Lok Sabha Election 2024: ಚಳಿಗಾಲದ ಚುನಾವಣೆ ಬಿರು ಬೇಸಿಗೆಗೆ ಶಿಫ್ಟ್!

By Kannadaprabha NewsFirst Published Mar 18, 2024, 10:58 AM IST
Highlights

ಮೊದಲು ಚಳಿಗಾಲದಲ್ಲಿ ಚುನಾವಣೆ ಈಗ ಬಿರುಬೇಸಿಗೆಯಲ್ಲಿ. 2004ರಲ್ಲಿ ಅಟಲ್‌ 6 ತಿಂಗಳು ಚುನಾವಣೆ ಹಿಂದೂಡಿದ್ದರು. ಆಗಿನಿಂದ ಬೇಸಿಗೆಯಲ್ಲೇ ನಡೀತಿವೆ ಮಹಾಚುನಾವಣೆ.

ನವದೆಹಲಿ (ಮಾ.18): ಈ ಸಲದ ಲೋಕಸಭೆ ಚುನಾವಣೆ ಬಿರುಬೇಸಿಗೆಯಲ್ಲಿ ನಡೆಯಲಿದೆ. ಈ ಚುನಾವಣೆ ಮಾತ್ರವಲ್ಲ 2004ರಿಂದ ಎಲ್ಲ ಮಹಾಚುನಾವಣೆಗಳೂ ಏಪ್ರಿಲ್‌-ಮೇ ಬೇಸಿಗೆಯಲ್ಲೇ ನಡೆದಿವೆ. ಆದರೆ 1999ಕ್ಕಿಂತ ಮೊದಲು ಚಳಿಗಾಲದ ಥಂಡಿ ಹವೆಯಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಇದು ಬದಲಾಗಿದ್ದು 2004ರಲ್ಲಿ ಎಂಬುದು ವಿಶೇಷ.

ಚುನಾವಣೆಯಲ್ಲಿ ತಾರಾ ಪ್ರಚಾರಕರ ಕಮಾಲ್‌, ಬಿಜೆಪಿಯಲ್ಲಿ ಮೋದಿ ಚರಿಷ್ಮಾ, ಟಾಪ್‌ 10 ಗೇಮ್‌ ಚೇಂಜರ್‌ಗಳಿವರು

ಇದಕ್ಕೆ ಕಾರಣವೂ ಇದೆ. 2004ರಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ಭಾವಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ, ‘ಇನ್ನು ತಡಮಾಡಬಾರದು. ಚಳಿಗಾಲದವರೆಗೂ ಕಾದರೆ ಪರಿಸ್ಥಿತಿ ಬದಲಾಗಬಹುದು’ ಎಂದು ಘೋಷಿಸಿ 6 ತಿಂಗಳು ಮೊದಲೇ ಅವಧಿಪೂರ್ವ ಚುನಾವಣೆ ಘೋಷಿಸಿದರು. ಅಂದರೆ 2004ರ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಚುನಾವಣೆಗಳನ್ನು ಮೇನಲ್ಲೇ ಘೋಷಿಸಿಬಿಟ್ಟರು. ಹೀಗಾಗಿ ಅಂದಿನಿಂದ ಬೇಸಿಗೆಯಲ್ಲೇ ಚುನಾವಣೆಗಳು ಆರಂಭವಾದವು. ಅಲ್ಲದೆ, ಅಂದಿನಿಂದ ಗಟ್ಟಿ ಸರ್ಕಾರಗಳು ಬಂದ ಕಾರಣ ಯಾವುದೇ ಮಧ್ಯಂತರ ಚುನಾವಣೆ ನಡೆಯದೇ ಬೇಸಿಗೆಯಲ್ಲೇ 5 ವರ್ಷಕ್ಕೊಮ್ಮೆ ಚುನಾವಣೆಗಳು ನಡೆಯುತ್ತಿವೆ.

ಅತಿ ಸುದೀರ್ಘ ಚುನಾವಣೆ: 1998ರಲ್ಲಿ ಲೋಕಸಭೆ ಚುನಾವಣೆಗೆ 13 ದಿನಗಳಲ್ಲಿ ಮತದಾನ ನಡೆದಿತ್ತು. 1999ರಲ್ಲಿ, ಸಾರ್ವತ್ರಿಕ ಚುನಾವಣೆಗಳು 29 ದಿನಗಳವರೆಗೆ ವಿಸ್ತರಿಸಲ್ಪಟ್ಟವು. 2004ರಲ್ಲಿ 4 ಹಂತಗಳಲ್ಲಿ 21 ದಿನಗಳಲ್ಲಿ ಲೋಕಸಭೆ ಚುನಾವಣೆ ಮುಗಿದಿತ್ತು. 2009ರಲ್ಲಿ, ಹಂತಗಳು 5ಕ್ಕೆ ಚುನಾವಣೆಯ ಅವಧಿಯು 28 ದಿನಕ್ಕೆ ವಿಸ್ತರಣೆಗೊಂಡಿತು.

ಚುನಾವಣಾ ಬಾಂಡ್‌ನ ಮತ್ತಷ್ಟು ಮಾಹಿತಿ ಬಿಡುಗಡೆ, ಡಿಎಂಕೆಗೆ ಲಾಟರಿ ಕಿಂಗ್‌ 509 ಕೋಟಿ, ಜೆಡಿಎಸ್‌ ಗೆ 89 ಕೋಟಿ!

2014ರಲ್ಲಿ, ಲೋಕಸಭೆ ಚುನಾವಣೆಗಳನ್ನು 9 ಹಂತ ಮತ್ತು 36 ದಿನಗಳವರೆಗೆ ವಿಸ್ತರಿಸಲಾಯಿತು. 2019ರಲ್ಲಿ, 7 ಹಂತದ ಲೋಕಸಭೆ ಚುನಾವಣೆಯು 39 ದಿನಗಳ ಕಾಲ ನಡೆಯಿತು.

ಈ ಸಲ ಏಪ್ರಿಲ್ 19 ಮತ್ತು ಜೂನ್ 1ರ ನಡುವೆ 7 ಹಂತಗಳಲ್ಲಿ 44 ದಿನಗಳ ಸುದೀರ್ಘ ಮತದಾನ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಲೋಕಸಭೆಗೆ ಚುನಾವಣೆಯು ಜೂನ್‌ವರೆಗೆ ವಿಸ್ತರಿಸಿದ್ದು ಇದೇ ಮೊದಲು. ಜೂ.4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

click me!