ಈ ಜನ ಸಾಗರ ನೋಡಿದರೆ ಗೆಲುವು ನನ್ನದೇ ಅನಿಸುತ್ತಿದೆ. ಮೋದಿಯವರು 400ಕ್ಕೂ ಹೆಚ್ಚು ಸಂಸದರನ್ನು ಕಳುಹಿಸುವಂತೆ ಸಂದೇಶ ನೀಡಿದ್ದಾರೆ. ಆ 400 ಸಂಸದರಲ್ಲಿ ನಾನೂ ಇರುತ್ತೇನೆಂಬ ವಿಶ್ವಾಸ ಮೂಡಿದೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಚನ್ನಪಟ್ಟಣ (ಏ.03): ಈ ಜನ ಸಾಗರ ನೋಡಿದರೆ ಗೆಲುವು ನನ್ನದೇ ಅನಿಸುತ್ತಿದೆ. ಮೋದಿಯವರು 400ಕ್ಕೂ ಹೆಚ್ಚು ಸಂಸದರನ್ನು ಕಳುಹಿಸುವಂತೆ ಸಂದೇಶ ನೀಡಿದ್ದಾರೆ. ಆ 400 ಸಂಸದರಲ್ಲಿ ನಾನೂ ಇರುತ್ತೇನೆಂಬ ವಿಶ್ವಾಸ ಮೂಡಿದೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ನಗರದ ಗಾಂಧಿ ಭವನ ವೃತ್ತದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ರೋಡ್ ಶೋ ಮೂಲಕ ಅಮಿತ್ ಶಾರವರು ಚುನಾವಣಾ ಪ್ರಚಾರಕ್ಕೆ ವೇಗ ನೀಡಿದ್ದಾರೆ. ಇದರಿಂದ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗಿದೆ. ಇದು ಬದಲಾವಣೆ ಕಾಲ, ಅದಕ್ಕಾಗಿ ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಎದ್ದಿದೆ. ಇದರ ಜೊತೆಗೆ ಕರ್ನಾಟಕದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿದ ಮೇಲೆ ಕಾಂಗ್ರೆಸ್ ಅಡ್ರಸ್ಸೆ ಇಲ್ಲದಂತಾಗಿ ಆ ಪಕ್ಷದ ನಾಯಕರು ನಿದ್ದೆ ಗೆಟ್ಟಿದ್ದಾರೆ ಎಂದರು. ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಈ ಸರ್ಕಾರ ನಾಡಿನ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.ಲೋಕಸಭಾ ಚುನಾವಣೆಯಲ್ಲಿಯೇ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಜಯ ಭೇರಿ ಬಾರಿಸಲಿದ್ದಾರೆ. ಆ ಮೂಲಕ ಮೋದಿ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪ್ರಜ್ಞಾವಂತ ಮತದಾರರು ಮಾಡುತ್ತಾರೆ. ಕ್ಷೇತ್ರದ ಮತದಾರರು ಸಜ್ಜನ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಿ ಮೋದಿ ಕೈ ಬಲಪಡಿಸುವ ಕೆಲಸ ಮಾಡಬೇಕು. ಈ ರೋಡ್ ಶೋ ಗೆ ವ್ಯಕ್ತವಾಗಿರುವ ಅಭೂತಪೂರ್ವ ಬೆಂಬಲ ನೋಡಿದರೆ ಮಂಜುನಾಥ್ ರವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಅನುಮಾನ ಇಲ್ಲವೆಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ಮರಿ ಬುಲೆಟ್: ಮೊದಲ ಚಿತ್ರದಲ್ಲೇ ಮಚ್ಚು ಹಿಡಿಯಲಿದ್ದಾರೆ ರಕ್ಷಕ್!
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಚನ್ನಪಟ್ಟಣ ಮೂಲಕ ಅಮಿತ್ ಶಾರವರು ಚುನಾವಣಾ ರಣ ಕಹಳೆ ಮೊಳಗಿಸಿರುವುದು ನಮಗೆಲ್ಲ ಆನೆ ಬಲ ತಂದಿದೆ. ಈ ಚುನಾವಣೆಯಲ್ಲಿ ಹೃದಯವಂತ ಡಾ.ಸಿ.ಎನ್. ಮಂಜುನಾಥ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆಂಬ ವಿಶ್ವಾಸ ಬಂದಿದೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ, ಮಾಜಿ ಶಾಸಕ ಎ.ಮಂಜುನಾಥ್, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು.