ಎಚ್‌ಡಿ ಕುಮಾರಸ್ವಾಮಿ ದಿಲ್ಲಿಗೆ ಹೋದ್ರೆ, ರಾಜ್ಯಕ್ಕೆ ನಿಖಿಲ್? ನಡೆದಿದೆ ಭರ್ಜರಿ ತಾಲೀಮು!

By Kannadaprabha NewsFirst Published Jan 25, 2024, 9:02 AM IST
Highlights

ಜಾತ್ಯತೀತ ಜನತಾದಳ ಪಕ್ಷದಲ್ಲಿ ಮೂರನೇ ತಲೆಮಾರು ನಾಯಕತ್ವ ವಹಿಸಿಕೊಳ್ಳಲು ವೇದಿಕೆ ಸಜ್ಜಾಗುತ್ತಿದ್ದು, ಭರ್ಜರಿ ತಾಲೀಮು ಆರಂಭವಾಗಿದೆ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಅವರ ಪುತ್ರರಾಗಿರುವ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಳಿಕ ಇದೀಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ನಾಯಕತ್ವ ವಹಿಸಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ವಿಜಯ್ ಮಲಗಿಹಾಳ

ಬೆಂಗಳೂರು (ಜ.25): ಜಾತ್ಯತೀತ ಜನತಾದಳ ಪಕ್ಷದಲ್ಲಿ ಮೂರನೇ ತಲೆಮಾರು ನಾಯಕತ್ವ ವಹಿಸಿಕೊಳ್ಳಲು ವೇದಿಕೆ ಸಜ್ಜಾಗುತ್ತಿದ್ದು, ಭರ್ಜರಿ ತಾಲೀಮು ಆರಂಭವಾಗಿದೆ.ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಅವರ ಪುತ್ರರಾಗಿರುವ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಬಳಿಕ ಇದೀಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ನಾಯಕತ್ವ ವಹಿಸಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

Latest Videos

ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಅಸ್ತಿತ್ವಕ್ಕೆ ಬಂದಲ್ಲಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂಬ ವದಂತಿ ಕಳೆದ ಹಲವು ದಿನಗ‍ಳಿಂದ ಬಲವಾಗಿ ಕೇಳಿಬರುತ್ತಿದೆ. 

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: 2006ರ ನಂತರ ನೇಮಕಾತಿಗೊಂಡ 13000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ!

ಹಾಗೊಂದು ವೇಳೆ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಬಡ್ತಿ ಪಡೆದಲ್ಲಿ ಆಗ ರಾಜ್ಯ ಘಟಕದ ಜವಾಬ್ದಾರಿಯನ್ನು ನಿಖಿಲ್ ಹೆಗಲಿಗೆ ಹೊರಿಸುವ ಸಾಧ್ಯತೆಯಿದೆ ಎಂಬ ಮಾತು ಜೆಡಿಎಸ್ ಪಾಳೆಯದಿಂದಲೇ ದಟ್ಟವಾಗಿ ಕೇಳಿಬರುತ್ತಿದೆ.

ವಿದ್ಯಮಾನಗಳಿಂದ ಎಲ್ಲ ಸ್ಪಷ್ಟ: ಇತ್ತೀಚಿನ ಜೆಡಿಎಸ್ ಪಕ್ಷದಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದಾಗಲೆಲ್ಲ ತಮ್ಮೊಂದಿಗೆ ನಿಖಿಲ್ ಅವರನ್ನು ಕರೆದೊಯ್ದಿದ್ದಾರೆ.

 ಅಷ್ಟೇ ಯಾಕೆ. ಕಳೆದ ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ನಡೆದ ಉಭಯ ಪಕ್ಷಗಳ ರಾಜ್ಯ ನಾಯಕರ ಮೊದಲ ಸಭೆಯಲ್ಲಿ ನಿಖಿಲ್ ಉಪಸ್ಥಿತರಿದ್ದರು. ಅಷ್ಟರ ಮಟ್ಟಿಗೆ ಕುಮಾರಸ್ವಾಮಿ ಅವರು ಪುತ್ರನನ್ನು ತಮ್ಮ ಉತ್ತರಾಧಿಕಾರಿ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದಾರೆ. 

ಮಂಡ್ಯ, ಕೋಲಾರ ಕ್ಷೇತ್ರಗಳ ನಂತರ ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದ ಸಭೆಯನ್ನೂ ನಡೆಸಿ ಆ ಕ್ಷೇತ್ರದ ವ್ಯಾಪ್ತಿಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜತೆಗೆ ಸಲಹೆ ಸೂಚನೆಗಳನ್ನೂ ನೀಡಿದ್ದಾರೆ.

ಇದೆಲ್ಲವೂ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ನಿರ್ಣಯ ಆದ ಬಳಿಕ ನಡೆಯುತ್ತಿರುವಂಥದ್ದು. ಹಿಂದೆಯೂ ನಿಖಿಲ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದರೂ ಪಕ್ಷದ ಮುಖಂಡರ ಸಭೆಗಳನ್ನು ಗಂಭೀರವಾಗಿ ನಡೆಸಿದ ಉದಾಹರಣೆಗಳು ಇಲ್ಲ. 

ದೇವೇಗೌಡ, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುವ ಸಭೆಗಳಲ್ಲಿ ಅವರು ಭಾಗವಹಿಸುತ್ತಿದ್ದರು ಅಷ್ಟೇ. ಇತ್ತೀಚಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲೇ ಸಭೆಗಳು ನಡೆಯುತ್ತಿರುವುದು ಹೊಸ ಬೆಳವಣಿಗೆ.

ನಿಖಿಲ್ ಅವರು ಹಿಂದೆ 2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಅನುಭವಿಸಿದರು. 

ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ವದಂತಿಗಳು ಕೇಳಿಬರುತ್ತಿದ್ದರೂ ಖಚಿತವಾಗಿಲ್ಲ. ನಿಖಿಲ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವ ಬಗ್ಗೆ ಅವರ ಕುಟುಂಬದ ಸದಸ್ಯರಿಗೂ ಗೊಂದಲವಿದೆ. ಲೋಕಸಭಾ ಚುನಾವಣೆ ಬದಲು ಮುಂದಿನ 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂಬ ಅಭಿಪ್ರಾಯವೂ ಇದೆ ಎಂದು ತಿಳಿದು ಬಂದಿದೆ. 

ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್: ತೆರಿಗೆ ಪಾವತಿ ವಿನಾಯಿತಿ ಸುಳಿವು ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಸಿನಿಮಾ ಶೂಟಿಂಗ್ ನಿಲ್ಲಿಸಿದ ಹೀರೋ!

ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ ಅವರು ಚಲನಚಿತ್ರದ ಶೂಟಿಂಗ್ ಕೂಡ ನಿಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ನಾನು ವೈಯಕ್ತಿಕ ಲಾಭ ಪಡೆಯಲು ಕೆಲಸ ಮಾಡುತ್ತಿಲ್ಲ. ಪಕ್ಷದ ಕಾರ್ಯಕರ್ತನಾಗಿ, ಪಕ್ಷ ಸಂಘಟನೆ ಮಾಡಲು ಶ್ರಮಿಸುತ್ತಿದ್ದೇನೆ. ಇದಕ್ಕಾಗಿ ಸದ್ಯಕ್ಕೆ ಸಿನಿಮಾ ಶೂಟಿಂಗ್‌ ನಿಲ್ಲಿಸಿದ್ದೇನೆ ಎಂದು ಖುದ್ದು ನಿಖಿಲ್ ತಿಳಿಸಿದ್ದಾರೆ.

click me!