
ವಿಜಯನಗರ, (ಫೆ.19): ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ಫೆಬ್ರವರಿ 18ರಂದು ಹೊರಬಿದ್ದಿದ್ದು, "ಮಳೆ ಬೆಳೆ ಸಂಪಾಯಿತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದಾನೆ.
"ಮಳೆ ಬೆಳೆ ಸಂಪಾತಲೇ ಪರಾಕ್" ಎನ್ನುವ ಕಾರ್ಣಿಕ ಘೋಷಣೆಯಾಗಿದೆ. ಇದು ಉತ್ತಮ ಕಾರ್ಣಿಕ ನುಡಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಕಾರ್ಣಿಕವನ್ನು ಆಲಿಸಿದವರ ಪ್ರಕಾರ ಇದು ಒಟ್ಟಾರೆ ಉತ್ತಮ ಕಾರ್ಣಿಕ ನುಡಿ ಎಂದು ಹೇಳಲಾಗಿದೆ.
Huvina Hadagali: "ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ
ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರದ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದು, ನೈರುತ್ಯ ಭಾಗದ ಪ್ರಭಾವಿ ಮುಖಂಡ ಮುಂದೆ ರಾಜ್ಯವನ್ನಾಳುತ್ತಾನೆ. ಕುಬೇರನ ಸ್ಥಾನದಲ್ಲಿರುವ ವ್ಯಕ್ತಿ ಮುಂದಿನ ರಾಜಕಾರಣ ಮಾಡ್ತಾನೆ. ಅವರ ಅವಧಿಯಲ್ಲಿ ರಾಜ್ಯದ ಜನರು ಸಂಪನ್ನರಾಗುತ್ತಾರೆ. ಸುಖ ಶಾಂತಿ ಸಂಪತ್ತು ನೀಡುವ ರಾಜಕಾರಣಿ ಬರ್ತಾನೆ. ಮುಂಬರುವ ಸರ್ಕಾರ ಐದು ವರ್ಷಗಳ ಕಾಲ ಸಂಪತ್ಪರಿತವಾಗಿ ಇರುತ್ತದೆ ಎಂದಿದ್ದಾರೆ.
ನೈಋತ್ಯ ಅಂದ್ರೆ ಹಳೇ ಮೈಸೂರು ಭಾಗ
ಹಾಗಾದ್ರೆ, ಮೈಲಾರದ ಕಾರ್ಣಿಕ ವಾಣಿ ವಿಶ್ಲೇಷಿಸಿದಂತೆ, ಕರ್ನಾಟಕದ ನೈಋತ್ಯ ಭಾಗವೆಂದರೆ ಹಳೇ ಮೈಸೂರು ಭಾಗ. ಸದ್ಯ ಈ ಭಾಗದ ಪ್ರಭಾವಿ ವ್ಯಕ್ತಿಗಳೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ. ಈಗಾಗಲೇ ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರೂ ಇಲ್ಲ.
ಈ ಹಿಂದೆ ಮೈಲಾರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಗಡ್ಡಧಾರಿ ವ್ಯಕ್ತಿಯೊಬ್ಬರು ರಾಜ್ಯದ ಮುಖಮಂತ್ರಿಯಾಗಲಿದ್ದರು ಎಂದು ತಿಳಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು.
ಏಕೆಂದರೆ ಕೆಲವೇ ದಿನಗಳ ಮುಂಚೆ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ ನೀಡಿ, ಬೆಳ್ಳಿ ಹೆಲಿಕಾಪ್ಟರ್ ನೀಡಿದ್ದರು. ಅಲ್ಲದೇ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಜೊತೆ ಮಾತುಕತೆ ನಡೆಸಿದ್ದರು.
ಮೈಲಾರದ ಕಾರ್ಣಿಕ ಭವಿಷ್ಯ ನಿಜವಾಗುತ್ತಾ? ನೈಋತ್ಯ ಭಾಗದ ನಾಯಕ ರಾಜ್ಯವನ್ನಾಳುತ್ತಾನ? ಎನ್ನುವುದು ವಿಧಾನಸಭೆ ಚುನಾವಣೆ ಬಳಿಕ ತಿಳಿಯಲಿದೆ.
ಕಾರ್ಣೀಕದ ಅರ್ಥ:
ದೈವವಾಣಿಯನ್ನು ಆಲಿಸಲು ನಾಡಿನ ವಿವಿಧ ಭಾಗಗಳಿಂದ ಸಹಸ್ರಾಜ ಸಾವಿರಾರು ಜನ ಭಾಗವಹಿಸಿದ್ದರು. ಈ ಬಾರಿ ಗೊರವಯ್ಯ ನುಡಿದ ಕಾರ್ಣಿಕ ನಾಡಿಗೆ ಒಳಿತು ಎಂಬ ಸಂದೇಶ ನೀಡಿದೆ. ಮಳೆ-ಬೆಳೆ ಉತ್ತಮವಾಗಿ ಆಗುತ್ತದೆ. ಹೊಳೆ-ಹಳ್ಳಗಳು- ಕೆರೆ-ಕಟ್ಟೆಗಳು ತುಂಬುತ್ತವೆ. ಎಲ್ಲವು ಆಶಾದಾಯಕವಾಗಿದೆ ಎಂದು ಅರ್ಥೈಸಿಕೊಂಡ ಹಿರಿಯರು. ಕಾರ್ಣಿಕ ಕೇಳಲು ವಿವಿಧ ಜಿಲ್ಲೆಯ ಬಹುತೇಕ ಹಿರಿಯರು ಆಗಮಿಸಿದ್ದರು.
ಶತಮಾನಗಳ ಕಾಲದ ಇತಿಹಾಸ
ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದು ಈ ಭಾಗದಲ್ಲಿ ನಂಬಲಾಗುವ ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಿರುವುದಕ್ಕೂ ದಶಕಗಳ ಇತಿಹಾಸವಿದೆ. ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಶತಮಾನಗಳ ಕಾಲದ ಇತಿಹಾಸವಿದ್ದು, ಅದರಂತೆ 1856ರಲ್ಲಿ ಕೆಂಪು ನೊಣಗಳಿಗೆ ಕಷ್ಟ ಪ್ರಾಪ್ತಿಯಾದೀತಲೇ ಪರಾಕ್ ಎಂಬ ಕಾರ್ಣಿಕ ನುಡಿ, ಹಿನ್ನೆಲೆಯಲ್ಲಿ ಭಾರತ(India) ದೇಶವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು, ಆಡಳಿತ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಸಿಪಾಯಿದಂಗೆ ನಡೆಯಿತು. 1984ರಲ್ಲಿ ಇಬ್ಬನಿ ಕರಗಿತಲೇ ಪರಾಕ್ ಕಾರ್ಣಿಕ ನುಡಿದಾಗ, ದೇಶದ ಅಂದಿನ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಅವರ ಹತ್ಯೆಯಾಗಿತ್ತು. ಅದೇ ರೀತಿ 1991ರಲ್ಲಿ ಮುತ್ತು ಒಡೆದು ಮೂರು ಭಾಗ ಆದಿತಲೇ ಪರಾಕ್ ಎಂಬ ಕಾರ್ಣಿಕ ನುಡಿದಾಗ, ಪ್ರಧಾನಿ ರಾಜೀವ ಗಾಂಧಿ ಬಾಂಬ್ ಸ್ಫೋಟದಿಂದ ನಿಧನ ಹೊಂದಿದ ನಿದರ್ಶನಗಳಿವೆ ಎನ್ನುತ್ತಾರೆ ದೇವಸ್ಥಾನದ ವಂಶ ಪರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.