ಲೋಕ ಕದನ: ವೈಎಸ್‌ಆರ್‌ ಕೋಟೆಯಲ್ಲಿ ಸೋದರನಿಗೆ ಸೋದರಿ ಶರ್ಮಿಳಾ ಸವಾಲು

By Kannadaprabha NewsFirst Published Apr 8, 2024, 11:51 AM IST
Highlights

ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ನಾಮಾವಶೇಷವಾಗಿರುವ ಇತರ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಮಯದಲ್ಲಿ ಮರುಭೂಮಿಯಲ್ಲಿ ಸಿಗುವ ಮರೀಚಿಕೆಯಂತೆ ಕಾಂಗ್ರೆಸ್‌ಗೆ ಜಗನ್‌ ಸೋದರಿ ಶರ್ಮಿಳಾ ಆಗಮನದಿಂದ ಆನೆಬಲ ಬಂದಂತಾಗಿದೆ.

ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾದ ಬಳಿಕ ನಾಮಾವಶೇಷವಾಗಿರುವ ಇತರ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಮಯದಲ್ಲಿ ಮರುಭೂಮಿಯಲ್ಲಿ ಸಿಗುವ ಮರೀಚಿಕೆಯಂತೆ ಕಾಂಗ್ರೆಸ್‌ಗೆ ಜಗನ್‌ ಸೋದರಿ ಶರ್ಮಿಳಾ ಆಗಮನದಿಂದ ಆನೆಬಲ ಬಂದಂತಾಗಿದ್ದು, ಕುಟುಂಬದ ಭದ್ರಕೋಟೆ ಕಡಪಾ ಕ್ಷೇತ್ರದಲ್ಲಿ ಸ್ವತಃ ಕಣಕ್ಕಿಳಿಯುವ ಮೂಲಕ ಸೋದರ ಅವಿನಾಶ್‌ ರೆಡ್ಡಿಯ ಹ್ಯಾಟ್ರಿಕ್‌ ಹಾದಿಯನ್ನು ದುರ್ಗಮಗೊಳಿಸಿದ್ದಾರೆ ಶರ್ಮಿಳಾ.

ಹೇಗಿದೆ ಶರ್ಮಿಳಾ ಸ್ಥಿತಿ?

ಜಗನ್‌ ಜೊತೆಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪಕ್ಕದ ತೆಲಂಗಾಣಕ್ಕೆ ತೆರಳಿ ಸ್ವಂತ ಪಕ್ಷ ಕಟ್ಟಿದ್ದ ಸೋದರಿ ಶರ್ಮಿಳಾ ಇತ್ತೀಚೆಗೆ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಆಂಧ್ರಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದರು. ಬಳಿಕ ಆಕ್ರಮಣಕಾರಿಯಾಗಿ ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಹಲವು ವಿಷಯಗಳಲ್ಲಿ ತರಾಟೆಗೆ ತೆಗೆದುಕೊಂಡು ಗಮನ ಸೆಳೆದಿರುವ ಅವರು, ಚುನಾವಣಾ ಅಖಾಡದಲ್ಲಿ ತಮ್ಮ ಸೋದರನ ವಿರುದ್ಧ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

ಆಂಧ್ರ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಶರ್ಮಿಳಾ ನೇಮಕ: ವಾರದ ಹಿಂದೆ ಕಾಂಗ್ರೆಸ್‌ ಸೇರಿದ್ದ ಜಗನ್ ಸೋದರಿ

ಹ್ಯಾಟ್ರಿಕ್‌ ವಿಶ್ವಾಸದಲ್ಲಿ ಅವಿನಾಶ್‌:

ಕಡಪಾ ಕ್ಷೇತ್ರದಿಂದ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವಿನಾಶ್‌ ರೆಡ್ಡಿ, ಈ ಬಾರಿಯೂ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಇತ್ತೀಚೆಗೆ ತಮ್ಮ ಸೋದರ ಸಂಬಂಧಿಯೂ ಆಗಿರುವ ಮಾಜಿ ಸಂಸದ ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣದಲ್ಲಿ ಚುನಾವಣೆ ಮುಗಿಯುವವರೆಗೆ ವಿಚಾರಣೆ ನಡೆಸದಂತೆ ಸಿಬಿಐಗೆ ಸುಪ್ರೀಂ ಕೋರ್ಟ್‌ ಸೂಚಿಸಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ನಿರ್ಣಾಯಕ ಸ್ಥಾನದಲ್ಲಿ ಎನ್‌ಡಿಎ:

ಬಿಜೆಪಿಯು ಈ ಬಾರಿ ಪವನ್‌ ಕಲ್ಯಾಣ್‌ರ ಜನಸೇನಾ ಮತ್ತು ಟಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಕಡಪಾದಲ್ಲಿ ಟಿಡಿಪಿಯಿಂದ ಭೂಪೇಶ್‌ ರೆಡ್ಡಿಗೆ ಅಳೆದು ಸುರಿದು ಟಿಕೆಟ್‌ ನೀಡಿದೆ. ಇದರಿಂದ ಒಂದಷ್ಟು ಮತ ವಿಭಜನೆ ಆಗಲಿದ್ದು, ಅಕ್ಕ-ತಮ್ಮನ ಸ್ಪರ್ಧೆಯಲ್ಲಿ ಯಾರಿಗೆ ವರವಾಗಿ ಪರಿಣಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

  • ಸ್ಟಾರ್‌ ಕ್ಷೇತ್ರ: ಕಡಪಾ
  • ರಾಜ್ಯ: ಆಂಧ್ರಪ್ರದೇಶ
  • ಮತದಾನ ದಿನ: ಮೇ 4
  • ವಿಧಾನಸಭಾ ಕ್ಷೇತ್ರಗಳು: 7 (ವೈಎಸ್‌ಆರ್‌ಸಿಪಿ)
  • ಪ್ರಮುಖ ಅಭ್ಯರ್ಥಿಗಳು:
  • ವೈಎಸ್‌ಆರ್‌ಸಿಪಿ - ಅವಿನಾಶ್‌ ರೆಡ್ಡಿ
  • ಕಾಂಗ್ರೆಸ್‌ - ಶರ್ಮಿಳಾ
  • ಟಿಡಿಪಿ - ಭೂಪೇಶ್‌ ರೆಡ್ಡಿ
  • 2019ರ ಫಲಿತಾಂಶ:
  • ಗೆಲುವು - ಅವಿನಾಶ್‌ ರೆಡ್ಡಿ - ವೈಎಸ್‌ಆರ್‌ಸಿಪಿ
  • ಸೋಲು - ಆದಿತ್ಯನಾರಾಯಣ ರೆಡ್ಡಿ
  • ಚುನಾವಣಾ ವಿಷಯ:
  • -ಕೌಟುಂಬಿಕ ರಾಜಕಾರಣ
  • -ಹಾಲಿ ಸಂಸದನ ಮೇಲೆ ಕೊಲೆ ಪ್ರಕರಣ
  • -ಅಭೂತಪೂರ್ವ ಅಭಿವೃದ್ಧಿ
  • -ರಾಜ್ಯದಲ್ಲಿ ಆಡಳಿತ ಪಕ್ಷದ ಪರ ಅಲೆ

ಜಗನ್‌ ಸೋದರಿ ಶರ್ಮಿಳಾ ಕಾಂಗ್ರೆಸ್‌ಗೆ: ವೈಎಸ್‌ಆರ್‌ ತೆಲಂಗಾಣ ಪಕ್ಷ ಕಾಂಗ್ರೆಸ್ಸಲ್ಲಿ ವಿಲೀನ

ಸ್ಪರ್ಧೆ ಹೇಗೆ?

ವೈ ಎಸ್‌ ರಾಜಶೇಖರ್‌ ರೆಡ್ಡಿ ಕುಟುಂಬದ ಭದ್ರಕೋಟೆಯಾಗಿರುವ ಕಡಪಾ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈಎಸ್‌ಆರ್‌ ಕುಟುಂಬಸ್ಥರು ಪರಸ್ಪರ ಎದುರಾಳಿಗಳಾಗಿದ್ದಾರೆ. ಶರ್ಮಿಳಾ ಅವಿನಾಶ್‌ ರೆಡ್ಡಿಯ ವಿರುದ್ಧ ಕೊಲೆ ಪ್ರಕರಣದ ಕುರಿತು ಹೆಚ್ಚು ಸದ್ದು ಮಾಡುತ್ತಿದ್ದರೆ ಅವಿನಾಶ್‌ಗೆ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶರ್ಮಿಳಾರನ್ನು ಕಟ್ಟಿಹಾಕಲು ಯಾವ ಅಸ್ತ್ರ ಪ್ರಯೋಗಿಸಬಹುದು ಎಂಬ ಕುತೂಹಲವಿದೆ.

click me!