ಲೋಕಸಭಾ ಚುನಾವಣೆ ಹಿನ್ನೆಲೆ ನಾಳೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮೈಸೂರು ಚಾಮರಾಜನಗರ, ಮಂಡ್ಯ, ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಮೈಸೂರು (ಏ.13): ಲೋಕಸಭಾ ಚುನಾವಣೆ ಹಿನ್ನೆಲೆ ನಾಳೆ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಮೈಸೂರು ಚಾಮರಾಜನಗರ, ಮಂಡ್ಯ, ಹಾಸನ ಲೋಕಸಭಾ ವ್ಯಾಪ್ತಿಯಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 'ಮೈಸೂರಿಗೆ ಮೋದಿ ಬರುತ್ತಿರುವುದಕ್ಕೆ ನನ್ನದೇನೂ ಅಭ್ಯಂತರ ಇಲ್ಲ. ಆದರೆ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಭಾರತ ಉದಯೋನ್ಮುಖ ಸೂಪರ್‌ಪವರ್ : ನರೇಂದ್ರ ಮೋದಿ
ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂಬ ಮೋದಿ ಹೇಳಿಕೆ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ಬದಲಾಯಿಸುತ್ತೇವೆಂದು ಹೇಳಿದವನು ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ. ಹಾಗಾದರೆ ಹೆಗ್ಡೆ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಹೆಗ್ಡೆ ಅಂದು ಕೇಂದ್ರ ಸಚಿವರಾಗಿದ್ರು. ಅಂದೇ ಯಾಕೆ ಕ್ರಮ ಕೈಗೊಳ್ಳಲಿಲ್ಲ. ಹೆಗ್ಡೆ ಉತ್ತರ ಕನ್ನಡದಲ್ಲಿ ಏನೂ ಕೆಲಸ ಮಾಡಿಲ್ಲ. 5 ವರ್ಷ ಮನೆಯಲ್ಲೇ ಕುಳಿತಿದ್ದ. ಈಗ ಲೋಕಸಭಾ ಚುನಾವಣೆ ಬಂದಿದ್ದಕ್ಕೆ ಹೊರಗೆ ಬಂದಿದ್ದಾನೆ. ಅವನು ಸೋಲುವುದು ಗೊತ್ತಿದೆ ಹೀಗಾಗಿ ಬಿಜೆಪಿಯವ್ರು ಅವನಿಗೆ ಟಿಕೆಟ್ ಕೊಟ್ಟಿಲ್ಲ ಅಷ್ಟೇ. ಬಿಜೆಪಿಯವರು ಎಂದೂ ಸಂವಿಧಾನ ಪರ ಇಲ್ಲ ಎಂದರು.
ಇನ್ನು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಆರೋಪಿಗಳನ್ನು ಸೆರೆ ಹಿಡಿದಿದ್ದಕ್ಕೆ ಎನ್‌ಐಎ ಹಾಗೂ ರಾಜ್ಯ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದರು ಮುಂದುವರಿದು, ಆರೋಪಿಗಳನ್ನು ಕೊಲ್ಕತ್ತದಿಂದ ರಾಜ್ಯಕ್ಕೆ ಕರೆತರಲಾಗುತ್ತಿದೆ. ಉಳಿದ ವಿಚಾರಗಳು ತನಿಖೆಯಿಂದ ಗೊತ್ತಾಗಲಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಪರ ಬಿರುಗಾಳಿ ಎದ್ದಿದೆ: ರಾಹುಲ್ ಗಾಂಧಿ
ದೇಶದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟಕ್ಕೆ ಬಹುಮತ ಸಿಗುವ ನಿರೀಕ್ಷೆ ಇದೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.