ಬಿಜೆಪಿಯ ಸುಳ್ಳುಗಳ ಬಗ್ಗೆ ಎಚ್ಚರವಿರಲಿ: ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ

By Kannadaprabha NewsFirst Published Apr 20, 2024, 12:04 PM IST
Highlights

ಗೆಲುವನ್ನಷ್ಟೇ ಮುಖ್ಯವಾಗಿಸಿಕೊಂಡಿರುವ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ವಿಷಯಗಳನ್ನು ಹರಿಬಿಡುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಹೇಳಿದರು.
 

ಬೆಂಗಳೂರು (ಏ.20): ಗೆಲುವನ್ನಷ್ಟೇ ಮುಖ್ಯವಾಗಿಸಿಕೊಂಡಿರುವ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಕಾರಿ ವಿಷಯಗಳನ್ನು ಹರಿಬಿಡುತ್ತಿದ್ದಾರೆ. ಜನರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಹಾಗೂ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಹರಡುವವರನ್ನು ಸೋಲಿಸಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಮನವಿ ಮಾಡಿದರು. ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿದ ಸೌಮ್ಯಾರೆಡ್ಡಿ ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಗರಿಗೆ ಸಾಮಾಜಿಕ ಕಳಕಳಿ, ಸಮಾಜದ ಸ್ವಾಸ್ತ್ಯ ಕಾಪಾಡುವ ಮನಸ್ಸಿಲ್ಲ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು, ಎಡಿಟ್‌ ಮಾಡಿದ ವೀಡಿಯೋ, ಭಾವಚಿತ್ರಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೆ, ಸಮಾಜದ ಸ್ವಾಸ್ತ್ಯ ಕದಡುವಂತಹ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಜನರು ಬಿಜೆಪಿ ನಾಯಕರ ಈ ಸುಳ್ಳಿನ ವಿರುದ್ಧ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಷಯಗಳನ್ನು ಪರಾಮರ್ಶಿಸಬೇಕು. ಹಾಗೆಯೇ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರ ಸುಳ್ಳುಗಳನ್ನು ಧಿಕ್ಕರಿಸಿ ಸತ್ಯಕ್ಕೆ ಜಯವಾಗುವಂತೆ ಮಾಡಬೇಕು ಎಂದರು.

ಎಚ್​.ಡಿ.ಕುಮಾರಸ್ವಾಮಿ ವಿರುದ್ಧದ ಮಹಿಳಾ ಆಯೋಗ ನೋಟಿಸ್​ಗೆ ಹೈಕೋರ್ಟ್‌ ತಡೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಶಾಂತಿಯುತ ಕ್ಷೇತ್ರವನ್ನಾಗಿಸುವುದು ನಮ್ಮ ಗುರಿ. ಸಂಸದೆಯಾದ ನಂತರ ಮೊದಲು ಕ್ಷೇತ್ರವನ್ನು ಸಾಮರಸ್ಯ ಕ್ಷೇತ್ರವನ್ನಾಗಿಸುತ್ತೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುತ್ತೇನೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸಿ ಹಸಿರು ಬೆಂಗಳೂರು ದಕ್ಷಿಣವನ್ನಾಗಿ ಮಾಡುವ ಕನಸು ನನ್ನದು. ಅದಕ್ಕೆ ಕ್ಷೇತ್ರದ ಮತದಾರರೂ ಕೈ ಜೋಡಿಸಬೇಕು ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಾಂಗ್ರೆಸ್‌ ರಾಜ್ಯದಲ್ಲಿ ಇನ್ನೂ 10 ವರ್ಷ ಅಧಿಕಾರದಲ್ಲಿರುತ್ತದೆ. ಜನಸೇವೆ ಮಾಡುವುದೇ ಕಾಂಗ್ರೆಸ್‌ ಸರ್ಕಾರದ ಗುರಿಯಾಗಿದ್ದು, ಅದನ್ನು ಮುಂದಿನ 10 ವರ್ಷವೂ ಮಾಡಲಾಗುವುದು. ಬಡ, ಮಧ್ಯಮ ವರ್ಗದ ಜನರ ಏಳಿಕೆ, ಸಮಾಜದಲ್ಲಿ ಸಮಾನತೆಯನ್ನು ತರುವುದು ನಮ್ಮ ಉದ್ದೇಶ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆ ರದ್ದಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದನ್ನು ಜನರು ನಂಬಬಾರದು. ಕಾಂಗ್ರೆಸ್‌ ಅಧಿಕಾರದಲ್ಲಿರುವವರೆಗೆ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ ಎಂದರು.

ವಿಜಯನಗರ ಶಾಸಕ ಕೃಷ್ಣಪ್ಪ ಮಾತನಾಡಿ, ಸೌಮ್ಯಾರೆಡ್ಡಿ ಅವರು ಕೇಂದ್ರದಲ್ಲಿ ರಾಜ್ಯಕ್ಕೆ ಗಟ್ಟಿ ಧ್ವನಿಯಾಗಲಿದ್ದಾರೆ. ರಾಜ್ಯಕ್ಕಾಗುತ್ತಿರುವ ಮೋಸವನ್ನು ಖಂಡಿಸಿ ನಮಗೆ ಸಿಗಬೇಕಾದ ಸವಲತ್ತು, ಅನುದಾನವನ್ನು ದೊರಕಿಸಿಕೊಡಲು ಸೌಮ್ಯಾರೆಡ್ಡಿ ಅವರು ಗೆಲುವು ಬಹಳ ಮುಖ್ಯ. ಜನರು ಲೋಕಸಭಾ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ದು ಕುಟುಂಬ ರಾಜಕಾರಣ ಆದರೆ ಬಿಎಸ್‌ವೈ, ಗೌಡ್ರದ್ದು?: ಸಚಿವ ಕೆ.ಜೆ.ಜಾರ್ಜ್

ಬೆಳಗ್ಗೆ ರೆಡ್ಡಿ ರೋಡ್‌ ಶೋ, ಸಂಜೆ ಮತದಾರರ ಭೇಟಿ: ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20ಕ್ಕೂ ಹೆಚ್ಚಿನ ಜಂಕ್ಷನ್‌, ಪ್ರಮುಖ ರಸ್ತೆಗಳಲ್ಲಿ ಸೌಮ್ಯಾರೆಡ್ಡಿ ಭರ್ಜರಿ ಮತಯಾಚನೆ ಮಾಡಿದರು. ಕ್ಷೇತ್ರದ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರೋಡ್‌ ಶೋ ಆರಂಭಿಸಿದ ಸೌಮ್ಯಾರೆಡ್ಡಿ ಅವರಿಗೆ ಹೋದಲೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಜೆ ಜಯನಗರ ರಾಘವೇಂದ್ರ ಸ್ವಾಮಿ ಮಠ ಹಾಗೂ ಸಾಯಿ ಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಫೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಸುತ್ತಲಿನ ಬಡಾವಣೆಗಳಲ್ಲಿ ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು. ಸೌಮ್ಯಾರೆಡ್ಡಿ ಹೋದ ಕಡೆಗಳಲ್ಲಿ, ಕೊರೋನಾ ಸಂದರ್ಭದಲ್ಲಿ ಅವರು ಮಾಡಿದ ಸಹಾಯದ ಬಗ್ಗೆ ಜನರು ಪ್ರಶಂಸಿಸಿದರು.

click me!