
ಶೃಂಗೇರಿ(ಮಾ.31): ಎರಡು ಬಾರಿ ಸಂಸದೆಯಾಗಿದ್ದು, ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ. ಈ ಬಾರಿ ಕಾಂಗ್ರೇಸ್ ನಿಂದ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ಖಾತರಿಯಾಗುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ಪಲಾಯನ ಮಾಡಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್ ಲೇವಡಿ ಮಾಡಿದ್ದಾರೆ.
ಪಟ್ಟಣದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಹತ್ತು ವರ್ಷಗಳ ಕಾಲ ಸಂಸದ ರಾಗಿದ್ದರೂ ಸಂಸತ್ತಿನಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನವಾಡಿಲ್ಲ. ಅಡಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ದಂತಹ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲಿಲ್ಲ. ಕ್ಷೇತ್ರದಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಚುನಾವಣೆ ಪ್ರಚಾರಕ್ಕೆ ದರ್ಶನ ಮಾಡಿದರು.
ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಆಫರ್ ಮಾಡಿದರೂ ನಾನೇ ನಿರಾಕರಿಸಿದೆ; ಮಾಜಿ ಸಚಿವ ಸಿ.ಟಿ. ರವಿ
ಜಯಪ್ರಕಾಶ್ ಹೆಗ್ಡೆ ರೈತರ, ಜನಸಾಮಾನ್ಯರ ಪರವಾಗಿ ಹೋರಾಡಿದ್ದಾರೆ. ಅಡಕೆ ಹಳದಿ ಎಲೆ ರೋಗ ಸಂದರ್ಭದಲ್ಲಿ ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ದೆಹಲಿವರೆಗೂ ನಿಯೋಗ ಹೋಗಿ ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಗೋರಕ್ ಸಿಂಗ್ ವರದಿ ಯಥಾವತ್ತಾಗಿ ಜಾರಿಗೆ ಬರಲು ಕಾರಣಕರ್ತರಾದವರಲ್ಲಿ ಇವರು ಒಬ್ಬರಾಗಿದ್ದಾರೆ. ಶೋಭಾ ಕರಂದ್ಲಾಜೆ ಕೇವಲ ಕೊನೆ ಹಂತದಲ್ಲಿ ಗೋರಕ್ ಸಿಂಗ್ ವರದಿ ಜಾರಿ ಬಗ್ಗೆ ಪಾದಯಾತ್ರೆ ನಡೆಸಿ ರಾಜಕೀಯ ಲಾಭಪಡೆದರು.
ಈಗ ಜಯಪ್ರಕಾಶ್ ಹೆಗ್ಡೆ ಚುನಾವಣೆ ಅಖಾಡಕ್ಕೆ ಇಳಿದಿರುವುದರಿಂದ ಸೋಲಿನ ಭಯದಿಂದ ಕ್ಷೇತ್ರದಿಂದ ಪಲಾಯನ ಮಾಡಿದ್ದಾರೆ. ಕ್ಷೇತ್ರದಲ್ಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸಂತ್ರಸ್ತರ ಸಮಸ್ಯೆ, ರೈತರ ಒತ್ತುವರಿ ಸಮಸ್ಯೆ, ಹಳದಿ ಎಲೆ ರೋಗ, ಎಲೆ ಚುಕ್ಕಿರೋಗ ಸಾಕಷ್ಟು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಜಯಪ್ರಕಾಶ್ ಹೆಗ್ಡೆ ಪ್ರಯತ್ನ ಮಾಡಲಿದ್ದಾರೆ. ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಲು ಎಲ್ಲರು ಶ್ರಮಿಸಬೇಕು.
ಏಪ್ರಿಲ್ 1 ರಂದು ಶೃಂಗೇರಿ ಆದಿಚುಂಚನಗಿರಿ ಸಭಾ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಕಾಂಗ್ರೇಸ್ ಅಭ್ಯರ್ಥಿ ಜಯಪ್ರಶಾಕ್ ಹೆಗ್ಡೆ, ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಶಾಸಕ ರಾಜೇಗೌಡ, ಆರತಿಕೃಷ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಎಚ್.ಜಿ.ಪುಟ್ಟಪ್ಪ ಹೆಗ್ಗಡೆ ಮಾತನಾಡಿ ಜಯಪ್ರಕಾಶ್ ಹೆಗಡೆ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಡಕೆ ಬೆಳೆಗಾರರ ಸಮಸ್ಯೆಗೆ ಹೋರಾಡಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಬೇಕು ಎಂದರು. ಕಾಂಗ್ರೆಸ್ ಮುಖಂಡರಾದ ಕೆ.ಆರ್.ವೆಂಕಟೇಶ್, ತ್ರಿಮೂರ್ತಿ, ಶಿವಮೂರ್ತಿ, ಸುದೇಶ್, ಅಬ್ದುಲ್ ನಭಿ ಹೆಗ್ರೆ, ಕಲ್ಕುಳಿ ವೆಂಕಟೇಶ್, ಮಹಾಬಲ, ಮಹಿಳಾ ಘಟಕದ ಪೂರ್ಣಿಮಾ, ತ್ರಿವೇಣಿ,ಸಂದ್ಯಾ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.