಗೇಗೌಡ ಅವರಿಗೆ ಅಬಕಾರಿ, ಪುಟ್ಟರಂಗಶೆಟ್ಟಿ ಅವರಿಗೆ ವೆಂಕಟೇಶ್‌ ಅವರಿಂದ ತೆರವಾದ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ, ವಿಜಯಾನಂದ ಕಾಶಪ್ಪನವರ್‌ ಅವರಿಗೆ ಸಣ್ಣ ಕೈಗಾರಿಕೆ ಜವಾಬ್ದಾರಿ ನೀಡಲಾಗಿದೆ.

ಮೊದಲ ಬಾರಿಗೆ ಶಾಸಕರಾಗಿ ಮೊದಲ ಯತ್ನದಲ್ಲೇ ಸಂಪುಟ ಸೇರಿರುವ ಕೆ.ಎಸ್‌. ಬಸವಂತಪ್ಪ ಅವರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳ ಸಾರಿಗೆ ಇಲಾಖೆಗಳ ಹೊಣೆ ವಹಿಸಲಾಗಿದೆ.

ನರೇಂದ್ರಸ್ವಾಮಿಗೆ ಕೃಷಿ ಖಾತೆ:

ಸಮಾಜ ಕಲ್ಯಾಣದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದೆ. ಎಚ್.ಸಿ. ಬಾಲಕೃಷ್ಣ ಅವರಿಗೆ ಪೌರಾಡಳಿತ, ಬಿ. ನಾಗೇಂದ್ರ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ನೀಡಲಾಗಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆ ವಹಿಸಿಕೊಂಡಿದ್ದ ನಾಗೇಂದ್ರ ಅವರು ಮತ್ತೆ ಅದೇ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ವಾಲ್ಮೀಕಿ ಹಗರಣದ ಆರೋಪದ ಹಿನ್ನೆಲೆ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.

ಸಿಎಂ ಬಳಿಯೇ ಉಳಿದ ಖಾತೆಗಳು:

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಬಳಿ ಯಾರಿಗೂ ಹಂಚಿಕೆಯಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಜತೆಗೆ ಪ್ರಮುಖ ಏಳು ಖಾತೆಗಳು ಉಳಿದುಕೊಂಡಿವೆ.

ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್), ಗುಪ್ತಚರ, ಮಾಹಿತಿ, ಕಾನೂನು ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ನಗರ ಮತ್ತು ಪಟ್ಟಣ ಯೋಜನೆ ಆಯುಕ್ತಾಲಯ, ಬಿಡಿಎ ಹಾಗೂ ಬಿಎಆರ್‌ಡಿಎ ಶಿವಕುಮಾರ್‌ ಬಳಿಯೇ ಉಳಿದಿವೆ.

ಪೌರ ಕಾರ್ಮಿಕ ದಂಪತಿ ಪುತ್ರನಿಗೆ 2 ಖಾತೆ:

ಪೌರಕಾರ್ಮಿಕ ದಂಪತಿಯ ಪುತ್ರ ಕೆ.ಎಸ್‌.ಬಸವಂತಪ್ಪ ಅವರಿಗೆ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಮುಜರಾಯಿ ಹಾಗೂ ಬಂದರು, ಮೀನುಗಾರಿಕೆ, ಒಳನಾಡ ಸಾರಿಗೆ ವಹಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

NEET Row: ಎಲ್ಲಾ ಪ್ರಶ್ನೆಗೂ ಉತ್ತರ ಕೊಡ್ತೀನಿ, ಚರ್ಚೆಗೆ ಬನ್ನಿ; ವಿರೋಧ ಪಕ್ಷಗಳ ನಾಯಕರಿಗೆ ಅಮಿತ್ ಶಾ ಸವಾಲು
ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರಿಗೆ ಕೊನೆಗೂ ಸಿಕ್ತು ಖಾತೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಅಧಿಕೃತ ಪಟ್ಟಿ!