ಅಭಿವೃದ್ಧಿ ಕೆಲಸ ಮಾಡಿಯೂ ಸೋಲಾಗಿದೆ ಎಂದರೆ ಮುಜುಗರ ಆಗುವುದಿಲ್ಲವೇ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರದಿಂದ ನುಡಿದರು.
ನಾಗಮಂಗಲ (ಜೂ.07): ಯಾರೋ ಟ್ರೋಲ್ ಮಾಡಿದಾಕ್ಷಣ ನಾನು ರಾಜೀನಾಮೆ ನೀಡಲಾಗುವುದಿಲ್ಲ. ಪಕ್ಷ ರಾಜೀನಾಮೆ ನೀಡುವಂತೆ ಕೇಳಿದರೆ ನೀಡುತ್ತೇನೆ. ಸೋಲಿನಿಂದ ನನಗೂ ಮುಜುಗರ ಆಗಿದೆ. ಅಭಿವೃದ್ಧಿ ಕೆಲಸ ಮಾಡಿಯೂ ಸೋಲಾಗಿದೆ ಎಂದರೆ ಮುಜುಗರ ಆಗುವುದಿಲ್ಲವೇ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರದಿಂದ ನುಡಿದರು.
ಸೋಲು ಎಲ್ಲರಿಗೂ ಆಗಿದೆ. ೨೦೧೯ರಲ್ಲಿ ಅವರದ್ದೇ ಸರ್ಕಾರ ಇದ್ದಾಗಲೂ ಅವರ ಮಗ ಸೋತಿರಲಿಲ್ಲವೇ..?, ಈಗ ನಮಗೆ ಸೋಲಾಗಿದೆ. ಚುನಾವಣೆ ಎಂದ ಮೇಲೆ ಎಲ್ಲಾ ರೀತಿಯಲ್ಲೂ ಎದುರಿಸಬೇಕಾಗುತ್ತದೆ. ಜಿಲ್ಲೆಯ ಜನರ ತೀರ್ಪಿನ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರ ತೀರ್ಪಿಗೆ ತಲೆ ಬಾಗಬೇಕಷ್ಟೇ. ಆ ಬಗ್ಗೆ ವಿಮರ್ಶೆ ಮಾಡುವುದಕ್ಕೂ ನನಗೆ ಆಸಕ್ತಿ ಇಲ್ಲ. ಫಲಿತಾಂಶ ಒಂದು ಹಂತದಲ್ಲಿದ್ದರೆ ಮಾತ್ರ ವಿಮರ್ಶೆ ಮಾಡಬಹುದು. ಇದು ವಿಮರ್ಶೆ ಮಾಡಲಿಕ್ಕೆ ಸಾಧ್ಯವಾಗದಷ್ಟು ವ್ಯತ್ಯಾಸವಾಗಿದೆ ಎಂದು ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿಯಿಂದಲೂ ನಿಗಮ ಹಣ ಅಕ್ರಮ ವರ್ಗ: ದಾಖಲೆಗಳು ಸಿಕ್ಕಿವೆ ಎಂದ ಡಿ.ಕೆ.ಶಿವಕುಮಾರ್
ನಾವು ಫಲಿತಾಂಶದ ಬಗ್ಗೆ ಬಹಳ ನಿರೀಕ್ಷೆ ಇಟ್ಟಿದ್ದೆವು. ಗ್ಯಾರಂಟಿ ಯೋಜನೆಗಳ ಮೂಲಕ ನಾವು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೃಷಿ ವಿವಿ ಸ್ಥಾಪಿಸಲು, ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸಲು ಘೋಷಣೆ ಮಾಡಿದ್ದೆವು. ಹೀಗಾಗಿ ನಾವು ಚುನಾವಣೆಯಲ್ಲಿ ಜನರು ನಮ್ಮ ಪರವಾಗಿರುವರೆಂದು ನಿರೀಕ್ಷೆ ಮಾಡಿದ್ದೆವು. ದೇಶದ ಒಟ್ಟಾರೆ ಫಲಿತಾಂಶ ತೆಗೆದುಕೊಂಡರೆ ನಮಗೆ ಆಶಾದಾಯಕವಾಗಿದೆ ಎಂದು ನುಡಿದರು.
2019 ರ ಸೋಲಿನ ನಂತರ ನಾವು ಎಲ್ಲಾ ಚುನಾವಣೆಗಳಲ್ಲಿ ಗೆಲುವು ಕಂಡಿದ್ದೆವು. ಚುನಾವಣೆಗೆ ಸ್ಪಂದಿಸಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಹಾಗೂ ಐದು ಲಕ್ಷ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಹುಶಃ ಜಿಲ್ಲೆಯ ಮತದಾರರು ಈಗ ಗೆಲ್ಲಿಸಿರೊ ಅಭ್ಯರ್ಥಿಯ ಮೇಲೆ ಬಹಳ ನಿರೀಕ್ಷೆ ಇಟ್ಟಿರಬಹುದು. ನಮ್ಮಲ್ಲಿ ಏನು ತಪ್ಪು ಕಂಡುಹಿಡಿದಿದ್ದಾರೋ ಗೊತ್ತಿಲ್ಲ. ಚುನಾವಣೆ ಒಂದು ಸೈಡೇಡ್ ಆಗಿಹೋಗಿದೆ. ಸೋಲಿನ ಬಗ್ಗೆ ಪರಾಮರ್ಶೆ ಮಾಡಲು ಹೊಗೋಲ್ಲ. ಗ್ಯಾರಂಟಿ ಯೋಜನೆಗಳನ್ನು ಚುನಾವಣೆಯಲ್ಲಿ ಓಟ್ ಹಾಕದಿದ್ದರೆ ಕೊಡಲ್ಲ ಎಂದು ಹೇಳಿಲ್ಲ. ಹಾಗಾಗಿ ಅವು ಮುಂದುವರೆಯುತ್ತವೆ ಎಂದರು.
ಎಲ್ಲಾ ಇಲಾಖಾ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲು: ಸಚಿವ ಪರಮೇಶ್ವರ್
ಸುಮಲತಾ ಅವರು ಬಹಳ ಬುದ್ಧಿವಂತರಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವಶ್ಯವೆನಿಸಿದರೆ ಅವರ ಸಲಹೆಯನ್ನೂ ಕೇಳೋಣ. ಅವರು ಗೆಲುವಿನ ಹಬ್ಬ ಆಚರಣೆ ಮಾಡಲಿ. ಅದರ ಬಗ್ಗೆ ನಾನು ಕಾಮೆಂಟ್ ಮಾಡಲು ಹೋಗುವುದಿಲ್ಲ. ಈಗ ತಾನೇ ಗೆದ್ದಿದ್ದಾರೆ. ಮುಂದೆ ಕಾವೇರಿ ನೀರಿನ ಸಮಸ್ಯೆ ಬಗೆಹರಿಸೊ ವಿಚಾರದಲ್ಲಿ ಹೇಗೆ ಪ್ರಯತ್ನ ಮಾಡುತ್ತಾರೋ ನೋಡೋಣ ಎಂದಷ್ಟೇ ಹೇಳಿದರು.