
ಮುಂಬೈ(ನ.10) ಅಕ್ರಮ ಹಣ ವರ್ಗಾವಣೆ ಪ್ರಕರದಲ್ಲಿ ಜೈಲು ಸೇರಿದ್ದ ಶಿವಸೇನೆ ನಾಯಕ ಸಂಜಯ್ ರಾವತ್ ಬರೋಬ್ಬರಿ 102 ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಬಂಧನವಾಗಿದೆ ಎಂದು ಸಂಜಯ್ ರಾವತ್ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಆರೋಪಿಸಿತ್ತು. ಇತ್ತ ಕಾಂಗ್ರೆಸ್ ಹಾಗೂ ಎನ್‌ಸಿಪಿ ಕೂಡ ಇದೇ ಆರೋಪವನ್ನು ಮಾಡಿತ್ತು. ಇದೀಗ ಜೈಲಿನಿಂದ ಹೊರಬಂದಿರುವ ಸಂಜಯ್ ರಾವತ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗುವುದಾಗಿ ಹೇಳಿದ್ದಾರೆ. ಮಾಧ್ಯಮದ ಜೊತೆ ಈ ವಿಚಾರ ಹಂಚಿಕೊಂಡಿದ್ದಾರೆ. ಕೆಲಸದ ನಿಮಿತ್ತ ಭೇಟಿಯಾಗುತ್ತಿರುವುದಾಗಿ ರಾವತ್ ಹೇಳಿದ್ದಾರ. ಆದರೆ ರಾವತ್ ಭೇಟಿ ಇದೀಗ ಹಲವು ಕುತೂಹಲ ಕೆರಳಿಸಿದೆ.
ಇಂದು ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಭೇಟಿಯಾಗುತ್ತೇನೆ. ಇನ್ನು ಎರಡರಿಂದ ನಾಲ್ಕು ದಿನದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗುತ್ತೇನೆ. ಬಳಿಕ ದೆಹಲಿಗೆ ತೆರಳಿ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಭೇಟಿಯಾಗುತ್ತೇನೆ ಎಂದು ರಾವತ್ ಹೇಳಿದ್ದಾರೆ. ಕೇವಲ ಇಷ್ಟೇ ಹೇಳಿದ್ದರೆ ಇದರಲ್ಲಿ ಯಾವುದೇ ಅಚ್ಚರಿ ಇರಲಿಲ್ಲ. ಆದರೆ ಸಂಜಯ್ ರಾವತ್, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಸಂಜಯ್ ರಾವುತ್‌ಗೆ 102 ದಿನಗಳ ಬಳಿಕ ಜಾಮೀನು!
ಮಹಾರಾಷ್ಟ್ರ ಸರ್ಕಾರ ಕೆಲ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕೇವಲ ವಿರೋಧಿಸಬೇಕು ಅನ್ನೋ ಕಾರಣಕ್ಕೆ ಸರ್ಕಾರವನ್ನು ನಾನು ವಿರೋಧಿಸುವುದಿಲ್ಲ. ಉತ್ತಮ ಕೆಲಸ ಮಾಡಿದ್ದಾರೆ. ಅದನ್ನು ಮುಕ್ತವಾಗಿ ಹೇಳುತ್ತಿದ್ದೇನೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಈ ಹೇಳಿಕೆ ಹಾಗೂ ಬಿಜೆಪಿ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
3 ತಿಂಗಳ ಬಳಿಕ ಮುಂಬೈ ಕೋರ್ಚ್‌ನಿಂದ ಬೇಲ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ನಾಯಕ, ಸಂಸದ ಸಂಜಯ್ ರಾವುತ್ ಅವರಿಗೆ ಸ್ಥಳೀಯ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.ಆದರೆ ಜಾಮೀನು ನೀಡಿಕೆ ವಿರೋಧಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಇದನ್ನು ಬಾಂಬೆ ಹೈಕೋರ್ಚ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.ಮುಂಬೈನ ಪತ್ರಾ ಛಾಲ್ ನವೀಕರಣ ಕಾಮಗಾರಿಯಲ್ಲಿ ಸಂಜಯ್ ರಾವುತ್ ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಿದ್ದ ಇ.ಡಿ. ಅಧಿಕಾರಿಗಳು ಜು.31ರಂದು ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.ತಮ್ಮ ಬಂಧನ ‘ಅಧಿಕಾರದ ದುರ್ಬಳಕೆ ಮತ್ತು ರಾಜಕೀಯ ಪ್ರತೀಕಾರಕ್ಕೆ ಉದಾಹರಣೆ ಎಂದು ರಾವುತ್ ಆರೋಪಿಸಿದ್ದರೆ, ಶಿವಸೇನಾ ನಾಯಕ ಹಣಕಾಸು ಅಕ್ರಮ ನಡೆಸಿದ್ದಕ್ಕೆ ಸಾಕಷ್ಟುಸಾಕ್ಷ್ಯಗಳಿವೆ ಎಂದು ಇ.ಡಿ.ವಾದಿಸಿತ್ತು.
ಪ್ರಧಾನಿ ಚಿಂತನೆ ಬದಲಿಸಬೇಕು, ಮೋದಿ ವಿರುದ್ಧ ಗುಡುಗಿದ ಆಪ್ತ ರಾಜ್ ಠಾಕ್ರೆ!
ಮುಂಬೈನಲ್ಲಿ ಚಾಳ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗಿರುವ 1,034 ಕೋಟಿ ರು. ಅಕ್ರಮ ಹಣ ವರ್ಗಾವಣೆಯ ಕುರಿತಾಗಿ ಇ.ಡಿ. ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಆ.8ರಂದು ಬಂಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.