ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಮನಸೋಲದ ‘ಗೃಹಲಕ್ಷ್ಮೀಯರು’!

By Kannadaprabha News  |  First Published Jun 5, 2024, 5:43 AM IST

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಮತಗಳನ್ನು ಸೆಳೆಯಬಹುದೆಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ ಮಹಿಳೆಯರು ಶಾಕ್ ನೀಡಿದ್ದಾರೆ. ಗ್ಯಾರಂಟಿಗಳಿಗೆ ಮನಸೋಲದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ನಿಂತಿರುವುದು ಸ್ಪಷ್ಟವಾಗಿದೆ.


ಮಂಡ್ಯ ಮಂಜುನಾಥ

 ಮಂಡ್ಯ (ಜೂ.5) : ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಮತಗಳನ್ನು ಸೆಳೆಯಬಹುದೆಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ ಮಹಿಳೆಯರು ಶಾಕ್ ನೀಡಿದ್ದಾರೆ. ಗ್ಯಾರಂಟಿಗಳಿಗೆ ಮನಸೋಲದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರ ಪರ ನಿಂತಿರುವುದು ಸ್ಪಷ್ಟವಾಗಿದೆ.

Latest Videos

undefined

೨೦೧೮ರ ವಿಧಾನಸಭೆ ಚುನಾವಣೆಗೂ ಮುನ್ನ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಎಚ್.ಡಿ. ಕುಮಾರಸ್ವಾಮಿ ನೀಡಿದ ಆರ್ಥಿಕ ನೆರವು, ಮುಖ್ಯಮಂತ್ರಿಯಾಗಿ ಮಾಡಿದ ಸಾಲಮನ್ನಾ ಮಾಡಿದ್ದಕ್ಕೆ ಮತದಾರರು ಈ ಚುನಾವಣೆಯಲ್ಲಿ ಋಣ ತೀರಿಸಿದಂತೆ ಕಂಡುಬರುತ್ತಿದ್ದಾರೆ.

ಕೈಕೊಟ್ಟ ಗೃಹಲಕ್ಷ್ಮಿಯರು:

ಶಕ್ತಿ, ಗೃಹಲಕ್ಷ್ಮೀ, ಉಚಿತ ವಿದ್ಯುತ್ ಸೇರಿದಂತೆ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಕಾಂಗ್ರೆಸ್ ಕೈ ಹಿಡಿದಿಲ್ಲ. ವಿಶೇಷವಾಗಿ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳಿಂದ ಆಕರ್ಷಿತರಾಗಿ ಮಹಿಳಾ ಮತದಾರರು ಗುಪ್ತವಾಗಿ ಕಾಂಗ್ರೆಸ್ ಕೈ ಹಿಡಿಯುತ್ತಾರೆಂಬ ನಂಬಿಕೆಯನ್ನೂ ಮಹಿಳಾ ಮತದಾರರು ಹುಸಿಗೊಳಿಸಿದ್ದಾರೆ. ಮಹಿಳೆಯರು ಗ್ಯಾರಂಟಿ ಯೋಜನೆಗಳಿಗೆ ವಿರುದ್ಧವಾಗಿ ಮತ ಚಲಾಯಿಸಿರುವುದು ಕಾಂಗ್ರೆಸ್ಸಿಗರಿಗೆ ಅಚ್ಚರಿಯನ್ನು ಉಂಟುಮಾಡಿದೆ. 

ಗೆಲುವಿನ ಅಂತರದಲ್ಲಿ ಅಂಬರೀಶ್ ದಾಖಲೆ ಎಚ್‌ಡಿಕೆ ಧೂಳೀಪಟ..!

ಆಗ ಸುಮಲತಾ, ಈಗ ಎಚ್‌ಡಿಕೆ:

ಕಳೆದ ಚುನಾವಣೆಯಲ್ಲಿ ಅಂಬರೀಶ್ ನಿಧನ, ಅವರ ಪತ್ನಿ ಹಾಗೂ ನಟಿ ಸುಮಲತಾ ಅಖಾಡ ಪ್ರವೇಶಿಸಿದ್ದು, ಅಭಿಮಾನಿ ನಟನ ಪತ್ನಿ ಬಗ್ಗೆ ಜೆಡಿಎಸ್‌ನವರ ಕುಹಕದ ಮಾತುಗಳಿಂದ ಕೆರಳಿದ್ದ ಮಹಿಳೆಯರು ಚುನಾವಣೆಯಲ್ಲಿ ಸುಮಲತಾ ಪರವಾಗಿ ನಿಂತಿದ್ದರು. ಈ ಬಾರಿ ನಿಖಿಲ್‌ಕುಮಾರಸ್ವಾಮಿ ಸೋಲಿನಿಂದ ಎಚ್.ಡಿ.ಕುಮಾರಸ್ವಾಮಿಗೆ ಆಗಿದ್ದ ನೋವು, ಅನಾರೋಗ್ಯ, ನಾಯಕತ್ವದ ಗುಣ, ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬಗಳಿಗೆ ಸ್ಪಂದಿಸಿದ್ದ ರೀತಿ, ಸಾಲಮನ್ನಾ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಆಗಿದ್ದ ಪ್ರಯೋಜನ ಇವೆಲ್ಲ ಅಂಶಗಳು ಮಹಿಳಾ ಮತದಾರರು ಕುಮಾರಸ್ವಾಮಿ ಪರ ಒಲವು ತೋರುವುದಕ್ಕೆ ಕಾರಣವಾಗಿರಬಹುದೆಂದು ಹೇಳಲಾಗುತ್ತಿದೆ.

ಏಕಮುಖವಾಗಿ ನಡೆದಂತೆ ಗೋಚರ:

ಈ ಬಾರಿಯ ಲೋಕಸಭಾ ಚುನಾವಣೆ ಏಕಮುಖವಾಗಿ ನಡೆದಿರುವಂತೆ ಕಂಡುಬರುತ್ತಿದೆ. ಒಕ್ಕಲಿಗರ ಮತಗಳೇ ನಿರ್ಣಾಯಕ ಪಾತ್ರ ವಹಿಸಿರುವುದು ಗಮನಾರ್ಹವಾಗಿದೆ. ಕೆಲವೊಂದು ಚುನಾವಣೆಗಳಲ್ಲಿ ವರ್ಚಸ್ವಿ ನಾಯಕ ಕಣದಲ್ಲಿದ್ದರೆ ಒಕ್ಕಲಿಗ ಮತಗಳು ಸಾಗುವ ಮಾರ್ಗವನ್ನೇ ಹಿಂದುಳಿದ ವರ್ಗ ಮತ್ತು ಇತರೆ ಜಾತಿ ಮತಗಳು ಅನುಸರಿಸುತ್ತವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಒಕ್ಕಲಿಗರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗ ಮತ್ತು ಇತರೆ ಹಿಂದುಳಿದ ಜಾತಿಯವರ ಮತಗಳನ್ನು ಸೆಳೆಯುವುದಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರು. ಒಕ್ಕಲಿಗರು ಬಹುತೇಕ ಜೆಡಿಎಸ್ ಕೈಹಿಡಿದರೂ ಹಿಂದುಳಿದ ಮತ್ತು ಇತರೆ ಹಿಂದುಳಿದ ಜಾತಿಯವರು ನಿರ್ಣಾಯಕ ಪಾತ್ರ ವಹಿಸಿ ಕಾಂಗ್ರೆಸ್ ಕೈಹಿಡಿಯುವರೆಂಬ ಲೆಕ್ಕಾಚಾರದಲ್ಲಿದ್ದರು. ಫಲಿತಾಂಶ ನೋಡಿದರೆ ಒಕ್ಕಲಿಗರು ಒಲವು ತೋರಿದ ವ್ಯಕ್ತಿಗೇ ಹಿಂದುಳಿದ ವರ್ಗಗಳ ಮತದಾರರೂ ಒಲವು ತೋರಿರುವುದು ಕಂಡುಬರುತ್ತಿದೆ. ಇದೇ ಮಾದರಿಯ ಮತದಾನದ ಕಳೆದ ಲೋಕಸಭೆ ಚುನಾವಣೆಯಲ್ಲಿ ನಡೆದು ಸುಮಲತಾ ಅವರಿಗೆ ಗೆಲುವನ್ನು ತಂದುಕೊಟ್ಟಿತ್ತು. ಅದೀಗ ಮತ್ತೆ ಪುನರಾವರ್ತನೆಯಾಗಿದೆ.

ಮಗ ಸೋತ ಜಾಗದಲ್ಲಿ ಗೆದ್ದು ಬೀಗಿದ ಅಪ್ಪ: ಗೆಲುವಿಗೆ ಕಾರಣವಾಯ್ತು ಎಚ್‌ಡಿಕೆ ನಾಮಬಲ, ಮೈತ್ರಿ ಒಗ್ಗಟ್ಟಿನ ಫಲ

ಮೋದಿಗೆ ಮನಸೋತವರು ಎಚ್‌ಡಿಕೆಗೆ ಬೆಂಬಲ:

ಯುವ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿಟ್ಟಿರುವ ಪ್ರೀತಿ-ಅಭಿಮಾನವೂ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಲ್ಲುವುದಕ್ಕೆ ಕಾರಣವಾಗಿದೆ. ಜೊತೆಗೆ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಬಯಸಿರುವ ಬಿಜೆಪಿ ಪರ ಮತದಾರರು ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹದಿಂದ ಕುಮಾರಸ್ವಾಮಿ ಪರವಾಗಿ ಮತ ಚಲಾಯಿಸಿರುವಂತೆ ಕಂಡುಬರುತ್ತಿದ್ದಾರೆ.

ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿಯಾಗಿದ್ದು, ಪ್ರಭಾವಿ ಒಕ್ಕಲಿಗ ನಾಯಕರಾಗಿರುವುದರಿಂದ ಒಕ್ಕಲಿಗರು, ಮಹಿಳೆಯರು, ಹಿಂದುಳಿದ ವರ್ಗಗಳ ಮತಗಳು ಅತಿ ಹೆಚ್ಚು ಪ್ರಮಾಣದಲ್ಲಿ ಹರಿದಿರುವುದರಿಂದ ಕುಮಾರಸ್ವಾಮಿ ಆರಂಭದಿಂದ ಕೊನೆಯ ಹಂತದವರೆಗೂ ಎಲ್ಲಿಯೂ ಹಿನ್ನಡೆಯನ್ನು ಕಾಯ್ದುಕೊಳ್ಳದೆ ಪ್ರಚಂಡ ಬಹುಮತದೊಂದಿಗೆ ನಿರಾಯಾಸವಾಗಿ ಗೆಲುವಿನ ದಡ ಸೇರಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

click me!