
ರಾಮನಗರ(ಮಾ.21): ರಾಮನಗರದಲ್ಲಿ ಸೀರೆಗಳು ಸಿಕ್ಕಿರುವುದರ ಹಿಂದೆ ಜೆಡಿಎಸ್ ಕೈವಾಡ ಇದೆ. ಚುನಾವಣಾ ಆಯೋಗಕ್ಕೆ ದೂರು ಕೊಡಲು ಮಾಡಿರುವ ಡ್ರಾಮಾ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೆಸರಿನಲ್ಲಿ ಸೀರೆಗಳನ್ನು ಖರೀದಿಸಿರುವಂತೆ ಬಿಲ್ ಹಾಕಿಸಿ ಗಿಮಿಕ್ ಮಾಡಿದ್ದಾರೆ. ಜನರ ಮುಂದೆ ನಮ್ಮನ್ನು ಬೆತ್ತಲೆ ಮಾಡಲು ಅವರು ಮಾಡಿರುವ ನಾಟಕ ಎಂದು ಟಾಂಗ್ ನೀಡಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಶಿವರಾತ್ರಿ ಹಬ್ಬದ ಪ್ರಯುಕ್ತ ಕೆಲವು ಕಡೆ ಗಿಫ್ಟ್ ಕೊಟ್ಟಿದ್ದೇವೆ. ಚುನಾವಣೆ ನೀತಿ ಸಂಹಿತೆ ಬಂದಾಗ ಅದನ್ನು ನಿಲ್ಲಿಸಿದ್ದೇವೆ.
ನೀತಿ ಸಂಹಿತೆ ವೇಳೆ ಹಂಚೋಕೆ ನಾವೇನು ದಡ್ಡರಾ. ಇನ್ನೊಂದಷ್ಟು ಜನರಿಗೆ ಗಿಫ್ಟ್ ಕೊಟ್ಟಿಲ್ಲ. ಹಾಗಾಗಿ ಚುನಾವಣೆ ಮುಗಿದ ಬಳಿಕ ಅದನ್ನು ಕೊಡುತ್ತೇವೆ. ನಾವು ಸಂಪಾದನೆ ಮಾಡಿದ್ದರಲ್ಲಿ ಒಂದಿಷ್ಟನ್ನು ಬಡವರಿಗೆ ಹಂಚುತ್ತೇವೆ. ಆರೋಪ ಮಾಡುವವರ ಬಳಿಯೂ ಹಣ ಇದೆಯಲ್ಲ. ನೀವು ಬಡವರಿಗೆ ಕೊಡಿ ಎಂದರು.
ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ
ನಾನೇ ಸಾಕಿದ ಗಿಣಿ, ನನ್ನನ್ನೇ ಹದ್ದಾಗಿ ಕುಕ್ಕಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಬಾಲಕೃಷ್ಣರವರು, ಕುಮಾರಸ್ವಾಮಿಯವರು ಚುನಾವಣೆಗೆ ಬರುವ ಮುಂಚೆಯೇ ನಾನು ಶಾಸಕನಾಗಿದ್ದೆ. ಬಿಜೆಪಿ ಶಾಸಕನಾಗಿದ್ದರೂ ಬಿಜೆಪಿಗೆ ಅನ್ಯಾಯ ಮಾಡಿ, ಅವರ ಸಂಸತ್ ಚುನಾವಣೆಯಲ್ಲಿ ಸಾಥ್ ಕೊಟ್ಟಿದ್ದೆ. ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು 4 ಸಾವಿರ ಇತ್ತು. ನಾನು ಅವರಿಗೆ 8 ಸಾವಿರ ಮತಗಳ ಲೀಡ್ ಕೊಡಿಸಿದೆ. ಅದಾದ ಬಳಿಕ ಜೆಡಿಎಸ್ ಸೇರಿಕೊಂಡೆ. ನಾನು ಸಿಎಂ ಆಗಲು ಬಾಲಕೃಷ್ಣ ಕಾರಣ ಅಂತ ಅವರೇ ಸದನದಲ್ಲೂ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಆದಾಗ ಬಿಡಿಎ ಚೇರ್ಮನ್ ಮಾಡುತ್ತೇನೆ ಅಂದಿದ್ದರು, ಮಾಡಲಿಲ್ಲ ಎಂದು ಕಿಡಿಕಾರಿದ ಅವರು, ರಾಜಕೀಯ ತೆವಲು ಎಂಬ ಅರ್ಥ ನನಗೆ ಗೊತ್ತಿಲ್ಲ. ಇದಕ್ಕೆ ನಾನು ಕ್ಷಮೆ ಕೇಳುತ್ತೇನೆ ನಿಖಿಲ್ ಅಣ್ಣ. ಇನ್ನು ಮುಂದೆ ನಿಖಿಲ್ ಅಣ್ಣನ ಕೇಳಿಯೇ ಮಾತನಾಡುತ್ತೇನೆ ಎಂದು ಟಾಂಗ್ ನೀಡಿದರು.
ಚುನಾವಣೆಗೆ ಪ್ಯಾರಾ ಮಿಲಿಟರಿ ಕರೆಸಬೇಕು ಎಂಬ ಕುಮಾರಸ್ವಾಮಿಯವರ ಮಾತಿನ ಅರ್ಥ ಮೈತ್ರಿ ಅಭ್ಯರ್ಥಿ ಈಗಾಗಲೇ ಸೋಲನ್ನು ಒಪ್ಪಿಕೊಂಡಂತಾಗಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಂಟ್ರೋಲ್ ನಲ್ಲಿ ಇದೆ. ಆಯೋಗದ ಮೇಲೆ ದೂರುವವರು ಸೋಲನ್ನ ಒಪ್ಪಿಕೊಂಡಿದ್ದಾರೆ ಅಂತ ಅರ್ಥ. ಸೋತ ಮೇಲೆ ದುಡ್ಡು, ಸೀರೆ, ಗಿಫ್ಟ್ ಕಾರ್ಡ್ ಹಂಚಿ ಗೆದ್ದರು ಅಂತಾರೆ. ಎಷ್ಟೋ ಜನ ಕಾರ್ಯಕರ್ತರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಅವರು ದಡ್ಡರಲ್ಲ, ಎಲ್ಲರೂ ಪ್ರಜ್ಞಾವಂತರು. ನಾವು ಅವರ ಮನವೊಲಿಸಿ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.
ಮೈತ್ರಿಯಲ್ಲಿ ಎಚ್ಡಿಕೆ ಸಿಎಂ ಅಭ್ಯರ್ಥಿಯೆಂದು ಘೋಷಿಸಲಿ ನೋಡೋಣ
ರಾಮನಗರ: ಒಕ್ಕಲಿಗರೆಲ್ಲರು ಜೆಡಿಎಸ್ ಪಕ್ಷ ನಂಬಿದ್ದರು. ಅಂತಹ ಪಕ್ಷವನ್ನು ತೆಗೆದುಕೊಂಡು ಹೋಗಿ ಮೋದಿ ಪಾದದ ಅಡಿ ಇಟ್ಟಿದ್ದೀರಿ. ಈಗ ಒಕ್ಕಲಿಗರ ಸ್ಥಿತಿ ಏನಾಗಬೇಕು. ಮೈತ್ರಿ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯೆಂದು ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಲು ಸಾಧ್ಯವೇ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಪಾರುಪತ್ಯ ಇದ್ದ ಜನತಾದಳದ ಕಥೆ ಮುಗಿಸಿದ್ದಾರೆ. ಮುಂದೆ ಕುಮಾರಸ್ವಾಮಿ ಅವರ ಸ್ಥಿತಿ ಏನು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿಸಲಿ ನಾವೂ ಕೂಡ ಸಪೋರ್ಟ್ ಮಾಡುತ್ತೇವೆ ಎಂದರು.
ಹರಕೆ ಕುರಿ ಯಾರೆಂದು ಮತದಾರರೇ ಉತ್ತರ ಕೊಡ್ತಾರೆ: ಸಿ.ಪಿ.ಯೋಗೇಶ್ವರ್
ಈಗ ಎರಡು ಸೀಟು ಪಡೆಯೋಕೆ ತಿಣುಕಾಡುತ್ತಿದ್ದಾರೆ. ಅವರು ಯಾವ ಪಕ್ಷದ ಜೊತೆ ಹೋದರೂ ಅಸಮಾಧಾನ ಹೊರಹಾಕುತ್ತಾರೆ. ಇನ್ನೂ ಒಂದು ತಿಂಗಳ ಬಳಿಕ ಮೋದಿ, ಅಮಿತ್ ಷಾ ಅವರನ್ನು ಹೇಗೆ ಬಯ್ಯುತ್ತಾರೆ ನೋಡಿ. ಅವರು ಎಲ್ಲಿ ಹೋದರೂ ಕೂಡ ಎಲ್ಲರನ್ನೂ ಬೈದುಕೊಂಡೆ ಹೊರಗೆ ಬರುತ್ತಾರೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಗಿಮಿಕ್ ರಾಜಕಾರಣಿ. ವಿರೋಧಿಗಳ ಮೇಲೆ ಅಪಪ್ರಚಾರ ಮಾಡಿ ಅನುಕಂಪ ಗಿಟ್ಟಿಸಿಕೊಳ್ಳಲು ಮಾತನಾಡುತ್ತಾರೆ. ಚುನಾವಣೆ ಅಂದ ಮೇಲೆ ಎಲ್ಲವೂ ಇರುತ್ತದೆ. ಚಾಣಕ್ಯನ ತಂತ್ರ ಕುಮಾರಸ್ವಾಮಿಗೆ ಹೆಚ್ಚು ಗೊತ್ತು. ಅದನ್ನು ಇಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದು, ಅದೆಲ್ಲ ನಡೆಯುವುದಿಲ್ಲ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.