
ಮಂಡ್ಯ/ಮದ್ದೂರು (ಸೆ.11): ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ. ಅಯೋಗ್ಯ ಕಾಂಗ್ರೆಸ್ಸಿಗರ ಮಾತು ಕಟ್ಟಿಕೊಂಡು ಮುಸ್ಲಿಂ ಯುವಕರು ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಭವಿಷ್ಯವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಈ ಬಗ್ಗೆ ಮುಸ್ಲಿಂ ಧರ್ಮ ಗುರುಗಳು ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಮುಖ್ಯಮಂತ್ರಿ ಹೇಳಿಕೆಯನ್ನು ಗಮನಿಸಿದರೆ ಹಿಂದೂಗಳ ಮತ ಪಡೆಯದೆ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರಿಗೆ ಕೇಸರಿ ಕಂಡರೆ ಆಗೋಲ್ಲ.
ಕಿತ್ತು ಬಿಸಾಕುತ್ತಾರೆ. ಎಲ್ಲೋ ಒಂದು ಕಡೆ ಅವರೇ ಗಲಾಟೆಗಳಿಗೆ ಕುಮ್ಮಕ್ಕು ನೀಡುತ್ತಿರುವಂತೆ ಕಂಡುಬರುತ್ತಿದೆ. ರಾಜ್ಯಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಒತ್ತಾಯಿಸಿದರು. ಜಿಲ್ಲಾಧಿಕಾರಿ, ಜಿಲ್ಲಾ ಆರಕ್ಷಕ ಅಧೀಕ್ಷಕರು ಭಾನುವಾರ ಸಂಜೆ ನಡೆದಿರುವ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಒಂದು ಕೋಮಿನ ಜನ ಹಿಂದೂಗಳು ಮೆರವಣಿಗೆ ಮಾಡಬಾರದು ಅಂತ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆಂದು ಉಲ್ಲೇಖಿಸಿದ್ದಾರೆ. ಇದರಿಂದಲೇ ದುಷ್ಕರ್ಮಿಗಳ ಅಟ್ಟಹಾಸ ಎಷ್ಟರಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತದೆ. ಹಿಂದೂ ಮಹಿಳೆಯರು ಯಾವತ್ತು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿರಲಿಲ್ಲ.
ಮದ್ದೂರಿನಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ರಸ್ತೆಯಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಮಹಿಳೆಯರು ಹೋರಾಟದ ಅಖಾಡ ಪ್ರವೇಶಿಸಿದ್ದಾರೆ ಎಂದರು. ಬಿಜೆಪಿಯವರು ಕೋಮು ಸೌಹಾರ್ದತೆ ಕದಡುತ್ತಿದ್ದಾರೆಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಮಸೀದಿಯಲ್ಲಿ ಕಲ್ಲು ಇಟ್ಟುಕೊಂಡಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಇವತ್ತು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಕಿಡಿಕಾರಿದ ಅವರು, ಭದ್ರಾವತಿ ಶಾಸಕರ ಹೇಳಿಕೆಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತಹದ್ದು. ಇಂತಹ ಕೆಲಸ ರಾಜ್ಯ ಸರ್ಕಾರದಿಂದ ಆಗುತ್ತಿದೆ ಎಂದು ಟೀಕಿಸಿದರು.
ಹಿಂದೂ ಸಂಘಟನೆಗಳಿಗೆ ಧೈರ್ಯ ತುಂಬುವ ಕರ್ತವ್ಯ ನಮ್ಮದು. ಇದನ್ನು ರಾಜಕಾರಣ ಎಂದಾದರೂ ಭಾವಿಸಲಿ, ಏನಂತಾದರೂ ತಿಳಿಯಲಿ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಈ ಸರ್ಕಾರಕ್ಕೆ ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ದೇಶ ದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು. ಭಾನುವಾರ ರಾತ್ರಿ ನಡೆದ ಕಲ್ಲುತೂರಾಟಕ್ಕೆ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಅದಕ್ಕೆ ಈ ಘಟನೆ ಗೃಹ ಸಚಿವರಿಗೆ ಸಣ್ಣಪುಟ್ಟ ಘಟನೆ ಎಂದೆನಿಸಿದೆ. ಆ ಸ್ಥಾನಕ್ಕೆ ಗೌರವ ಇದ್ದರೆ ಮದ್ದೂರಿಗೆ ಬನ್ನಿ.
ಇಲ್ಲಿನ ಶಾಸಕರಿಗೆ ಸ್ವಲ್ಪನೂ ಜವಾಬ್ದಾರಿ ಇಲ್ಲ, ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ. ಕ್ಷೇತ್ರದ ಜನರ ಹಿತಾಸಕ್ತಿಗಿಂತ ಮೋಜೇ ಅವರಿಗೆ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು. ಹಿಂದೂಗಳು ಆತಂಕದಲ್ಲಿದ್ದಾರೆ, ಹಿಂದೂ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ. ನಾವು ಹಿಂದೂ ಸಂಘಟನೆ ಪರ ಇದ್ದೇವೆ. ಹಿಂದೂ ಕಾರ್ಯಕರ್ತರ ಮಟ್ಟುವುದಲ್ಲ ಕೋಮು ಸೌಹಾರ್ದತೆ ಕದಡುವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು. ಈ ಘಟನೆ ಸಂಪೂರ್ಣ ನ್ಯಾಯಾಂಗ ತನಿಖೆ ಆಗಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.