Lok Sabha Elections 2024: ಮತದಾನಕ್ಕೆ ಊರಿಗೆ ಹೋಗಲು 1500 ಕೆಎಸ್ಸಾರ್ಟಿಸಿ ಬಸ್‌

By Kannadaprabha NewsFirst Published Apr 26, 2024, 9:36 AM IST
Highlights

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆಯಲಿರುವ ಮತದಾನಕ್ಕೆ ಬೆಂಗಳೂರಿನಿಂದ ತಮ್ಮ ಊರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಟ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್‌ಗಳೂ ಸೇರಿದಂತೆ 1,500 ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕೆಎಸ್ಸಾರ್ಟಿಸಿಯು ವ್ಯವಸ್ಥೆ ಮಾಡಿತ್ತು. 

ಬೆಂಗಳೂರು (ಏ.26): ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆಯಲಿರುವ ಮತದಾನಕ್ಕೆ ಬೆಂಗಳೂರಿನಿಂದ ತಮ್ಮ ಊರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಟ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್‌ಗಳೂ ಸೇರಿದಂತೆ 1,500 ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ಕೆಎಸ್ಸಾರ್ಟಿಸಿಯು ವ್ಯವಸ್ಥೆ ಮಾಡಿತ್ತು. ಮತದಾನ ಮಾಡಲು ಬೆಂಗಳೂರಿನಿಂದ ಸಾವಿರಾರು ಜನರು ತಮ್ಮ ಊರುಗಳತ್ತ ಗುರುವಾರವೇ ಪ್ರಯಾಣಿಸಿದರು. ಮೆಜೆಸ್ಟಿಕ್‌, ಮೈಸೂರು ರಸ್ತೆ ಬಸ್‌ ನಿಲ್ದಾಣಗಳಲ್ಲಿ ಗುರುವಾರ ಮಧ್ಯಾಹ್ನದಿಂದಲೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಕೆಎಸ್ಸಾರ್ಟಿಸಿ ನಿಗದಿಗಿಂತ ಹೆಚ್ಚಿನ ಬಸ್‌ಗಳನ್ನು ಸೇವೆಗಿಳಿಸಿತ್ತು. 

ಮಧ್ಯಾಹ್ನದ ವೇಳೆಗೆ 600 ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಡಲಾಯಿತು. ರಾತ್ರಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾದ ಕಾರಣ 1,500 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಯಿತು. ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಹೆಚ್ಚುವರಿ ಬಸ್‌ಗಳ ವಿವಿಧ ಮಾರ್ಗಗಳಿಗೆ ನಿಯೋಜಿಸಲು ಹಿರಿಯ ಅಧಿಕಾರಿಗಳನ್ನು ಮೆಜೆಸ್ಟಿಕ್‌, ಮೈಸೂರು ರಸ್ತೆ ಬಸ್‌ ನಿಲ್ದಾಣಗಳಿಗೆ ನಿಯೋಜಿಸಲಾಗಿತ್ತು. ಶುಕ್ರವಾರ ಮತದಾನ ಮುಗಿದ ನಂತರ ಜನರು ಬೆಂಗಳೂರಿಗೆ ವಾಪಾಸಾಗುವ ಹಿನ್ನೆಲೆಯಲ್ಲಿ ಆಯಾ ಜಿಲ್ಲಾ ಕೇಂದ್ರಗಳಿಂದ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಮಾಡಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.

ಕರ್ನಾಟಕ Election 2024 Live: ರಾಜ್ಯದ 14 ಜಿಲ್ಲೆಗಳಲ್ಲೂ ಚುರುಕುಗೊಂಡ ಮತದಾನ

ಸರತಿ ಸಾಲಿನಲ್ಲಿ ಪ್ರಯಾಣಿಕರು: ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ನೂಕುನುಗ್ಗಲು ತಡೆಯಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸರತಿ ಸಾಲಿನಲ್ಲಿ ಪ್ರಯಾಣಿಕರು ಬಸ್‌ ಹತ್ತುವ ವ್ಯವಸ್ಥೆ ಮಾಡಿದ್ದರು. ಮೈಸೂರು ರಸ್ತೆ ಬಸ್‌ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಸಹಾಯದಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ಬರುವಂತೆ ಮಾಡಲಾಗಿತ್ತು. ಬಿಎಂಟಿಸಿಯಿಂದ 575 ಬಸ್‌ಗಳು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೂ ನೀಡಿರುವ ಕಾರಣದಿಂದಾಗಿ ಈ ಬಾರಿ ಬಿಎಂಟಿಸಿ ಬಸ್‌ಗಳನ್ನು ಕೆಎಸ್ಸಾರ್ಟಿಸಿ ಬಳಸಿಕೊಂಡಿದೆ. ಗುರುವಾರ ಸಂಜೆ 6ರಿಂದ ರಾತ್ರಿ 11ರವರೆಗೆ ಬಿಎಂಟಿಸಿಯ 575 ಬಸ್‌ಗಳು ವಿವಿಧ ಜಿಲ್ಲೆಗಳಿಗೆ ತೆರಳಿದವು. ಶುಕ್ರವಾರ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ 465 ಬಿಎಂಟಿಸಿ ಬಸ್‌ಗಳು ಸೇವೆ ನೀಡಲು ನಿಯೋಜಿಸಲಾಗಿದೆ.

ಬಳ್ಳಾರಿ ಜನತೆಗೆ ರಾಹುಲ್‌ ಗಾಂಧಿ ನೀಡಿದ್ದ ಭರವಸೆ ಮೊದಲು ಈಡೇರಿಸಲಿ: ಶ್ರೀರಾಮುಲು

ಚುನಾವಣಾ ಕಾರ್ಯಕ್ಕೆ 2,780 ಬಸ್‌ ನಿಯೋಜನೆ: ಮತದಾನ ಪ್ರಕ್ರಿಯೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗುವುದು ಸೇರಿದಂತೆ ಇನ್ನಿತರ ಚುನಾವಣಾ ಕಾರ್ಯಕ್ಕಾಗಿ ಕೆಎಸ್ಸಾರ್ಟಿಸಿಯ 2,780 ಬಸ್‌ಗಳನ್ನು ನಿಯೋಜಿಸಲಾಗಿದೆ. ಆ ಬಸ್‌ಗಳು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿನ ಮತಗಟ್ಟೆಗಳಿಗೆ ಸಿಬ್ಬಂದಿ ಇವಿಎಂ, ವಿವಿ ಪ್ಯಾಟ್‌ ಯಂತ್ರಗಳನ್ನು ತೆಗೆದುಕೊಂಡು ಹೋಗಲಿದೆ. ಈ ಬಸ್‌ಗಳು ಅಲ್ಲಿಯೇ ಇದ್ದು, ಶುಕ್ರವಾರ ಮತದಾನ ಮುಗಿದ ನಂತರ ಚುನಾವಣಾ ಸಿಬ್ಬಂದಿ, ಮತದಾನ ಉಪಕರಣಗಳನ್ನು ವಾಪಾಸು ಕರೆತರಲಿವೆ.

click me!