ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

By Web Desk  |  First Published Feb 12, 2019, 5:10 PM IST

2013ರ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿನ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಅನುಕಂಪ ಹಾಗೂ ನರೇಂದ್ರ ಮೋದಿ ಅವರ ಅಲೆಯಿಂದಾಗಿ ಸಂಗಣ್ಣ ಕರಡಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆದ್ದುಬಂದಿದ್ದರು. ಆದರೆ ಈ ಬಾರಿ ಅವರಿಗೆ ಸಿದ್ದರಾಮಯ್ಯ ‘ಗುಮ್ಮ’ ಕಾಡುತ್ತಿದೆ. ಜತೆಗೆ ಕಾಂಗ್ರೆಸ್- ಜೆಡಿಎಸ್ ದೋಸ್ತಿಯೂ ಏರ್ಪಡುವ ಸಾಧ್ಯತೆ ಇದೆ. ಬಿಜೆಪಿ ಪ್ರಬಲವಾಗಿರುವುದು ಸಂಗಣ್ಣ ಅವರಿಗೆ ಪ್ಲಸ್. ಸಂಗಣ್ಣ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದ್ದರೂ, ಆಕಾಂಕ್ಷಿಗಳು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲೂ ಲಾಬಿ ನಡೆಯುತ್ತಿದೆ.


ಮಹಾಭಾರತ ಸಂಗ್ರಾಮ: ಕೊಪ್ಪಳ ಲೋಕಸಭಾ ಕ್ಷೇತ್ರ

ಕೊಪ್ಪಳ[ಫೆ.12]: ಕೊಪ್ಪಳಕ್ಕೂ ಮತ್ತು ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರಿಗೂ ಈಗ ಅವಿನಾಭಾವ ಸಂಬಂಧ ಎನ್ನುವಂತಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಎರಡನೇ ಕ್ಷೇತ್ರವಾಗಿ ಕೊಪ್ಪಳವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರ ಹೆಸರು ಬಲವಾಗಿ ಪ್ರಸ್ತಾಪವಾಗುತ್ತಿದೆ.

Tap to resize

Latest Videos

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ತಾವು ಲೋಕಸಭೆ ಕಣಕ್ಕಿಳಿಯುವುದಿಲ್ಲ ಎಂಬುದಾಗಿ ಸಿದ್ದರಾಮಯ್ಯ ಬಲವಾಗಿ ಹೇಳಿದರೂ ಅವರ ಬೆಂಬಲಿಗರು ಮಾತ್ರ ಹೆಸರನ್ನು ತೇಲಿಬಿಡುತ್ತಲೇ ಇದ್ದಾರೆ. ವಿರೋಧಿಗಳಲ್ಲಿ ತುಸು ಆತಂಕ ಹುಟ್ಟಿಸುವ ತಂತ್ರವೂ ಇದಾಗಿರಬಹುದು ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಕಣಕ್ಕಿಳಿದರೆ ಲೆಕ್ಕಾಚಾರವೇ ಬದಲಾಗಲಿದೆ. ಕೇವಲ ಕೊಪ್ಪಳ ಕ್ಷೇತ್ರವೊಂದೇ ಅಲ್ಲ. ಸುತ್ತಮುತ್ತಲಿನ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದ್ದು, ಪ್ರತಿಸ್ಪರ್ಧಿ ಬಿಜೆಪಿಯಲ್ಲೂ ಅದರ ಪರಿಣಾಮ ಉಂಟಾಗಲಿದೆ. ಕೊಪ್ಪಳದ ಬಿಜೆಪಿ ಅಭ್ಯರ್ಥಿ ಬದಲಾದರೂ ಅಚ್ಚರಿ ಇಲ್ಲ ಎಂಬಂತಹ ವಾತಾವರಣ ಇದೆ.

ಸಂಸದ ಕರಡಿ ಮತ್ತೆ ಸ್ಪರ್ಧೆ

ಈಗಿರುವ ಲೆಕ್ಕಾಚಾರದ ಪ್ರಕಾರ ಸಂಸದ ಸಂಗಣ್ಣ ಕರಡಿಯೇ ಕೊಪ್ಪಳ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮೂರ್ನಾಲ್ಕು ತಿಂಗಳ ಹಿಂದೆಯೇ ಅವರ ಹೆಸರನ್ನು ಘೋಷಿಸಿದ್ದಾರೆ. ಹೀಗಾಗಿ ಅವರ ಸ್ಪರ್ಧೆ ಪಕ್ಕಾ ಎಂದೇ ಹೇಳಲಾಗುತ್ತಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಸಂಗಣ್ಣ ಕರಡಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರೆ ಮಾತ್ರ ಉಳಿದ ಲೆಕ್ಕಾಚಾರ ನಡೆಯುತ್ತವೆ. ಇಲ್ಲದಿದ್ದರೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ಸಂಗಣ್ಣ ಕರಡಿ ವಿರುದ್ಧ ಯಾರು ಎನ್ನುವುದಷ್ಟೇ ಈಗಿರುವ ಪ್ರಶ್ನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಈ ನಡುವೆಯೂ ಬಿಜೆಪಿಯಲ್ಲಿ ಡಾ.ಕೆ.ಬಸವರಾಜ, ಪಕ್ಷದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ ಸೇರಿದಂತೆ ಅನೇಕರ ಹೆಸರು ತೇಲಾಡುತ್ತಿವೆ. ಹಲವರು ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವುದೂ ಗುಟ್ಟಾಗಿಯೇನು ಉಳಿದಿಲ್ಲ.

ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ

ಬಿಜೆಪಿಗಿಂತ ಕಾಂಗ್ರೆಸ್‌ ಪಕ್ಷದಲ್ಲಿಯೇ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿ ಸಾಗಿದೆ. ಸತತ ಎರಡು ಬಾರಿ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಈ ಬಾರಿ ಹೇಗಾ​ದರೂ ಮಾಡಿ ವಶಪಡಿಸಿಕೊಳ್ಳುವ ತವಕದಲ್ಲಿದೆ. ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಬಸವರಾಜ ಹಿಟ್ನಾಳ ಅಖಾಡಕ್ಕೆ ಇಳಿಯುವುದು ಅನುಮಾನ ಎನ್ನುವ ಹಿನ್ನೆಲೆಯಲ್ಲಿ ಅನೇಕರ ಹೆಸರು ಕೇಳಿ ಬರುತ್ತಿವೆ. ಆದರೆ, ಹಿಟ್ನಾಳ ಸಹ ಕೊನೆಯ ಪ್ರಯತ್ನವನ್ನು ಮಾಡಿಯೇ ಬಿಡೋಣ ಎನ್ನುತ್ತಿದ್ದಾರೆ ಎನ್ನಲಾಗಿದೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಈ ನಡುವೆ ಇತ್ತೀಚೆಗೆ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ತಮ್ಮ ಆಪ್ತರೂ ಆಗಿರುವ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಆದರೆ, ಪಕ್ಷದ ಸ್ಥಳೀಯ ಘಟಕದಲ್ಲಿ ಅನ್ಸಾರಿ ಅವರಿಗೆ ಸಂಪೂರ್ಣ ಸಹಮತದ ವಾತಾವರಣವಿಲ್ಲ. ಇನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೆಸರು ಪ್ರಮುಖವಾಗಿ ಚಾಲ್ತಿಯಲ್ಲಿದ್ದು, ತೀವ್ರ ಪೈಪೋಟಿ ಇದೆ ಎನ್ನಲಾಗುತ್ತಿದೆ.

ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ಸಿಗುತ್ತದೆ ಎನ್ನುವುದರ ಆಧಾರದ ಮೇಲೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ನಿರ್ಧರಿತವಾಗಲಿದೆ ಎಂಬ ಮಾತು ಕೇಳಿಬಂದಿದೆ. ಹೈದ್ರಾಬಾದ್‌ ಕರ್ನಾಟಕ ವ್ಯಾಪ್ತಿಯಲ್ಲಿ ಇರುವ ಲೋಕಸಭಾ ಕ್ಷೇತ್ರಗಳ ಪೈಕಿ ಎರಡೇ ಸಾಮಾನ್ಯ ಕ್ಷೇತ್ರಗಳಾಗಿವೆ. ಹೀಗಾಗಿ, ಎರಡರಲ್ಲಿ ಒಂದನ್ನು ಮೇಲ್ವರ್ಗದವರಿಗೆ ನೀಡಲೇಬೇಕು. ಹೀಗಾಗಿ, ಅಲ್ಲಿ ಮೇಲ್ವರ್ಗದವರಿಗೆ ನೀಡಿದರೆ ಇಲ್ಲಿ ಹಿಂದುಳಿದ ವರ್ಗದವರಿಗೆ ನೀಡಲಾಗುತ್ತದೆ. ಈ ಲೆಕ್ಕಾಚಾರವೂ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆಯ ಮೇಲೆ ಪ್ರಭಾವ ಬೀರುತ್ತದೆ. ಇದಲ್ಲದೆ ಕಾಂಗ್ರೆಸ್‌ ಯುವ ಘಟಕದ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಶರಣೇಗೌಡ ಪಾಟೀಲ, ಶಿವರಾಮಗೌಡ, ಕೆ.ವಿರೂಪಾಕ್ಷಪ್ಪ ಸೇರಿದಂತೆ ಅನೇಕರ ಹೆಸರು ಆಕಾಂಕ್ಷಿಗಳ ಯಾದಿಯಲ್ಲಿವೆ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಜೆಡಿಎಸ್‌ ಮೌನ

ಸಮ್ಮಿಶ್ರ ಸರ್ಕಾರ ಇರುವುದರಿಂದ ಸ್ಥಾನ ಹೊಂದಾಣಿಕೆಯಾಗುತ್ತದೆ. ಸ್ಥಾನ ಹೊಂದಾಣಿಕೆಯಾದರೆ ಕೊಪ್ಪಳ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಾಲಾಗುವುದು ನಿಶ್ಚಿತವಾಗಿದೆ. ಜೆಡಿಎಸ್‌ ಪಕ್ಷವೇ ಕೇಳುತ್ತಿರುವ ಲೋಕಸಭಾ ಕ್ಷೇತ್ರಗಳ ಪಟ್ಟಿಯಲ್ಲಿ ಕೊಪ್ಪಳ ಇಲ್ಲವೇ ಇಲ್ಲ. ಹೀಗಾಗಿ, ಲೋಕಸಭಾ ಚುನಾವಣೆ ಕುರಿತಂತೆ ಕ್ಷೇತ್ರದಲ್ಲಿ ಜೆಡಿಎಸ್‌ ಒಂದರ್ಥದಲ್ಲಿ ಮೌನವಾಗಿಯೇ ಇದೆ. ಹಾಗೊಂದು ವೇಳೆ ಸ್ಥಾನ ಹೊಂದಾಣಿಕೆಯಾಗದಿದ್ದರೆ ಮಾತ್ರ ಇಲ್ಲಿ ಜೆಡಿಎಸ್‌ ಪಕ್ಷ ತನ್ನ ಹುರಿಯಾಳನ್ನು ಇಳಿಸುವ ಚಿಂತನೆ ಮಾಡುತ್ತದೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜೆಡಿಎಸ್‌ ಶಾಸಕರಿದ್ದಾರೆ. ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾವ್‌ ನಾಡಗೌಡ ಅವರೇ ಸಚಿವರಾಗಿರುವುದರಿಂದ ಒಂಚೂರು ಬಲ ಇದ್ದಂತೆ ಇದೆ. ಆದರೂ ಇದುವರೆಗೂ ಯಾರೊಬ್ಬರೂ ಸ್ಪರ್ಧೆ ಮಾಡುತ್ತೇವೆ ಎಂದು ಮುಂದೆ ಬಂದಿಲ್ಲ.

ಯಾರಿಗೂ ಸುಲಭದ ತುತ್ತಲ್ಲ:

ಕಳೆದ ಲೋಕಸಭಾ ಚುನಾವಣೆ ವೇಳೆ ಸಂಗಣ್ಣ ಕರಡಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅನುಕಂಪ ಇತ್ತು ಮತ್ತು ಕ್ಷೇತ್ರಾದ್ಯಂತ ನರೇಂದ್ರ ಮೋದಿ ಹವಾ ಜೋರಾಗಿಯೇ ಇತ್ತು. ಆದರೆ, ಈ ಬಾರಿ ಅಷ್ಟುಸುಲಭದ ತುತ್ತು ಬಿಜೆಪಿಗೆ ದಕ್ಕುವುದಿಲ್ಲ. ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಆಡಳಿತ ವಿರೋಧಿ ಅಲೆಯೂ ಕಾಡಬಹುದು. ಇದೆಲ್ಲಕ್ಕಿಂತ ಮಿಗಿಲಾಗಿ ಈ ಬಾರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಗ್ಗಟ್ಟಾಗಿ ಸ್ಪರ್ಧೆ ಮಾಡುವುದು ಸಮಸ್ಯೆಯಾಗಬಹುದು.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಹಾಗಂತ ಕಾಂಗ್ರೆಸ್‌ ಪಕ್ಷಕ್ಕೂ ಸುಲಭದ ತುತ್ತು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷವೇ ಮೈಲುಗೈ ಸಾಧಿಸಿದ್ದರೂ ಕ್ಷೇತ್ರದಲ್ಲಿ ಜಯ ಸಾಧಿಸಲು ಆಗಲಿಲ್ಲ. ಈ ಬಾರಿ ಬಿಜೆಪಿಯ ಬಲವೇ ಹೆಚ್ಚಳವಾಗಿದೆ. ಆದರೆ, ಸ್ಥಾನ ಹೊಂದಾಣಿಕೆಯಾಗಿ ಜೆಡಿಎಸ್‌ ಮತಗಳು ಕಾಂಗ್ರೆಸ್‌ ಪಕ್ಷದ ಮತಗಳೊಂದಿಗೆ ಕ್ರೋಢೀಕರಣವಾದರೆ ಒಂದಿಷ್ಟುಪ್ಲಸ್‌ ಆಗಬಹುದು ಅಷ್ಟೇ.

91ರಲ್ಲಿ ಸಿದ್ದು ಸ್ಪರ್ಧಿಸಿದ್ದರು

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮತ್ತು ಹಿರಿಮೆ ಇದೆ. ದೇಶ ಗಣರಾಜ್ಯವಾಗಿ ಪ್ರಥಮ ಚುನಾವಣೆ ಎದುರಿಸಿದಾಗ ಪಕ್ಷೇತರ ಅಭ್ಯರ್ಥಿ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದಲ್ಲಿಯೇ ಅಚ್ಚರಿ ಫಲಿತಾಂಶ ನೀಡಿದ ಕ್ಷೇತ್ರವಿದು. ಗಾಂಧೀಜಿ ಅವರು ಕಾಂಗ್ರೆಸ್‌ ವಿಸರ್ಜನೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ, ನಾನು ಆ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಲೋಕಸೇವಾ ಸಂಘವನ್ನು ಹುಟ್ಟು ಹಾಕಿ, ಅದರಿಂದಲೇ ತಾವು ಕಣಕ್ಕೆ ಇಳಿದ ಗಾಂಧೀಜಿ ಅವರ ಅನುಯಾಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಆಯ್ಕೆ ಮಾಡಿದ ಕೀರ್ತಿ ಕೊಪ್ಪಳ ಕ್ಷೇತ್ರದ್ದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1991ರಲ್ಲಿ ಈ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಕಾಂಗ್ರೆಸ್ಸಿನ ಬಸವರಾಜ ಪಾಟೀಲ ಅನ್ವರಿ ಎದುರು ಪರಾಭವಗೊಂಡಿದ್ದರು.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಪೈಪೋಟಿಯಲ್ಲಿ ಯಾರ್ಯಾರು?

ಕಾಂಗ್ರೆಸ್‌: ಬಸವರಾಜ ರಾಯರಡ್ಡಿ, ರಾಜಶೇಖರ ಹಿಟ್ನಾಳ, ಇಕ್ಬಾಲ್‌ ಅನ್ಸಾರಿ, ಬಸವರಾಜ ಹಿಟ್ನಾಳ, ಬಸನಗೌಡ ಬಾದರ್ಲಿ, ಶೇಖರಗೌಡ ಪಾಟೀಲ, ಶಿವರಾಮಗೌಡ, ಕೆ.ವಿರೂಪಾಕ್ಷಪ್ಪ

ಬಿಜೆಪಿ: ಹಾಲಿ ಸಂಸದ ಸಂಗಣ್ಣ ಕರಡಿ, ಡಾ.ಕೆ.ಬಸವರಾಜ, ವಿರುಪಾಕ್ಷಪ್ಪ ಸಿಂಗನಾಳ, ರಾಜಶೇಖರ ಪಾಟೀಲ, ದೊಡ್ಡನಗೌಡ ಪಾಟೀಲ

ಜೆಡಿಎಸ್‌: ಸದ್ಯಕ್ಕಂತೂ ಯಾರ ಹೆಸರೂ ಕೇಳಿಬರುತ್ತಿಲ್ಲ

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

8 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಶಾಸಕರು

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್‌ ಪಕ್ಷದಿಂದ ಮೂವರು ಹಾಗೂ ಜೆಡಿಎಸ್‌ ಪಕ್ಷದಿಂದ ಓರ್ವರು ಇದ್ದಾರೆ. ಸಿಂಧನೂರಿನ ಜೆಡಿಎಸ್‌ ಶಾಸಕ ವೆಂಕಟರಾವ್‌ ನಾಡಗೌಡ ಅವರು ಹಾಲಿ ಸಚಿವ. ವಿಧಾನಸಭಾ ಕ್ಷೇತ್ರಗಳ ವಿಧಾನಸಭಾ ಫಲಿತಾಂಶದ ಲೆಕ್ಕಾಚಾರದ ಮೇಲೆ ಬಿಜೆಪಿಯ ಹೆಚ್ಚು ಬಲಶಾಲಿಯಾಗಿದೆ.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

3 ಜಿಲ್ಲೆಗಳ ವ್ಯಾಪ್ತಿ

ಕೊಪ್ಪಳ ಲೋಕಸಭಾ ಕ್ಷೇತ್ರ ಮೂರು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವುದು ವಿಶೇಷ. ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು, ರಾಯಚೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಹಾಗೂ ಬಳ್ಳಾರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದೆ. ಹೆಚ್ಚು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯನ್ನೇ ಹೊಂದಿರುವುದರಿಂದ ಸಹಜವಾಗಿಯೇ ಇಲ್ಲಿಯ ರಾಜಕೀಯ ಬಲಾಬಲದ ಮೇಲೆಯೇ ಟಿಕೆಟ್‌ ಹಂಚಿಕೆಯಾಗುತ್ತದೆ.

click me!