ಲೋಕಸಭಾ ಚುನಾವಣಾ ಫಲಿತಾಂಶ: ಯಾವ ರಾಜ್ಯದಲ್ಲಿ ಏನು ಜನಾದೇಶ?

Published : Jun 05, 2024, 04:55 AM IST
ಲೋಕಸಭಾ ಚುನಾವಣಾ ಫಲಿತಾಂಶ: ಯಾವ ರಾಜ್ಯದಲ್ಲಿ ಏನು ಜನಾದೇಶ?

ಸಾರಾಂಶ

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟಕ್ಕೆ ಭಾರೀ ಮುಖಭಂಗ ಉಂಟಾಗಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ಭರ್ಜರಿ ಜಯ ಲಭಿಸಿದೆ. ರಾಜ್ಯದಲ್ಲಿ ಹೆಚ್ಚುಕಮ್ಮಿ ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶವೇ ಈ ಬಾರಿಯೂ ಬಂದಿದೆ.

ಕೇರಳದಲ್ಲಿ ಪಿಣರಾಯಿಗೆ ಭಾರಿ ಮುಖಭಂಗ

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟಕ್ಕೆ ಭಾರೀ ಮುಖಭಂಗ ಉಂಟಾಗಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮೈತ್ರಿಕೂಟಕ್ಕೆ ಭರ್ಜರಿ ಜಯ ಲಭಿಸಿದೆ. ರಾಜ್ಯದಲ್ಲಿ ಹೆಚ್ಚುಕಮ್ಮಿ ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶವೇ ಈ ಬಾರಿಯೂ ಬಂದಿದೆ.

ವಿಶೇಷವೆಂದರೆ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ತ್ರಿಶೂರ್‌ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ತನ್ಮೂಲಕ ಕೇರಳದಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೊದಲ ಬಿಜೆಪಿ ಅಭ್ಯರ್ಥಿ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಕೇರಳದಲ್ಲಿ ಖಾತೆ ತೆರೆಯುವ ಮೂಲಕ ಬಿಜೆಪಿ ಕೂಡ ಸಂತಸಗೊಂಡಿದೆ.ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌) 18, ಲೆಫ್ಟ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಎಲ್‌ಡಿಎಫ್‌) ಕೇವಲ 1 ಸೀಟು ಗೆದ್ದಿದೆ. ಕಳೆದ ಬಾರಿ ಯುಡಿಎಫ್‌ 19, ಎಲ್‌ಡಿಎಫ್‌ 1 ಸ್ಥಾನ ಗೆದ್ದಿದ್ದವು. ಈ ಬಾರಿ ವಯನಾಡು ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಭರ್ಜರಿ ಜಯ ಸಾಧಿಸಿದ್ದಾರೆ. ತಿರುವನಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಶಿ ತರೂರ್‌ ಸತತ ನಾಲ್ಕನೇ ಬಾರಿ ಗೆದ್ದಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪರಾಭವಗೊಂಡಿದ್ದಾರೆ.ಎಂಟು ವರ್ಷಗಳ ಪಿಣರಾಯಿ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯು ಯುಡಿಎಫ್‌ನ ಗೆಲುವಿಗೆ ಕೊಡುಗೆ ನೀಡಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜನಸಂಖ್ಯೆ ಹೆಚ್ಚಿರುವ ಕೇರಳದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಮತಗಳ ಧ್ರುವೀಕರಣವು ನೆರವಾಗಿದೆ. ಹೀಗಾಗಿ ಕಳೆದ ವಿಧಾನಸಭೆ ಕ್ಷೇತ್ರದ ಫಲಿತಾಂಶಕ್ಕೆ ವಿರುದ್ಧವಾದ ಫಲಿತಾಂಶ ಲೋಕಸಭೆಯಲ್ಲಿ ಬಂದಿದೆ.

ಗೆದ್ದ ಪ್ರಮುಖರು: ರಾಹುಲ್ ಗಾಂಧಿ, ಶಶಿ ತರೂರ್‌, ಸುರೇಶ್‌ ಗೋಪಿ

==ಹರ್ಯಾಣದಲ್ಲಿ ಫಿಫ್ಟಿ ಫಿಫ್ಟಿ

ಲೋಕಸಭೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಈ ಬಾರಿ ಹರ್‍ಯಾಣದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧೆ ಎದುರಿಸಿದೆ. ಎರಡೂ ಪಕ್ಷಗಳು ಸಮಾನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಸ್ವತಃ ಖಟ್ಟರ್ ಕರ್ನಾಲ್‌ ಕ್ಷೇತ್ರದಿಂದ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಕೇಂದ್ರ ಸಚಿವ ಇಂದರ್‌ಜೀತ್‌ ಸಿಂಗ್‌ ಅವರೂ ಮತ್ತೊಮ್ಮೆ ಗೆಲುವು ಸಾಧಿಸಿದ್ದರೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ದಿವ್ಯಾಂಶು ಬುಧಿರಾಜ ಸ್ವತಃ ಕರ್ನಾಲ್‌ ಕ್ಷೇತ್ರದಲ್ಲಿ ಸೋತರೂ ಕಳೆದ ಬಾರಿಗಿಂತ ಪಕ್ಷದ ಮತಗಳಿಕೆಯನ್ನು ಹೆಚ್ಚಿಸಿ ಸ್ಥಾನಗಳಲ್ಲೂ ಏರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೂರನೆ ಬಾರಿಗೆ ಅಧಿಕಾರಕ್ಕೇರುವ ಮೂಲಕ ಮೋದಿ ದಾಖಲೆ, ಇಂಡಿಯಾ ಒಕ್ಕೂಟದಲ್ಲಿ ಪುಟಿದೆದ್ದ ಸಂಭ್ರಮ!

ತೆಲಂಗಾಣದಿಂದ ಬಿಆರ್‌ಎಸ್‌ ನಿರ್ನಾಮತೆಲಂಗಾಣ ರಾಜ್ಯ ಸ್ಥಾಪನೆಯ ಬಳಿಕ ಸತತ ಎರಡು ಬಾರಿ ಅಧಿಕಾರಕ್ಕೇರಿದ್ದ ಬಿಆರ್‌ಎಸ್‌(ಆಗಿನ ಟಿಆರ್‌ಎಸ್‌) ಪಕ್ಷ ಈ ಬಾರಿ ಶೂನ್ಯ ಸಂಪಾದನೆ ಮಾಡುವ ಮೂಲಕ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಇನ್ನು ಬಿಜೆಪಿ ತನ್ನ ಸ್ಥಾನಗಳಿಕೆಯನ್ನು 8ಕ್ಕೆ ಹೆಚ್ಚಿಸಿಕೊಂಡಿದ್ದು, ಇತ್ತೀಚೆಗೆ ಕರ್ನಾಟಕ ಮಾದರಿಯಲ್ಲಿ ಉಚಿತ ಘೋಷಣೆಗಳನ್ನು ಪ್ರಕಟಿಸುವ ಮೂಲಕ ಅಧಿಕಾರಕ್ಕೇರಿದ್ದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಎಂಟು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಮತ್ತೊಂದೆಡೆ ಹೈದರಾಬಾದ್‌ನಲ್ಲಿ ಎಂಐಎಂ ಮುಖಂಡ ಅಸಾದುದ್ದೀನ್‌ ಒವೈಸಿ ಬಿಜೆಪಿ ಅಭ್ಯರ್ಥಿ ಕೊಂಪೆಲ್ಲ ಮಾಧವಿ ಲತಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತಮ್ಮ ಗೆಲುವಿನ ಪರಂಪರೆಯನ್ನು ಮುಂದುವರೆಸಿದದ್ದಾರೆ.

ಛತ್ತೀಸ್‌ಗಢದಲ್ಲಿ ಬಿಜೆಪಿ ಪ್ರಾಬಲ್ಯಕೋಟೆಗಳ ನಾಡು ನಕ್ಸಲೀಯರ ಅಟ್ಟಹಾಸಕ್ಕೆ ಆಗಾಗ ಗುರಿಯಾಗುವ ಛತ್ತೀಸ್‌ಗಢದಲ್ಲಿ ಈ ಬಾರಿಯೂ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದು, 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅಚ್ಚರಿ ಎಂಬಂತೆ ರಾಜಾನಂದಗಾಂವ್‌ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ಸಿಎಂ ಭೂಪೇಶ್‌ ಬಘೇಲ್‌ ಸೋಲುಂಡಿದ್ದಾರೆ. ಕಾಂಗ್ರೆಸ್ ಕೇವಲ ಕೊರ್ಬಾ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಬಿಜೆಪಿಯಿಂದ ರಾಯ್ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬ್ರಿಜ್‌ಮೋಹನ್‌ ಅಗರ್ವಾಲ್‌ 5ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿಯು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಅದೃಷ್ಟದಿಂದಲ್ಲ ಎಂಬುದನ್ನು ತನ್ನ 10 ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಮೂಲಕ ಸಾಬೀತುಪಡಿಸಿದೆ.

ಆಂಧ್ರ ಮರಳಿ ನಾಯ್ಡು ತೆಕ್ಕೆಗೆಆಂಧ್ರಪ್ರದೇಶದಲ್ಲಿ ಈ ಬಾರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮಕಾಡೆ ಮಲಗಿದೆ. ಈ ಮೂಲಕ ಟಿಡಿಪಿಯ ಚಂದ್ರಬಾಬು ನಾಯ್ಡು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಕಿಂಗ್‌ಮೇಕರ್‌ ಆಗಿ ಹೊರಹೊಮ್ಮಿದ್ದು, ಬರೋಬ್ಬರಿ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಮೂಲಕ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಪ್ರಾದೇಶಿಕ ಪಕ್ಷ ಎಂಬ ಪಟ್ಟ ಗಳಿಸಿದ್ದಾರೆ. ಇನ್ನು ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಾರ್ಟಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 3 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.

ಪಂಜಾಬಲ್ಲಿ ಬಿಜೆಪಿಗೆ ಮುಖಭಂಗಖಲಿಸ್ತಾನಿ ಉಗ್ರರ ಉಪಟಳ ಮತ್ತು ರೈತದಂಗೆಯ ಕೇಂದ್ರಬಿಂದುವಾಗಿದ್ದ ಪಂಜಾಬ್‌ನಲ್ಲಿ ಬಿಜೆಪಿ ಶೂನ್ಯ ಸಂಪಾದಿಸಿದ್ದು, ಉಳಿದೆಲ್ಲ ಪಕ್ಷಗಳು ಬಹುತೇಕ ಸಮಾನ ಸ್ಥಾನಗಳಲ್ಲಿ ಗೆಲುವು ಕಂಡಿವೆ. ಕಾಂಗ್ರೆಸ್ ಈ ಬಾರಿ ಅತಿಹೆಚ್ಚು ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಆಮ್‌ ಆದ್ಮಿ ಪಕ್ಷ 3 ಸ್ಥಾನಗಳಿಗೆ ವರ್ಧಿಸಿಕೊಂಡಿದೆ. ಇನ್ನು ಶಿರೋಮಣಿ ಅಕಾಲಿ ದಳದಲ್ಲೂ ಸಹ ಹರ್‌ಸಿಮ್ರತ್‌ ಕೌರ್‌ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಇಂದಿರಾಗಾಂಧಿ ಹತ್ಯೆಯಲ್ಲಿ ಪಾತ್ರವಹಿಸಿದ್ದ ಸರಬ್‌ಜೇತ್‌ ಸಿಂಗ್‌ ಖಾಲ್ಸಾ ಮತ್ತು ಪ್ರಸ್ತುತ ದಿಬ್ರುಗಢ ಜೈಲಲ್ಲಿರುವ ಭಯೋತ್ಪಾದಕ ಅಮೃತ್‌ಪಾಲ್‌ ಸಿಂಗ್‌ ಪಕ್ಷೇತರರಾಗಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.

ಬಿಜೆಪಿಗೆ ‘ರಾಜ’ಸ್ಥಾನವಿಲ್ಲಮರುಭೂಮಿ ರಾಜ್ಯ ಒಂಟೆಗಳ ನಾಡು ರಾಜಸ್ಥಾನದಲ್ಲಿ ಬಿಜೆಪಿ ಈ ಬಾರಿ ತನ್ನ ಸ್ಥಾನಗಳಲ್ಲಿ ಇಳಿಕೆ ಮಾಡಿಕೊಂಡಿದ್ದು, ಕಳೆದ ಬಾರಿ ಸ್ವೀಪ್‌ ಮಾಡಿದ್ದ ಎನ್‌ಡಿಎ ಈ ಬಾರಿ ಕೇವಲ 17 ಸ್ಥಾನಗಳಿಗೆ ಸೀಮಿತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಬಂದರೂ ಹೊಸಬರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ ತಕ್ಕ ಬೆಲೆ ತೆತ್ತಿದ್ದು, ಇಂಡಿಯಾ ಮೈತ್ರಿಕೂಟಕ್ಕೆ ಎಂಟು ಕ್ಷೇತ್ರಗಳಲ್ಲಿ ಶರಣಾಗಿದೆ. ಆದರೂ ಕಾಂಗ್ರೆಸ್‌ನಲ್ಲಿ ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಜಾಲೋರ್‌ನಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿಯ ವಿರುದ್ಧ ಸೋಲುಂಡಿರುವುದು ಅಚ್ಚರಿ ಎನಿಸಿದೆ. ಇನ್ನುಳಿದಂತೆ ಸಿಪಿಎಂ ಸಹ ರಾಜ್ಯದಲ್ಲಿ ಖಾತೆ ತೆರೆದಿದೆ.

ಹಿಮದಲ್ಲಿ ಕಮಲ ಅಚಲಭಾರತದ ಸ್ವಿಜರ್ಲೆಂಡ್‌ ಎಂದೇ ಖ್ಯಾತವಾಗಿರುವ ಪರ್ವತಗಳ ನಾಡು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಈ ಬಾರಿಯೂ ಕ್ಲೀನ್‌ಸ್ವೀಪ್‌ ಮಾಡಿದೆ. ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಿದ್ದ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಮಂಡಿ ಕ್ಷೇತ್ರದಿಂದ 70 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರೆ, ಹಮೀರ್‌ಪುರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ತಮ್ಮ ಸತತ ಗೆಲುವಿನ ಪರಂಪರೆಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಸಚಿವ ವಿಕ್ರಮಾದಿತ್ಯ ಸಿಂಗ್‌ ಹಾಗೂ ಇತರರು ಸೋಲುಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಸ್ಥಿತಿ ಮತ್ತಷ್ಟು ಡೋಲಾಯಮಾನವಾಗುವ ಸಂಭವ ಹೆಚ್ಚಿದೆ.

ಅಸ್ಸಾಂನಲ್ಲಿ ಎನ್‌ಡಿಎ ಗೆಲುವುಕಣಿವೆಗಳ ರಾಜ್ಯ ಅಸ್ಸಾಂನಲ್ಲಿ ಈ ಬಾರಿ ಹೆಚ್ಚೂಕಡಿಮೆ ಕಳೆದ ಬಾರಿಯದ್ದೇ ರೀತಿಯ ಫಲಿತಾಂಶ ಬಂದಿದ್ದು, ಬಿಜೆಪಿಯಿಂದ ಕೇಂದ್ರ ಮಂತ್ರಿ ಸರ್ಬಾನಂದ ಸೋನೋವಾಲ್‌ ಸೇರಿದಂತೆ ಪ್ರಮುಖ ಅಭ್ಯರ್ಥಿಗಳು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ ವತಿಯಿಂದ ಲೋಕಸಭಾ ಸಹ ಪ್ರತಿಪಕ್ಷ ನಾಯಕನಾಗಿದ್ದ ಗೌರವ್‌ ಗೊಗೊಯ್‌ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಅಚ್ಚರಿಯ ರೀತಿಯಲ್ಲಿ ಎಯಯುಡಿಎಫ್‌ ಅಧ್ಯಕ್ಷ ಬದ್ರುದ್ದೀನ್‌ ಅಜ್ಮಲ್‌ ಸೋಲು ಕಂಡಿದ್ದರೆ, ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದ್ದ ಕಾಜಿ಼ರಂಗ ಕ್ಷೇತ್ರದಲ್ಲಿ ಕಮಲಪಡೆ ಸೋತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಈ ಬಾರಿ ಕ್ಲೀನ್‌ಸ್ವೀಪ್‌ ಮಾಡುವ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ.

ಅರಳಿದ ಕಮಲ, ಬಾಡಿದ ಬಿಜೆಡಿಪುರಿ ಜಗನ್ನಾಥನ ನಾಡು ಒಡಿಶಾದಲ್ಲಿ ಈ ಬಾರಿ ಬಿಜೆಪಿಯು ಬಿಜೆಡಿಯ ಭದ್ರಕೋಟೆಯನ್ನು ಧೂಳೀಪಟ ಮಾಡಿದ್ದು, 21 ಕ್ಷೇತ್ರಗಳ ಪೈಕಿ ಬಹುತೇಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯಿಂದ ಕೇಂದ್ರ ಮಂತ್ರಿಯಾಗಿದ್ದ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್‌ ಪಾಂಡಾ, ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಸೇರಿದಂತೆ ಹಲವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಡಿ ಕೇವಲ ಜಾಜ್‌ಪುರ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಇನ್ನುಳಿದಂತೆ ಕಾಂಗ್ರೆಸ್‌ನಲ್ಲಿ ಕೇವಲ ಸಪ್ತಗಿರಿ ಉಲಾಕಾ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಡಿ ಭಾರೀ ಕುಸಿತ ಕಂಡಿದೆ.

ಎನ್‌ಡಿಎಗೆ ಹಿನ್ನಡೆ, ಇಂಡಿಯಾಗೆ ಮುನ್ನಡೆ (ಜಾರ್ಖಂಡ್‌)

ಜನವರಿಯಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದರೂ ಪಕ್ಷದ ಗಳಿಕೆ ಹೆಚ್ಚಿದ್ದು, ಇಂಡಿ ಕೂಟದ ಗಳಿಕೆಯೂ ರಾಜ್ಯದಲ್ಲಿ ಹೆಚ್ಚಳವಾಗಿದೆ. ಮತ್ತೊಂದೆಡೆ ಕಳೆದ ಬಾರಿ 12 ಸ್ಥಾನ ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ ಈ ಬಾರಿ ಕೇವಲ ಒಂದಂಕಿ ಸ್ಥಾನಗಳಿಗೆ ತೃಪ್ತಿಪಟ್ಟಿದೆ. ಅದರಲ್ಲೂ ಚುನಾವಣೆಗೆ ಕೆಲವೇ ದಿನಗಳ ಮುಂಚೆ ರಾಜ್ಯದ ಏಕಮಾತ್ರ ಕಾಂಗ್ರೆಸ್‌ ಸಂಸದೆಯಾಗಿದ್ದ ಗೀತಾ ಕೋರಾ ಬಿಜೆಪಿಗೆ ಸೇರಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಕೇಂದ್ರ ಸಚಿವ ಅರ್ಜುನ್‌ ಮುಂಡಾ ಗೆಲುವು ಸಾಧಿಸಿದ್ದರೆ, ಡುಮ್ಕಾ ಕ್ಷೇತ್ರದಲ್ಲಿ ಬಿಜೆಪಿಯ ನಳಿನ್‌ ಸೋರೆನ್‌ ಪ್ರಯಾಸದ ಗೆಲುವು ಕಂಡಿದ್ದಾರೆ.

ಸ್ಮೃತಿ, ಅಣ್ಣಾಮಲೈ, ಓಮರ್; ಲೋಕ ಕಣದಲ್ಲಿ ಘಟಾನುಘಟಿ ನಾಯಕರಿಗೆ ಸೋಲಿನ ಶಾಕ್, ಇಲ್ಲಿದೆ ಲಿಸ್ಟ್!

ದೇವಭೂಮಿ ಬಿಜೆಪಿ ತೆಕ್ಕೆಗೆ (ಉತ್ತರಾಖಂಡ)

ಕಳೆದ ವರ್ಷ ಸಿಲ್ಕ್ಯಾರಾ ಸುರಂಗದಲ್ಲಿ ಅವಗಢ ಸಂಭವಿಸಿದ 40 ದಿನಗಳ ಬಳಿಕ ಪವಾಡಸದೃಶ ರೀತಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತಂದ ಉತ್ತರಾಖಂಡದಲ್ಲಿ ಮತ್ತೊಮ್ಮೆ ಬಿಜೆಪಿ ಕ್ಲೀನ್‌ಸ್ವೀಪ್‌ ಮಾಡಿದೆ. ಹರಿದ್ವಾರ ಕ್ಷೇತ್ರದಲ್ಲಿ ಕೇಂದ್ರಮಂತ್ರಿ ರಮೇಶ್‌ ಪೋಖ್ರಿಯಾಲ್‌ಗೆ ಟಿಕೆಟ್‌ ನಿರಾಕರಿಸಿ ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ತ್ರಿವೇಂದ್ರ ಸಿಂಗ್‌ ರಾವತ್‌ರನ್ನು ಕಣಕ್ಕಿಳಿಸಿದ್ದ ಬಿಜೆಪಿಯ ಪ್ರಯೋಗ ಯಶ ಕಂಡಿದ್ದು, ಉಳಿದಂತೆ ಅಜಯ್‌ ತಮ್ಟಾ ಅವರನ್ನು ಬಿಟ್ಟು ಉಳಿದೆಲ್ಲವರೂ ಹೊಸ ಸಂಸದರಾಗಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ ಈ ಬಾರಿಯೂ ಶೂನ್ಯ ಸಂಪಾದನೆ ಮಾಡಿದ್ದು, ರಾಜ್ಯದಲ್ಲಿ ಪಕ್ಷ ಸಂಘಟನೆ ಸಂಪೂರ್ಣ ನೆಲಕಚ್ಚಿರುವುದು ಮತಪ್ರಮಾಣದಲ್ಲಿ ತೋರುತ್ತಿದೆ.

ಗೋವಾದಲ್ಲಿ ಕೈ, ಕಮಲ ಸಮಬಲ

ಭಾರತದ ಮೊದಲ ಪೋರ್ಚುಗೀಸರ ಸರಹದ್ದಾಗಿದ್ದ ಗೋವಾದಲ್ಲಿ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ದಕ್ಷಿಣ ಗೋವಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉದ್ಯಮಿ ಪಲ್ಲವಿ ಶ್ರೀನಿವಾಸ್‌ ಡೆಂಪೋ ಪ್ರಬಲ ಸ್ಪರ್ಧೆಯೊಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಸೋಲುಂಡಿದ್ದಾರೆ. ಮತ್ತೊಂದೆಡೆ ಉತ್ತರ ಗೋವಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀಪಾದ್‌ ಎಸ್ಸೋ ನಾಯಕ್‌ ಅವರ ಗೆಲುವಿನ ಅಲೆ ಮುಂದುವರೆದಿದ್ದು, ಈ ಬಾರಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಪಕ್ಷ ಈ ಬಾರಿ ಆಪ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ದಕ್ಷಿಣ ಗೋವಾದಲ್ಲಿ ಫಲ ಕೊಟ್ಟಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ