
ಬೆಂಗಳೂರು, (ಫೆ.12): ರಾಜ್ಯ ಕಾಂಗ್ರೆಸ್ ಅತೃಪ್ತ ಶಾಸಕರ ನಡೆ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸಿದೆ.
ಅದರಲ್ಲೂ ಕಲಬುರಗಿ ಜಿಲ್ಲೆ ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆಯುವ ಮನಸ್ಸು ಮಾಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಹೇಳಿಕೆ.
ರಾಜೀನಾಮೆ ಖಚಿತ! ಅತೃಪ್ತರ ಪೈಕಿ ಮೊದಲ ವಿಕೆಟ್ ಪತನ?
ಅಷ್ಟೇ ಅಲ್ಲದೇ ಡಾ.ಉಮೇಶ್ ಜಾಧವ್ ಆಪ್ತ ಸಹಾಯಕ (PA), ಹಾಗೂ ಬೆಂಬಲಿಗರು ಬ್ಲಾಕ್ ಕಾಂಗ್ರೆಸ್ ಕಮಿಟಿ ಚಿಂಚೋಳಿ ಸೇರಿ ಇತರ ಕಾಂಗ್ರೆಸ್ ವಾಟ್ಸಪ್ ಗ್ರೂಪ್‌ಗಳಿಂದ ಎಕ್ಸಿಟ್ ಆಗಿದ್ದಾರೆ. ಉಮೇಶ್ ಜಾಧವ್ ಕಾಂಗ್ರೆಸ್ ತೊರೆಯುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ..?
ಪಕ್ಷ ತೊರೆಯುವುದು ಖಚಿತವಾಗಿದ್ದರಿಂದ ಅವರ ಬೆಂಬಲಿಗರು ಕಾಂಗ್ರೆಸ್ ವಾಟ್ಸಪ್ ಗ್ರೂಪ್‌ಗಳಿಂದ ಎಕ್ಸಿಟ್ ಆಗಿದ್ದಾರೆ. ಇದ್ರಿಂದ ಸದ್ಯ ವಾಟ್ಸಪ್ ಗ್ರೂಪ್‌ಗಳಲ್ಲಿ ಡಾ.ಉಮೇಶ್ ಜಾಧವ್ ನಡೆ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆದಿವೆ.
ಇನ್ನು ಕಲಬುರಗಿಯಲ್ಲಿ ಮಾತನಾಡಿದ ರಾಮಚಂದ್ರ ಜಾಧವ್, ಚಿಂಚೋಳಿ ಕಾಂಗ್ರೆಸ್ ಶಾಸಕ ಜಾಧವ್ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ದೊರೆಯುವುದು ಖಚಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅತೃಪ್ತ ಶಾಸಕರನ್ನು ಅನರ್ಹ ಮಾಡಬೇಕೆಂದು ಈಗಾಗಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.
ಸ್ಪೀಕರ್ ಕ್ರಮಕೈಗೊಳ್ಳುವ ಮುನ್ನವೇ ಉಮೇಶ್ ಜಾಧವ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಈ ಅವಕಾಶಕ್ಕಾಗಿ ಕಾಯುತ್ತಿದ್ದ ರಾಜ್ಯ ಬಿಜೆಪಿ
ಹೌದು.. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕ ಉಮೇಶ್ ಜಾಧವ್ ನಡುವೆ ಒಡಕು ಮೂಡಿತ್ತು. ಇದಾದ ಬಳಿಕ ಇಬ್ಬರ ನಡುವಿನ ಸಂಬಂಧ ಹಳಸಿತ್ತು.
ಮುಂಬರುವ ಲೋಕಸಭಾ ಚುನಾವಣೆಗೆ ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಯಾವ ಬಲಿಷ್ಟ ಅಭ್ಯರ್ಥಿ ಇಲ್ಲ ಎಂಬುದು ಬಿಜೆಪಿಗೆ ತಿಳಿದಿತ್ತು.
ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ರಾಜ್ಯ ಬಿಜೆಪಿಗೆ ತುಪ್ಪ ಬಂದು ಬಾಯಿಗೆ ಬಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.