ಪಂಜಾಬ್‌ನಲ್ಲಿ ಏಕಾಂಗಿಯಾಗಿರೋ ಬಿಜೆಪಿಗೆ ಕಾಂಗ್ರೆಸ್ ಮತ್ತು ಆಪ್ ಸಂಸದರು ಸೇರಿದ್ದೇಕೆ?

By Sathish Kumar KHFirst Published Mar 31, 2024, 4:18 PM IST
Highlights

ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಏಕಾಂಗಿಯಾಗಿ ಕಣಕ್ಕಿಳಿದಿರುವ ಬಿಜೆಪಿಗೆ ಎಎಪಿ ಮತ್ತು ಕಾಂಗ್ರೆಸ್‌ ಸಂಸದರು ಸೇರಿದ್ಯಾಕೆ ಎಂಬುದು ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ...

ವರದಿ: ಶಿವರಾಜ್.ಸಿ, ಬುಲೆಟಿನ್ ಪ್ರೊಡ್ಯೂಸರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.31):
ಲೋಕಸಭಾ ಚುನಾವಣೆಯಲ್ಲಿ ಭಾರೀ ಆತ್ಮವಿಶ್ವಾಸದಲ್ಲಿರೋ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಈ ಬಾರಿ ಶತಯಗತಾಯ 400 ಸೀಟು ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ದೇಶಾದ್ಯಂತ ತನ್ನ ಹಳೆಯ ಮಿತ್ರರನ್ನೆಲ್ಲಾ ಎನ್‌ಡಿಎ ಕೂಟಕ್ಕೆ ಮರುಸೇರ್ಪಡೆ ಮಾಡಿಕೊಂಡು ಮತ್ತಷ್ಟು ಬಲವಾಗಿ ಅಖಾಡಕ್ಕೆ ಇಳಿದಿದೆ. ಆದರೆ ಪಂಜಾಬ್‌ನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ. ಸದಾ ಪಂಜಾಬ್‌ನಲ್ಲಿ ಮೈತ್ರಿ ಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಿದ್ದ ಬಿಜೆಪಿ ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದೆ.

ಪಂಜಾಬ್‌ನಲ್ಲಿ ವಾಜಪೇಯಿ ಕಾಲದಿಂದಲೂ ಬಿಜೆಪಿ ಮಿತ್ರಪಕ್ಷವಾಗಿದ್ದ ಅಕಾಲಿದಳ ಈ ಬಾರಿ ಎನ್‌ಡಿಎ ಜೊತೆ ಸೇರಿ ಸ್ಪರ್ಧೆ ಮಾಡೋಕೆ ಮನಸು ಮಾಡಿಲ್ಲ. ಅಕಾಲಿದಳದ ಮನವೊಲಿಸೋಕೆ ಬಿಜೆಪಿ ಸಹ ಮುಂದಾಗಿಲ್ಲ ಅನ್ನೋದು ಅಷ್ಟೇ ಸತ್ಯ. 2019ರಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ಬೀದಿಗೆ ಇಳಿದಾಗಲೇ ಎನ್‌ಡಿಎ ಮೈತ್ರಿಕೂಟಕ್ಕೆ ಅಕಾಲಿದಳ ಗುಡ್‌ ಬೈ ಹೇಳಿತ್ತು. ಕೇಂದ್ರ ಸಂಪುಟದಿಂದ ಹೊರಬಂದು ನಾವು ಬಿಜೆಪಿ ಜೊತೆಗೆ ಇಲ್ಲ ಎಂಬ ಸಂದೇಶ ಸಾರಿ ಪಂಜಾಬ್ ರೈತರಿಗೆ ಬೆಂಬಲ ಘೋಷಿಸಿತ್ತು.. 

Lok Sabha Election 2024: ಈ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ

ಆದರೆ, ಇವರ ನಿರ್ಧಾರ ಎಷ್ಟು ತಪ್ಪು ಎಂಬುದು ವಿಧಾನಸಭೆ ಚುನಾವಣೆಯಲ್ಲೇ ಸಾಬೀತಾಗಿತ್ತು. ಏಕಾಏಕಿ 15 ಸ್ಥಾನದಿಂದ ಶಿರೋಮಣಿ ಅಕಾಲಿದಳ ಕೇವಲ 3 ಸ್ಥಾನಕ್ಕೆ ಕುಸಿತ ಕಂಡಿತ್ತು. ಅಕಾಲಿದಳದಿಂದ ದೂರವಾಗಿದ್ದ ಬಿಜೆಪಿ ಸಹ 3 ಸ್ಥಾನದಿಂದ 2 ಸ್ಥಾನಕ್ಕೆ ಕುಸಿದರೂ, ತನ್ನ ವೋಟ್ ಶೇರ್ ಹೆಚ್ಚಿಸಿಕೊಳ್ಳೋದ್ರಲ್ಲಿ ಸಫಲವಾಗಿತ್ತು. ಇದೀಗ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಹಳೆ ದೋಸ್ತಿಗಳು ಒಂದಾಗಿ ಸ್ಪರ್ಧೆ ಮಾಡ್ತಾರೆ ಅನ್ನೋವಾಗ್ಲೇ ಯಾಕೋ ಮಾತುಕತೆಗಳು ಯಶಸ್ವಿಯಾಗದೇ ಇಬ್ಬರು ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಅತ್ತ ಆಪ್ (ಎಎಪಿ) ಹಾಗೂ ಕಾಂಗ್ರೆಸ್ ಕೂಡ ಪಂಜಾಬ್‌ನಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ ಮಾಡಿವೆ. ಹಾಗಾದರೆ, ಪಂಜಾಬ್‌ನಲ್ಲಿ ಈ ಬಾರಿ ಯಾರ ತಾಕತ್ತು ಎಷ್ಟು ಎಂಬುದು ಲೋಕಾ ಚುನಾವಣೆಯಲ್ಲಿ ನಿರ್ಧಾರವಾಗಲಿದೆ. 

ಈ ಬಾರಿ ಪಂಜಾಬ್‌ನಲ್ಲಿ ಕೇಸರಿ ಪಡೆ ತನ್ನ ಸಂಘಟನೆಯನ್ನ ಮತ್ತಷ್ಟು ಬಲ ಪಡಿಸಿಕೊಂಡಿದೆ. ಜೊತೆಗೆ ವಿಧಾನಸಭೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸ್ಥಾಪಿಸಿದ್ದ ಪಂಜಾಬ್ ಲೋಕ ಕಾಂಗ್ರೆಸ್ ಸಹ ಬಿಜೆಪಿಯಲ್ಲಿ ವಿಲೀನವಾಗಿದ್ದು ಮತ್ತಷ್ಟು ಬಲವನ್ನು ಹೆಚ್ಚಿಸಿದೆ. ಒಟ್ಟಾರೆ ಬಿಜೆಪಿ, ಈ ಬಾರಿ ಪಂಜಾಬ್‌ನಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಸಜ್ಜಾಗಿದೆ. ಪಂಜಾಬಿನ 13 ಲೋಕಸಭಾ ಕ್ಷೇತ್ರಗಳ ಪೈಕಿ 2019ರಲ್ಲಿ ಕಾಂಗ್ರೆಸ್ 8 ಬಿಜೆಪಿ ಹಾಗೂ ಅಕಾಲಿದಳ ತಲಾ 2, ಆಮ್ ಆದ್ಮಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ ಕನಿಷ್ಠ 7 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿದೆ.

ಜೆಡಿಎಸ್‌-ಬಿಜೆಪಿ ಕಾರ್ಯಕರ್ತರಲ್ಲಿ ಅಂಡರ್‌ಕರೆಂಟ್‌ ಅಲೆ ಎದ್ದಿದೆ: ನಿಖಿಲ್ ಕುಮಾರಸ್ವಾಮಿ

ಇತ್ತೀಚೆಗೆ ಪಂಜಾಬ್‌ನ ಏಕೈಕ ಆಪ್ ಸಂಸದ ಸುಶೀಲ್ ಕುಮಾರ್ ರಿಂಕು ಹಾಗೂ ಕಾಂಗ್ರೆಸ್ ಸಂಸದೆ ಅಮರೀಂದರ್ ಸಿಂಗ್ ಪತ್ನಿ ಪ್ರನೀತ್ ಕೌರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಿಬ್ಬರೂ ಕ್ರಮವಾಗಿ ಜಲಂದರ್ ಹಾಗೂ ಪಟಿಯಾಲದಿಂದ ಟಿಕೆಟ್ ಪಡೆದಿದ್ದಾರೆ. ಇನ್ನೂ ಹಾಲಿ ಬಿಜೆಪಿ ಸಂಸದ ಸನ್ನಿ ಡಿಯೋಲ್‌ಗೆ ಬಿಜೆಪಿ ಕೊಕ್ ನೀಡಿದೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನಿವೃತ್ತರಾಗಿರೋ ತರಂಜಿತ್ ಸಿಂಗ್ ಸಂದುಗೆ ಅಮೃತಸರದ ಟಿಕೆಟ್ ನೀಡಿದೆ. ಕಳೆದ ಬಾರಿ ಅಕಾಲಿದಳ ಜೊತೆ ಸೇರಿ 2 ಲೋಕಸಭಾ ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಕನಿಷ್ಟ 7 ಸ್ಥಾನ ಗೆಲ್ಲಬೇಕೆಂಬ ಜಿದ್ದಿಗೆ ಬಿದ್ದಿದೆ. ಈ ಬಾರಿ ಬಿಜೆಪಿ ಪಂಜಾಬ್‌ನ ಎಲ್ಲಾ 13 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಸುನೀಲ್ ಜಾಖರ್ ಸ್ಪಷ್ಟನೆ ನೀಡಿದ್ದಾರೆ. 

click me!