'ಇಂಡಿಯಾ' ಕೂಟ ಗೆದ್ದರೆ ರೈತರ ಸಾಲ ಮನ್ನಾ ಜತೆಗೆ ಹಲವು ಗ್ಯಾರಂಟಿ ಘೋಷಿಸಿದ ರಾಹುಲ್‌ ಗಾಂಧಿ

By Kannadaprabha NewsFirst Published Mar 15, 2024, 9:13 AM IST
Highlights

‘ಇಂಡಿಯಾ’ ಗೆದ್ದರೆ ರೈತರ ಸಾಲ ಮನ್ನಾ ಭರವಸೆ ನೀಡಿದ ರಾಹುಲ್‌. ರೈತರ ರಕ್ಷಣೆಗೆ ಕಾಯ್ದೆ, ಜಿಎಸ್‌ಟಿ ವ್ಯಾಪ್ತಿಯಿಂದ ಕೃಷಿ ಹೊರಕ್ಕೆ. ಎಷ್ಟು ಸಾಲ ಮನ್ನಾ ಎಂಬ ಬಗ್ಗೆ ಅಧಿಕಾರಕ್ಕೆ ಬಂದ ನಂತದ ನಿರ್ಧಾರ: ಜೈರಾಂ.

ನಾಸಿಕ್‌ (ಮಾ.15): ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. ಸ್ತ್ರೀಯರಿಗೆ ವರ್ಷಕ್ಕೆ 1 ಲಕ್ಷ ರು. ನೀಡುವುದೂ ಸೇರಿದಂತೆ 5 ಗ್ಯಾರಂಟಿಗಳನ್ನು ಘೋಷಿಸಿದ ಮರುದಿನವೇ ಬೃಹತ್‌ ರೈತ ಸಮುದಾಯಕ್ಕೆ ಇನ್ನೊಂದು ಗ್ಯಾರಂಟಿ ರೂಪದ ಭರವಸೆಯನ್ನು ಅವರು ನೀಡಿದ್ದಾರೆ.

‘ಇಂಡಿಯಾ ಮೈತ್ರಿಕೂಟದ ಸರ್ಕಾರವು ರೈತ ಸಮುದಾಯದ ಧ್ವನಿಯಾಗಲಿದೆ. ರೈತರ ರಕ್ಷಣೆಗಾಗಿ ನಾವು ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಮತ್ತು ಕೃಷಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸುತ್ತೇವೆ. ಹಾಗೆಯೇ, ಬೆಳೆ ವಿಮೆ ಯೋಜನೆಯ ಸ್ವರೂಪವನ್ನು ಬದಲಾಯಿಸುತ್ತೇವೆ’ ಎಂದೂ ರಾಹುಲ್‌ ಭರವಸೆ ನೀಡಿದ್ದಾರೆ.

ಎಸ್‌ಬಿಐ ಚುನಾವಣಾ ಬಾಂಡ್‌ ದೇಣಿಗೆ ರಹಸ್ಯ ಆಯೋಗದಿಂದ ಬಹಿರಂಗ, ಬಿಜೆಪಿ ಟಾಪ್‌, ಜೆಡಿಎಸ್‌ಗೆ 43 ಕೋಟಿ!

ಭಾರತ್‌ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ಗುರುವಾರ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಚಂದವಾಡದಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರೈತರಿಗಾಗಿ ನಮ್ಮ ಸರ್ಕಾರದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವರ ಸಾಲವನ್ನು ಮನ್ನಾ ಮಾಡುತ್ತೇವೆ. ರಫ್ತು ಮತ್ತು ಆಮದು ನೀತಿ ವಿನ್ಯಾಸಗೊಳಿಸುವಾಗ ರೈತರಿಗೆ ಬೆಲೆಯ ರಕ್ಷಣೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಕೃಷಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಿ, ದೇಶದಲ್ಲಿ ಕೇವಲ ಒಂದೇ ತೆರಿಗೆ ಅಸ್ತಿತ್ವದಲ್ಲಿರುವಂತೆ ಮಾಡುತ್ತೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡಲು ಸ್ವಾಮಿನಾಥನ್‌ ಸಮಿತಿಯ ವರದಿ ಜಾರಿಗೊಳಿಸುತ್ತೇವೆ’ ಎಂದು ಹೇಳಿದರು. ಈ ವೇಳೆ ರಾಹುಲ್‌ ಜೊತೆ ವೇದಿಕೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹಾಗೂ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ಸಂಜಯ್‌ ರಾವುತ್‌ ಇದ್ದರು.

ಸಂಸತ್ತಿನಿಂದ ಪಂಚಾಯಿತಿವರೆಗೆ ಏಕ ಚುನಾವಣೆ, ಕೋವಿಂದ್‌ ಸಮಿತಿ ಶಿಫಾರಸು

ಎಷ್ಟು ಸಾಲ ಮನ್ನಾ?: ರಾಹುಲ್‌ ಭಾಷಣದ ಬಳಿಕ ಈ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ಮೇಲೆ ರೈತರ ಎಷ್ಟು ಸಾಲ ಮನ್ನಾ ಮಾಡಬೇಕು ಎಂಬುದನ್ನು ನಿರ್ಧರಿಸಲು ಪ್ರತ್ಯೇಕ ಆಯೋಗ ರಚಿಸಲಾಗುವುದು. ರೈತರ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ತಿಳಿಸಿದರು.

click me!