ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕದ ಹಿನ್ನೆಲೆಯಲ್ಲಿ ವೀಣಾ ಕಾಶಪ್ಪನವರ್ ಬುಧವಾರ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನವದೆಹಲಿ (ಮಾ.21): ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಆತಂಕದ ಹಿನ್ನೆಲೆಯಲ್ಲಿ ವೀಣಾ ಕಾಶಪ್ಪನವರ್ ಬುಧವಾರ ಎಐಸಿಸಿ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಪತಿ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್, ಕೂಡಲಸಂಗಮಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕೂಡ ಸಾಥ್ ನೀಡಿದರು.
ಕಣ್ಣೀರು ಹಾಕಿದ ವೀಣಾ: ಕಳೆದ ಬಾರಿ ಬಾಗಲಕೋಟೆಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವೀಣಾ ಕಾಶಪ್ಪನವರ್ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ತಮಗೆ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಖರ್ಗೆ ಮನೆ ಮುಂದೆಯೇ ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸೋಲುವಾಗ ಈ ವೀಣಾ ಬೇಕು, ಗೆಲ್ಲುವಾಗ ಬೇಡ. ಯಾವ ಆಧಾರದ ಮೇಲೆ ಟಿಕೆಟ್ ನಿರ್ಣಯಗಳು ಆಗುತ್ತವೆಯೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ವೀಣಾ ಅಭಿಮಾನಿಗಳಿಂದ ಟೈರ್‌ಗೆ ಬೆಂಕಿ, ಆಕ್ರೋಶ: ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್‌ಗೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದ ಅಭಿಮಾನಿಗಳು ಟೈರ್‌ಗೆ ಬೆಂಕಿ ಹಚ್ಚಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸಂಭಾವ್ಯ ಅಭ್ಯರ್ಥಿ ಸಚಿವ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತ ಪಾಟೀಲ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.
ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರೇ ಮುಂಚೂಣಿಯಲ್ಲಿದೆ: ಪ್ರಲ್ಹಾದ್ ಜೋಶಿ
ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ವೀಣಾ ಕಾಶಪ್ಪನವರ್ ಹೆಸರು ಸ್ಕ್ರೀನಿಂಗ್ ಕಮಿಟಿ ಮುಂದೆ ಬಂದೇ ಇಲ್ಲ ಎಂದು ಅವರು ಹೇಳಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವೀಣಾ ಕೆಲಸ ಮಾಡಿದ್ದಾರೆ. ಈಗ ಪಕ್ಕದ ಜಿಲ್ಲೆಯವರನ್ನು ಅಭ್ಯರ್ಥಿ ಮಾಡುತ್ತಿರುವುದು ಯಾಕೆ? ಸಂಯುಕ್ತ ಪಾಟೀಲ್ ಯಾರು? ಟಿಕೆಟ್ ಘೋಷಣೆ ನಂತರ ನಾವು ಮಾತನಾಡುತ್ತೇವೆ.
- ವಿಜಯಾನಂದ ಕಾಶಪ್ಪನವರ್, ಕಾಂಗ್ರೆಸ್ ಮುಖಂಡ