ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ನೀವೆಲ್ಲರೂ ಯೋಚನೆ ಮಾಡಿ ಮತ ಹಾಕಿ. ಇಂಡಿಯಾ ಹಾಗೂ ಎನ್‌ಡಿಎ ಚುನಾವಣೆಗೆ ಬಂದಿವೆ ಎಂದು ಪಿರಿಯಾಪಟ್ಟಣದ ಪ್ರಚಾರ ಸಭೆ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮೈಸೂರು (ಏ.13): ಈ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ. ನೀವೆಲ್ಲರೂ ಯೋಚನೆ ಮಾಡಿ ಮತ ಹಾಕಿ. ಇಂಡಿಯಾ ಹಾಗೂ ಎನ್‌ಡಿಎ ಚುನಾವಣೆಗೆ ಬಂದಿವೆ ಎಂದು ಪಿರಿಯಾಪಟ್ಟಣದ ಪ್ರಚಾರ ಸಭೆ ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. 10 ವರ್ಷಗಳಿಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇದೆ. ಬಿಜೆಪಿ ಒಬ್ಬರೇ ಸರ್ಕಾರ ಮಾಡಿಲ್ಲ, ಬೇರೆ ಬೇರೆ ಪಕ್ಷ ಸೇರಿ ಸರ್ಕಾರ ಮಾಡಿವೆ. ಬಿಜೆಪಿಗೆ ಒಂದೇ ಗೆದ್ದು ಅಧಿಕಾರ ಮಾಡುವ ಶಕ್ತಿ ಇಲ್ಲ. ಬಿಜೆಪಿ 28ಕ್ಕೆ 28 ಗೆಲ್ತೀವಿ ಅನ್ನೋರು ಮೈತ್ರಿ ಯಾಕೆ ಮಾಡಿಕೊಂಡ್ರಿ. ಸಣ್ಣ ಪಕ್ಷ ಜೆಡಿಎಸ್ ಜೊತೆಗೆ ಯಾಕೆ ಅಲಯನ್ಸ್ ಮಾಡಿಕೊಂಡ್ರಿ. ಸೋಲುವ ಭಯದಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದರು.
ನಾಯಿ ಕಾದಿತ್ತು ಅನ್ನ ಹಳಸಿತ್ತು ಎನ್ನೋ ಪರಿಸ್ಥಿತಿ ಜೆಡಿಎಸ್‌ನದ್ದು. ಜೆಡಿಎಸ್ ಸೆಕ್ಯೂಲರ್.. ಬಿಜೆಪಿ ಕಮ್ಯುನಲ್ ಪಾರ್ಟಿ. ಸೆಕ್ಯೂಲರ್ ಕಮ್ಯುನಲ್ ಜೊತೆ ಸೇರಿಕೊಂಡಿದ್ದಾರೆ, ಅದು ಹೇಗೆ ಆಗುತ್ತೆ ಹೇಳಿ..? ಜೆಡಿಎಸ್‌ಗೆ ಮಾನ ಮರ್ಯಾದಿ ಉಂಟಾ..? ಸಿದ್ದಾಂತ ಉಂಟಾ.? ನಮ್ಮ ಮನೆಗೆ ಬಂದ್ರು ಅಂತ ಕುಮಾರಸ್ವಾಮಿ ಹೇಳ್ತಾರೆ. ಆದ್ರೆ ಸಿಎಂ ಆಗಿದ್ದು ನಮ್ಮಿಂದ ಅಲ್ವಾ..? ದೇವೇಗೌಡರು ಪಿಎಂ ಆಗಿದ್ದು ನಮ್ಮಿಂದ ಅಲ್ವಾ. ಪಕ್ಷ ಉಳಿಸಿಕೊಳ್ಳಲು ಕೋಮುವಾದಿಗಳ ಜೊತೆ ಸೇರಿದ್ದಾರೆ. ಜಾತ್ಯಾತೀತ ಬೇಡ ಜಸ್ಟ್ ಜನತಾದಳ ಅಂತ ಇಟ್ಕೊಳಿ ಅಂತ ದೇವೇಗೌಡರಿಗೆ ಹೇಳಿದ್ದೆ. ಕಾಂಗ್ರೆಸ್ ಈ ಬಾರಿ ರಾಜ್ಯದಲ್ಲಿ 20 ಸ್ಥಾನ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ಬಿಜೆಪಿಗೆ ಸ್ವತಂತ್ರ್ಯ ಅಸ್ಥಿತ್ವ ಇಲ್ಲ. ಮೋದಿಗೆ ಓಟ್ ಕೊಡಿ ಅಂತಾರೆ, ಯಾವ ಆಧಾರದ ಮೇಲೆ ಓಟು ಕೇಳ್ತೀರ..? 10 ವರ್ಷಗಳಲ್ಲಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರಾ..? ಕೆಜಿ ಅಕ್ಕಿಗೆ 34 ರೂ ಕೊಡ್ತೀವಿ ಅಂದ್ರೂ ಕೂಡ ಬಿಜೆಪಿಯವರು ಕೊಡಲು ಬಿಡ್ಲಿಲ್ಲ. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಮೇಲೆ ಮೋದಿ ಒತ್ತಡ ಹೇರಿದ್ರು. ಮೋದಿ ಅದಾನಿ ಅಂಬಾನಿ ಪರ ಕೆಲಸ ಮಾಡ್ತಿದಾರೆ ಅಷ್ಟೇ. ಮೋದಿ ಶ್ರೀಮಂತರ ಪರ. ಬಿಜೆಪಿ ಶ್ರೀಮಂತರ ಪರವಾದ ಪಕ್ಷ. 50 ಸಾವಿರ ಲೀಡ್ ಕೊಟ್ರೆ ನಾನು ನಿಮ್ಮ ಬಾಯಿಗೆ ಸಕ್ಕರೆ ಹಾಕ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಯಾಕೆ ಮತ್ತೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಹೇಳಿ?: ಸಿಎಂ ಸಿದ್ದರಾಮಯ್ಯ
ಬೆಂಬಲಿಗರ ಗದ್ದಲ: ಸಿಎಂ ಭಾಷಣದ ಮಧ್ಯೆ ವಿಜಯ್ ಕುಮಾರ್ ಬೆಂಬಲಿಗರ ಗದ್ದಲ ಉಂಟು ಮಾಡಿದ್ದು, ವಿಜಯ್ ಕುಮಾರ್‌ಗೆ ಅನ್ಯಾಯ ಆಗಿದೆ ಎಂದು ಕಾರ್ಯಕರ್ತರು ಹೇಳಿದರು. ಸಿಎಂ ಭಾಷಣದ ಮಧ್ಯೆ ಅನ್ಯಾಯ ಅನ್ಯಾಯ ಅಂತ ಘೋಷಣೆ ಕೂಗಿದ ಬೆಂಬಲಿಗರಿಗೆ ಕೂತ್ಕಳ್ಳಿ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದರು. ವಿಜಯ್ ಕುಮಾರ್ ಅವರನ್ನು ಪಕ್ಷ ಗುರುತಿಸಿದೆ. ಕೂತ್ಕೊಳಯ್ಯ ಎಂದು ಸಮಧಾನಿಸಿ ಸಿಎಂ ಭಾಷಣ ಮುಂದುವರಿಸಿದರು. ಈ ವೇಳೆ ವಿಜಯ್ ಕುಮಾರ್ ಸಿಎಂ ಪಕ್ಕ ನಿಂತು ಸಾಹೇಬ್ರು ಇದಾರೆ ಸುಮ್ಮನಿರಿ ಎಂದರು. ಇನ್ನು ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರು ಕೊಡಗು ಮೈಸೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು.