ಎನ್‌ಡಿಎ ಮೈತ್ರಿಕೂಟವನ್ನು ಭಾರೀ ಸೋಲಿನಿಂದ ಕಾಪಾಡಿ, ಸಣ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ನೆರವಾಗಿದ್ದು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಎಂದು ಅಂಕಿ ಅಂಶಗಳು ಹೇಳಿವೆ.
ನವದೆಹಲಿ: 400ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಈ ಬಾರಿ ಅಧಿಕಾರ ಹಿಡಿಯುವ ಆಸೆಯಲ್ಲಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಅಂತಿಮವಾಗಿ ಗೆದ್ದಿದ್ದು 293 ಸ್ಥಾನ ಮಾತ್ರ. ಅಂದರೆ ಬಹುಮತಕ್ಕೆ ಅಗತ್ಯವಾದ 272 ಸ್ಥಾನಕ್ಕಿಂತ ಕೇವಲ 21 ಸ್ಥಾನ ಹೆಚ್ಚು. ಅಚ್ಚರಿ ವಿಷಯವೆಂದರೆ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವನ್ನು ಭಾರೀ ಸೋಲಿನಿಂದ ಕಾಪಾಡಿ, ಸಣ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ನೆರವಾಗಿದ್ದು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಎಂದು ಅಂಕಿ ಅಂಶಗಳು ಹೇಳಿವೆ.
ಕಳೆದ ಬಾರಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಬಿಜೆಪಿ 62 ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಅದು 33ಕ್ಕೆ ಸೀಮಿತಗೊಂಡಿದೆ. ಇದು ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವುದರಿಂದ ವಂಚಿತ ಮಾಡುವಲ್ಲಿ ದೊಡ್ಡ ಕಾಣಿಕೆ ನೀಡಿದೆ.
ಲೋಕಸಭೆಯಲ್ಲಿ ರಾಹುಲ್‌ಗೆ ವಿಪಕ್ಷ ನಾಯಕ ಹೊಣೆ?
ವಿಶೇಷವೆಂದರೆ ಬಿಜೆಪಿ ಮತ್ತು ಅದರ ಮೈತ್ರಿಕೂಟಗಳು ಗೆದ್ದಿರುವ 37 ಸ್ಥಾನಗಳ ಪೈಕಿ 16 ಕ್ಷೇತ್ರಗಳು ಅಚ್ಚರಿಯ ಅಂಕಿ ಅಂಶಗಳನ್ನು ಹೊರಹಾಕಿವೆ. ಏಕೆಂದರೆ ಈ 16 ಕ್ಷೇತ್ರಗಳಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಬಿಎಸ್ಪಿ ಅಭ್ಯರ್ಥಿಗಳು ಪಡೆದ ಮತಗಳ ಪ್ರಮಾಣ ಹೆಚ್ಚಿದೆ. ಅಂದರೆ ಒಂದು ವೇಳೆ ಇಲ್ಲಿ ಮಾಯಾವತಿ ತೀವ್ರ ಸ್ಪರ್ಧೆ ನೀಡದೇ ಹೋಗಿದ್ದಲ್ಲಿ ಅಥವಾ ಬಿಎಸ್ಪಿ ಇಂಡಿಯಾ ಕೂಟದ ಭಾಗವಾಗಿದ್ದೇ ಆದಲ್ಲಿ ಈ ಮತಗಳೆಲ್ಲಾ ಇಂಡಿಯಾ ಕೂಟದ ಅಭ್ಯರ್ಥಿಗಳಿಗೆ ಬಿದ್ದು ಅವರು ಸುಲಭವಾಗಿ ಗೆಲ್ಲುತ್ತಿದ್ದರು. ಅಂದರೆ ಎನ್‌ಡಿಎ ಹಾಲಿ ಗೆದ್ದಿರುವ 37 ಸ್ಥಾನಗಳ ಪೈಕಿ 16 ಸ್ಥಾನ ಕಡಿತವಾಗಿ ಕೇವಲ 21 ಸ್ಥಾನಕ್ಕೆ ಸೀಮಿತವಾಗಬೇಕಿತ್ತು. ಆಗ ಎನ್‌ಡಿಎ ಬಲ 293ರಿಂದ 277ಕ್ಕೆ ಇಳಿಯುತ್ತಿತ್ತು.
ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವ ಮುನ್ನವೇ 'ಸ್ಟಾಕ್ ಅವ್ಯವಹಾರ' ಆರೋಪ ಮಾಡಿದ ರಾಹುಲ್ ಗಾಂಧಿ!
ಮತ್ತೊಂದೆಡೆ ಇಂಡಿಯಾ ಕೂಟ ಹಾಲಿ ಗೆದ್ದಿರುವ 44ರ ಜೊತೆಗೆ ಇನ್ನೂ 16 ಸ್ಥಾನ ಸೇರಿ 60ಕ್ಕೆ ತಲುಪುತ್ತಿತ್ತು. ಅದರ ಬಲ ಹಾಲಿ ಇರುವ 233ರಿಂದ 250ಕ್ಕೆ ತಲುಪುತ್ತಿತ್ತು. ಆಗ ಸರ್ಕಾರ ರಚನೆ ಎನ್‌ಡಿಎಗೆ ಪಾಲಿಗೆ ಕಷ್ಟವಾಗುತ್ತಿತ್ತು.ಅಷ್ಟರ ಮಟ್ಟಿಗೆ ಬಿಜೆಪಿ ಮತ್ತು ಎನ್‌ಡಿಎ ಕೂಟದ ಹೀನಾಯ ಸೋಲು ತಪ್ಪುವಲ್ಲಿ ಮಾಯಾವತಿ ಪರೋಕ್ಷವಾಗಿ ಕಾಣಿಕೆ ನೀಡಿದ್ದಾರೆ ಎಂಬ ಅಚ್ಚರಿಯ ವಿಷಯವನ್ನು ಅಂಕಿ ಅಂಶಗಳು ಹೇಳಿವೆ.