ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಕಾಂಗ್ರೆಸ್‌ಗೆ: ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌

Published : Apr 06, 2024, 08:30 AM IST
ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಕಾಂಗ್ರೆಸ್‌ಗೆ: ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌

ಸಾರಾಂಶ

ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ರಾಜಾರೋಷವಾಗಿ ಭೇಟಿ ಮಾಡುತ್ತೇನೆ. ಆದರೆ, ಬಿಜೆಪಿಯ ಹಲವು ನಾಯಕರು ಕದ್ದುಮುಚ್ಚಿ ರಾತ್ರಿ ವೇಳೆ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿ ಚರ್ಚಿಸುತ್ತಾರೆ. ಆದರೆ, ನಾನು ಭೇಟಿಯಾಗಿದ್ದರ ಬಗ್ಗೆ ದೊಡ್ಡದಾಗಿ ಚರ್ಚಿಸುತ್ತಾರೆ ಎಂದ ಸೋಮಶೇಖರ್‌

ಬೆಂಗಳೂರು(ಏ.06):  ಬಿಜೆಪಿಗೆ ಸೇರಿಸಿಕೊಳ್ಳುವಾಗ ಜಾಮೂನು, ಮೈಸೂರು ಪಾಕ್‌, ಜಿಲೇಬಿ ಕೊಡುತ್ತಾರೆ. ಅದೇ ಅವರ ಕೆಲಸ ಮುಗಿದ ಮೇಲೆ ವಿಷ ಕೊಡುತ್ತಾರೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ ಘೋಷಿಸಿದರು.

ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸೋಮಶೇಖರ್‌, ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ರಾಜಾರೋಷವಾಗಿ ಭೇಟಿ ಮಾಡುತ್ತೇನೆ. ಆದರೆ, ಬಿಜೆಪಿಯ ಹಲವು ನಾಯಕರು ಕದ್ದುಮುಚ್ಚಿ ರಾತ್ರಿ ವೇಳೆ ಸಿಎಂ ಮತ್ತು ಡಿಸಿಎಂ ಭೇಟಿ ಮಾಡಿ ಚರ್ಚಿಸುತ್ತಾರೆ. ಆದರೆ, ನಾನು ಭೇಟಿಯಾಗಿದ್ದರ ಬಗ್ಗೆ ದೊಡ್ಡದಾಗಿ ಚರ್ಚಿಸುತ್ತಾರೆ ಎಂದರು.

ಮತ್ತೆ ಸಿಎಂ ಭೇಟಿಯಾದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಯಾರಿಗೂ ಉಚಿತವಾಗಿ ಸಿಗುವುದಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜನರು ಗೋ ಬ್ಯಾಕ್‌ ಎಂದು ಹೇಳಿ ತಿರಸ್ಕರಿಸಿದವರನ್ನು ಬಿಜೆಪಿ ಇಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕೆಂಬ ಉದ್ದೇಶದಿಂದ ಕೆಲಸ ಮಾಡಿದ ಬಿಜೆಪಿ ಮುಖಂಡರು ಈಗ ಜೆಡಿಎಸ್‌ ಜತೆಗೆ ಶಾಮೀಲಾಗಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಜವರಾಯಿ ಗೌಡ ಅವರ ಕಾಲಿಗೆ ಬೀಳಿಸಿ, ಉಡಿ ತುಂಬಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ನನ್ನ ವಿರುದ್ಧ ಸೋತವರನ್ನು ಭೇಟಿ ಮಾಡಲು ಸಮಯವಿದೆ. ಆದರೆ, ಕ್ಷೇತ್ರದ ಶಾಸಕನಾದ ನನ್ನನ್ನು ಭೇಟಿಯಾಗುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಅಂತಹವರಿಗೆ ನಾನು ಸಹಕಾರ ನೀಡಬೇಕಾ ಎಂದು ಕಿಡಿಕಾರಿದರು.

ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿದ ವಿಚಾರವನ್ನೇ ದೊಡ್ಡದು ಮಾಡಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದವರೊಂದಿಗೆ ನಾನು ಹೋಗುವುದಿಲ್ಲ. ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಗುರಿ. ಅದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ. ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ನಾನು ಯಾರಿಗೂ ಅಂಜುವುದಿಲ್ಲ ಎಂದರು.

ಕಾಂಗ್ರೆಸ್‌ ಬಿಟ್ಟಿದ್ದು ದೊಡ್ಡ ತಪ್ಪು:

ಈ ಹಿಂದೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ನಾನು ಮಾಡಿದ ಬಹುದೊಡ್ಡ ತಪ್ಪು. ಕ್ಷೇತ್ರ ಜನತೆಗಾಗಿ ಹಾಗೂ ಅಭಿವೃದ್ಧಿ ಯಾವ ತ್ಯಾಗಕ್ಕೂ ನಾನು ಸಿದ್ಧ. ಯಶವಂತಪುರ ಕ್ಷೇತ್ರದಿಂದ ಆರು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಅದರಲ್ಲಿ ನಾಲ್ಕು ಬಾರಿ ಗೆದ್ದಿದ್ದು, ಎರಡು ಬಾರಿ ಸೋತಿದ್ದೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸರಳ, ಸಜ್ಜನ, ವಿದ್ಯಾವಂತ ಮತ್ತು ಕ್ಷೇತ್ರದ ಅಭಿವೃದ್ಧಿಯ ಭರವಸೆ ನೀಡಿರುವ ಕಾಂಗ್ರೆಸ್‌ನ ರಾಜೀವ್‌ ಗೌಡ ಅವರಿಗೆ ನಾನು ಬೆಂಬಲ ನೀಡುತ್ತೇನೆ. ಕಾರ್ಯಕರ್ತರೂ ರಾಜೀವ್‌ ಗೌಡ ಅವರ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ನನ್ನನ್ನು ಹೆದರಿಸುವ ಯಾವ ಮಗನೂ ಹುಟ್ಟಿಲ್ಲ: ಬಿಜೆಪಿಯ ಬಂಡಾಯ ಶಾಸಕ ಎಸ್.ಟಿ. ಸೋಮಶೇಖ‌ರ್

ನೆಲಮಂಗಲ ಶಾಸಕ ಎನ್‌. ಶ್ರೀನಿವಾಸ್‌ ಮಾತನಾಡಿ, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಸೋಮಶೇಖರ್‌ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅದರಿಂದ ಕ್ಷೇತ್ರದ ಮತದಾರರು ಸೋಮಶೇಖರ್‌ ನಿಲುವಿಗೆ ಬೆಂಬಲ ನೀಡೋಣ ಎಂದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ಗೌಡ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಶ್ಚಿಮ ವಿಭಾಗದ ಕಾಂಗ್ರೆಸ್‌ ಅಧ್ಯಕ್ಷ ಹನುಮಂತರಪ್ಪ, ಪ್ರಮುಖರಾದ ಎಂ. ರಾಜಕುಮಾರ್‌, ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಮಾಜಿ ಸದಸ್ಯರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಹಲವರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಬೆಂಗಳೂರು - ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!