ಬಿಜೆಪಿಯವರಿಗೆ ಸುಳ್ಳೇ ಮನೆ ದೇವ್ರಾಗಿದೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿಕೊಂಡರು.
ಕೊಳ್ಳೇಗಾಲ (ಏ.13): ನಿಮ್ಮನ್ನು ಕೈ ಮುಗಿದು ಬೇಡುವೆ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿ, ಬಿಜೆಪಿಯವರಿಗೆ ಸುಳ್ಳೇ ಮನೆ ದೇವ್ರಾಗಿದೆ. ಅವರು ನುಡಿದಂತೆ ನಡೆದಿಲ್ಲ, ಬಿಜೆಪಿಯವರಿಗೆ ಬಡವರನ್ನು ಕಂಡರೆ ಆಗಲ್ಲ, ಅಲ್ಪಸಂಖ್ಯಾತರೂ, ದಲಿತರನ್ನು ಕಂಡರೆ ಸಹಿಸಲ್ಲ, ಈ ಜನಾಂಗಕ್ಕೆ ಶಕ್ತಿ ನೀಡುವ ಕೆಲಸವನ್ನು ಬಿಜೆಪಿ ಮಾಡಿಲ್ಲ, ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಿರಸ್ಕರಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿನಂತಿಸಿಕೊಂಡರು.
ಪಟ್ಟಣದ ಎಂಜಿಎಸ್ವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದುಳಿದವರು, ಬಡವರು, ಅಲ್ಪಸಂಖ್ಯಾತರು, ಮಹಿಳೆಯರ ಅಭ್ಯುದಯಕ್ಕಾಗಿ ಶಕ್ತಿ ನೀಡಿದ್ದೇ ಕಾಂಗ್ರೆಸ್, ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಎಸ್ಸಿಪಿ, ಟಿಎಸ್ಪಿ ಯೋಜನೆ ಜಾರಿಗೊಳಿಸಿದ್ದು ಸಿದ್ದರಾಮಯ್ಯ ಸರ್ಕಾರವೇ ಹೊರತು, ಬಿಜೆಪಿ ಸರ್ಕಾರವಲ್ಲ, ಗುತ್ತಿಗೆ ವಿಭಾಗದಲ್ಲೂ ಕಾನೂನು ರೂಪಿಸಿ ಮೀಸಲಾತಿ ಜಾರಿಗೊಳಿಸಿದ್ಧೇ ಕರ್ನಾಟಕ ಸರ್ಕಾರ ಎಂದರು.
ಬಿಜೆಪಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಜೆಡಿಎಸ್‌ಗೆ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ನಾವು ನುಡಿದಂತೆ ನಡೆದಿದ್ದೇವೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ನಮಗೆ ಶಕ್ತಿ ನೀಡಿ, ಜಿಲ್ಲೆಯ ಶೇ.98ರಷ್ಟು ಕುಟುಂಬಕ್ಕೆ ಉಚಿತ ವಿದ್ಯುತ್ ಸೌಲಭ್ಯ ದೊರೆತಿದೆ. ಗೃಹಲಕ್ಷ್ಮಿ ಯೋಜನೆ ಸೇರಿದಂತೆ 5 ಗ್ಯಾರಂಟಿಯಿಂದ ಜನರಿಗೆ ಅನುಕೂಲವಾಗಿದೆ. ಅನ್ನಭಾಗ್ಯ ಯೋಜನೆಗಾಗಿ ಕೇಂದ್ರ ಸರ್ಕಾರದ ಬಳಿ ಹಣ ಅಕ್ಕಿ ನೀಡಿ ಎಂದು ಕೇಳಿದರೂ ಅಕ್ಕಿ ಇದ್ದರೂ ನೀಡದೇ ನಮಗೆ ಮೋಸ ಮಾಡಿದ್ರು, ಆದರೂ ನಾವು ಈ ಯೋಜನೆ ಜಾರಿ ಮಾಡಿ ಇದಕ್ಕಾಗಿ ಪ್ರತಿ ಕುಟುಂಬದ ಸದಸ್ಯರ ಖಾತೆಗೆ ಹಣ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಸೋತಿದ್ರೂ ನಮಗೆ ನರೇಂದ್ರ ಶಾಸಕರೇ: ಹನೂರು ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನರೇಂದ್ರ ಅವರು ಸೋತಿದ್ದರೂ ಅವರು ನಮ್ಮ ಪಾಲಿಗೆ ಶಾಸಕರೇ ಎಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಹೇಳಿದರು. ಗ್ಯಾರಂಟಿ ಯೋಜನೆಯಿಂದ ಅನೇಕರ ಜೀವನದಲ್ಲಿ ಬದಲಾವಣೆಯಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಅನುದಾನ ನೀಡುವ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಉದ್ಧಟತನ ತೋರಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಜಾತಿ, ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೆಗ್ಗಳಿಕೆಯುಳ್ಳ ಬಡವರು, ಹಿಂದುಳಿದವರ ಏಳ್ಗೆಗೆ ದುಡಿದ ಪಕ್ಷ. ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ನಮಗೆ ನಾಲ್ಕು ವರ್ಷಗಳ ಅಧಿಕಾರವಿದೆ. ಒಂದೇ ಪಕ್ಷದಿಂದ 25 ಮಂದಿ ಸಂಸದರಿದ್ದರೂ ನಮ್ಮ ಜನರಿಗೆ ಧ್ವನಿಯಾಗುವಲ್ಲಿ ಬಿಜೆಪಿ ಸದಸ್ಯರು ವಿಫಲರಾದರು ಎಂದು ಟೀಕಿಸಿದರು.
ಸಚಿವರಾದ ಸತೀಶ್ ಜಾರಕಿ ಹೊಳಿ, ವೆಂಕಟೇಶ್, ಮಾಜಿ ಸಚಿವ ಕೋಟೆ ಎಂ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ, ಶಾಸಕ ಕೃಷ್ಣಮೂರ್ತಿ, ಮಾಜಿ ಸಚಿವ ಹೆಗ್ಗಡದೇವನಕೋಟೆ ಶಿವಣ್ಣ, ಸೋಮಶೇಖರ್, ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ, ಎಸ್ ಜಯಣ್ಣ, ಜಿಲ್ಲಾಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಅಧ್ಯಕ್ಷ ಚಂದ್ರು ತೋಟೇಶ್ ಇನ್ನಿತರರಿದ್ದರು.
ಈ ಚುನಾವಣೆ ಧರ್ಮಯುದ್ಧ ಅಲ್ಲ: ಸರ್ವಜ್ಞನ ವಚನದ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್
ಈ ದೇಶಕ್ಕೆ ತನ್ನದೇ ಆದ ಕೊಡುಗೆಯನ್ನು ಕಾಂಗ್ರೆಸ್ ಪಕ್ಷ ನೀಡಿದ್ದು ಮತದಾರರು ನಮ್ಮ ಪಕ್ಷದ ಸಾಧನೆಯನ್ನು ಮನಗಂಡು ನಮ್ಮ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು. ಈ ದೇಶದಲ್ಲಿ ಸಮಗ್ರ ಬದಲಾವಣೆಗಾಗಿ ಸಾಮಾಜಿಕ ನ್ಯಾಯದಿಂದ ಕೂಡಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದ್ದು, ಮತದಾರರು ಇದನ್ನು ಅರಿತು ಮತ ಚಲಾಯಿಸಬೇಕು, ಕಾಂಗ್ರೆಸ್ ಪಕ್ಷ ಎಂದೆಂದಿಗೂ ಬಡವರ ಪಕ್ಷವಾಗಿದೆ.
- ಸತೀಶ್ ಜಾರಕಿಹೊಳಿ, ಸಚಿವ