ಮುನಿರತ್ನ ತರ ನಾನು ಹೇಡಿಯೂ ಅಲ್ಲ, ಕೇಡಿಯೂ ಅಲ್ಲ: ಡಿ.ಕೆ.ಸುರೇಶ್ ವಾಗ್ದಾಳಿ

By Govindaraj S  |  First Published Apr 6, 2024, 9:12 AM IST

ಶಾಸಕ ಮುನಿರತ್ನ ತರ ನಾನು ಹೇಡಿಯೂ ಅಲ್ಲ ಕೇಡಿಯೂ ಅಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ನಗರದ ಹೊರವಲಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
 


ಕನಕಪುರ (ಏ.06): ಶಾಸಕ ಮುನಿರತ್ನ ತರ ನಾನು ಹೇಡಿಯೂ ಅಲ್ಲ ಕೇಡಿಯೂ ಅಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು. ನಗರದ ಹೊರವಲಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ನಮ್ಮ ಮಿತ್ರರಾಗಿದ್ದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರು ಹೇಡಿಯಂತೆ ರೀತಿಯಲ್ಲಿ ಮನೆಯೊಳಗಿದ್ದ ವೇಳೆ ಅವರಿಗೆ ರಕ್ಷಣೆ ಕೊಟ್ಟಿದ್ದು ಇದೇ ಡಿ.ಕೆ.ಸುರೇಶ್ ಎಂಬುದನ್ನು ಮರೆತು ಇಂದು ಕೊರೋನಾ ಸಂದರ್ಭದಲ್ಲಿ ನಾನು ಮಾಡಿದ ಕಾರ್ಯವನ್ನು ಗೇಲಿ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ರಾಜರಾಜೇಶ್ವರಿ ನಗರದ ಜನತೆಗೆ ಯಾರು ಹೇಡಿ-ಕೇಡಿ ಎಂದು ಗೊತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಲಾಕ್ ಡೌನ್ ಮಾಡಿದಾಗ ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದನ್ನು ಕಂಡ ನಾನು ಮತ್ತು ಶಿವಕುಮಾರ್ ರೈತರ ಬೆಳೆಗಳನ್ನು ಖರೀದಿ ಮಾಡಿ ಜನತೆಗೆ ಹಂಚುವ ಕೆಲಸ ಮಾಡಿದ್ದು ನನ್ನ ಕ್ಷೇತ್ರದ ಜನರಿಗೆ ನನ್ನ ಕೈಲಾದಷ್ಟು ಸೇವೆ ಮಾಡುವ ಉದ್ದೇಶವೇ ಹೊರತು ಯಾರನ್ನು ಮೆಚ್ಚಿಸಲು ಅಲ್ಲ ಎಂದು ತಿರುಗೇಟು ನೀಡಿದರು.

Tap to resize

Latest Videos

ಉಗ್ರರ ದೇಶದೊಳಗೆ ನುಗ್ಗಿ ಹೊಡಿತೀವಿ: ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದೇನು?

ತೆರಿಗೆ ವಿಚಾರದಲ್ಲಿ ನಮ್ಮ ಕನ್ನಡ ನಾಡಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿ ಕೇಂದ್ರ ಸರ್ಕಾರದಿಂದ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸಿದಕ್ಕೆ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಕರುನಾಡಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ಸುಮಾರು 24 ಲಕ್ಷ ಕೋಟಿ ತೆರಿಗೆ ಹಣ ನಮ್ಮ ಕರ್ನಾಟಕದಿಂದ ಹೋಗುತ್ತಿದ್ದು, ಒಬ್ಬ ಕನ್ನಡಿಗ ತಲಾ 13,428 ರು. ತೆರಿಗೆ ಕಟ್ಟುತ್ತಿದ್ದಾನೆ. ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಕೇವಲ 2793 ರು. ತೆರಿಗೆ ಕಟ್ಟುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿದ್ದು, ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ವಂಚನೆ ಮಾಡುತ್ತಿದ್ದು ನಾವು ಕಟ್ಟುವ ತೆರಿಗೆ ಹಣದಲ್ಲಿ ಕನಿಷ್ಠ ಶೇಕಡ 50 ಭಾಗ ನಮಗೆ ನೀಡಿದರೆ, ಕನ್ನಡ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದನ್ನು ಕೇಳಿದ ನನ್ನನ್ನು ರಾಷ್ಟ್ರದ್ರೋಹಿ ಎಂಬಂತೆ ಬಿಂಬಿಸಿದ್ದು ಈ ಚುನಾವಣೆಯಲ್ಲಿ ಅವರಿಗೆ ತಿರುಗುಬಾಣವಾಗಲಿದೆ ಎಂದರು.

67 ವರ್ಷ ಆಡಳಿತ ನಡೆಸಿದ ಸರ್ಕಾರಗಳು ಮಾಡಿದ್ದ ಸಾಲ 57 ಲಕ್ಷ ಕೋಟಿ ರುಪಾಯಿ ಆಗಿದ್ದರೆ, ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೋಬ್ಬರಿ 110 ಲಕ್ಷ ಕೋಟಿ ಸಾಲ ಮಾಡಿ ದೇಶದ ಜನರ ಮೇಲೆ ಬರೆ ಎಳೆದಿದೆ. ದೇಶದ ಬೃಹತ್ ಕೈಗಾರಿಕೋದ್ಯಮಿಗಳ ಸುಮಾರು 17.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ದೇಶದ ಬಡ ರೈತರ ಒಂದು ರುಪಾಯಿ ಹಣವನ್ನು ಮನ್ನಾ ಮಾಡದಿರುವುದನ್ನು ನೋಡಿದಾಗ ಬಿಜೆಪಿ ಸರ್ಕಾರ ಬಡವರ, ರೈತರ ವಿರೋದಿ ಎಂಬುದು ಸಾಬೀತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅವರು ಹೇಳಿದ 15 ಲಕ್ಷ ಹಣ ದೇಶದ ಜನರ ಖಾತೆಗೆ ಬಾರದಿರುವುದು. 2 ಕೋಟಿ ಉದ್ಯೋಗ ಸೃಷ್ಟಿ, ದೇಶದ ಜನರಿಗೆ ಅಚ್ಛೆ ದಿನ್ ಆಯೇಗಾ ಎಂಬ ಸುಳ್ಳು ಗ್ಯಾರಂಟಿಗಳು ಬೇಕು ಇಲ್ಲಾ ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಬೇಕು ಎಂಬುದನ್ನು ಮತದಾರರೇ ತೀರ್ಮಾನಿಸಲಿ ಎಂದು ಹೇಳಿದರು.

ರಾಮನಗರ ಜಿಲ್ಲೆಯ ಜನ ದೇವೇಗೌಡರಿಗೆ, ಕುಮಾರಸ್ವಾಮಿಗೆ ದೇಶದ ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರೂ ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಯೋಜನೆ ತರಲು ಸಾಧ್ಯವಾಗಲಿಲ್ಲ. ಬೆಂಗಳೂರು ಹಾಗೂ ಸುತ್ತಲಿನ ಐದು ಜಿಲ್ಲೆಗಳ ಜನರ ಋಣ ತೀರಿಸುವ ಉದ್ದೇಶದಿಂದ ಕುಡಿಯುವ ನೀರಿನ ಬಳಕೆಗಾಗಿ ಮೇಕೆದಾಟು ಯೋಜನೆ ಆರಂಭಿಸಲು ನಾವು ಪ್ರಯತ್ನ ಪಟ್ಟಿದ್ದು, ಅದಕ್ಕೂ ಸಹಕಾರ ನೀಡದಿರುವುದು ಅವರ ಜನಪರ ಕಾಳಜಿ ತೋರಿಸುತ್ತದೆ. ಈ ಚುನಾವಣೆ ಸತ್ಯ- ಸುಳ್ಳಿನ ಜೊತೆಗೆ ಜನರ ಸೇವೆ ಮಾಡುವ ಸೇವಕ ಬೇಕೋ ಹಾಗೂ ಎಸಿ ರೂಮಿನಲ್ಲಿ ಕುಳಿತು ಕೆಲಸ ಮಾಡುವವರು ಬೇಕೋ ಎಂಬುದಕ್ಕೆ ಕ್ಷೇತ್ರದ ಪ್ರಬುದ್ಧ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಶತ್ರುಗಳಿಗೂ ಗೊತ್ತಾಗಿದೆ ಇದು ನವಭಾರತ: ಪ್ರಧಾನಿ ಮೋದಿ ಗುಡುಗು

ನಮ್ಮ ವಿರೋಧಿಗಳು ಸಾಮಾಜಿಕ ಜಾಲತಾಣಗಳ ಮೂಲಕ ನಾವು ಈಗಾಗಲೇ ಗೆಲುವು ಸಾಧಿಸಿದ್ದೇವೆ ಎಂದು ಬೀಗುತ್ತಿದ್ದು, ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಕಿಲ್ಲ. ನೀವೇ ಡಿ.ಕೆ.ಸುರೇಶ್ ಎಂಬಂತೆ ತಮ್ಮ ತಮ್ಮ ಬೂತ್ ಗಳಲ್ಲಿ ರಾಜ್ಯ ಕಾಂಗ್ರೆಸ್ ನುಡಿದಂತೆ ನಡೆದು ನೀಡಿರುವ ಐದು ಗ್ಯಾರಂಟಿಗಳು ಹಾಗೂ ಮೋದಿಯವರ ಸುಳ್ಳುಗಳ ಗ್ಯಾರಂಟಿಗಳ ಬಗ್ಗೆ ಪ್ರಚಾರ ನಡೆಸುವ ಮೂಲಕ ನನಗೆ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಹಾಕಿಸುವಂತೆ ಮನವಿ ಮಾಡಿದರು.

click me!