* ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ
* ಮೇಲುಗೈ ಸಾಧಿಸಿದ ಕಾಂಗ್ರೆಸ್
* ಸಿಎಂ, ರಾಮುಲು, ಆಚಾರ್, ಜೊಲ್ಲೆಗೆ ಮುಖಭಂಗ
ಬೆಂಗಳೂರು, (ಡಿ.30): ರಾಜ್ಯದಲ್ಲಿ ಸೋಮವಾರ ( ಡಿ.27) ರಂದು ನಡೆದಿದ್ದ 19 ಜಿಲ್ಲೆಗಳ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ(Local Body Election Result) ಪ್ರಕಟವಾಗಿದೆ. ಘಟಾನುಘಟಿ ನಾಯಕರಿಗೆ ಭಾರಿ ಮುಖಭಂಗವಾಗಿದೆ.
ಅದರಲ್ಲೂ ಆಡಳಿತ ಪಕ್ಷದ ನಾಯಕರ ಕ್ಷೇತ್ರಗಲ್ಲೇ ಬಿಜೆಪಿಗೆ ಹಿನ್ನಡೆಯಾಗಿದ್ದು, ಸಚಿವರು ಹಾಗೂ ಬಿಜೆಪಿ ಶಾಸಕರಿಗೆ ಮತದಾರರು ಶಾಕ್ ಕೊಟ್ಟಿದ್ದಾರೆ.
undefined
ಸಿಎಂ ಬಸವರಾಜ ಬೊಮ್ಮಾಯಿ(Basavaraj Bomai, ಸಚಿವರಾದ ಶ್ರೀರಾಮುಲು, ಶಶಿಕಲಾ ಜೊಲ್ಲೆ, ಹಾಲಪ್ಪ ಆಚಾರ್, ಆನಂದ್ ಸಿಂಗ್ ಸೇರಿದಂತೆ ಶಾಸಕರ ತವರು ಕ್ಷೇತ್ರಗಳಲ್ಲಿ ಬಿಜೆಪಿ ಮುಗ್ಗರಿಸಿದೆ. ಹಾಗಾದ್ರೆ ಯಾವೆಲ್ಲ ಸಚಿವರ ಕ್ಷೇತ್ರಗಳಲ್ಲಿ ಫಲಿತಾಂಶ ಹೇಗಿದೆ ಎನ್ನುವುದು ಈ ಕೆಳಗಿನಂತಿದೆ.
Basavaraj Bommai: 2 ತಿಂಗ್ಳಲ್ಲಿ ಬಸವರಾಜ ಬೊಮ್ಮಾಯಿಗೆ 3 ಶಾಕ್
ಸಿಎಂಗೆ ತವರಲ್ಲೇ ಶಾಕ್
ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಹಾವೇರಿಯಲ್ಲೇ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದ್ದು, ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.
ಬಂಕಾಪುರ ಪುರಸಭೆಯಲ್ಲಿ ಒಟ್ಟು23 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ -14, ಬಿಜೆಪಿ -7, ಪಕ್ಷೇತರ -2 ಸ್ಥಾನ ಪಡೆದಿದೆ. ಹಾಗೂ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ -11, ಬಿಜೆಪಿ -6, ಪಕ್ಷೇತರ -1 ಸ್ಥಾನ ಲಭಿಸಿದೆ.
ಎಂಎಲ್ಸಿ ಚುನಾವಣೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆಯಾಗಿತ್ತು. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯಾಗಿತ್ತು.
ಶ್ರೀರಾಮುಲುಗೆ ಮುಖಭಂಗ
ಚಿತ್ರದುರ್ಗದ ಮೊಣಕಾಲ್ಮೂರು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದಿದೆ. ಬಿಜೆಪಿ ಕೇವಲ ಎರಡು ಸ್ಥಾನ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮೂರು ಕ್ಷೇತ್ರದಲ್ಲಿರುವ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಸಚಿವರಿಗೆ ಭಾರಿ ಮುಖಭಂಗವಾಗಿದೆ.
ಒಟ್ಟು 16 ಸ್ಥಾನಗಳ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ 11 ಸ್ಥಾನ, ಬಿಜೆಪಿ 2 ಸ್ಥಾನ ಪಡೆದಿದೆ. ಪಕ್ಷೇತರರು 3 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಸವದಿ ,ಜೊಲ್ಲೆ ದಂಪತಿಗಳಿಗೆ ತೀವ್ರ ಗರ್ವಭಂಗ
ಬೆಳಗಾವಿ ಜಿಲ್ಲೆಯ ಐದು ಪುರಸಭೆ ಹಾಗೂ 11 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಫಲಿತಾಂಶ ಬಹಿರಂಗ ವಾಗಿದೆ. ಬಿಜೆಪಿ ಒಟ್ಟು ನಾಲ್ಕು ಸ್ಥಳೀಯ ಸಂಸ್ಥೆ ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ ಕಾಂಗ್ರೆಸ್ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಬಹುಮತ ಪಡೆದುಕೊಂಡಿದೆ.
ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರು ಪಾರಮ್ಯ ಮೆರೆದಿದ್ದರೆ 5 ಕಡೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ವಾಗಿದೆ. ಅಥಣಿ ಪುರಸಭೆಯಲ್ಲಿ ಕಾಂಗ್ರೆಸ್ ಅಚ್ಚರಿ ಎನ್ನುವಂತೆ ಬಹುಮತ ಪಡೆದಿದ್ದು ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಇಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಹಾಲಿ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಹೀನಾಯ ಸೋಲಿನ ಆಘಾತ ಎದುರಾಗಿದೆ. ಅದೇ ರೀತಿ ಚಿಕ್ಕೋಡಿ ತಾಲೂಕಿನ ಯಕ್ಸಾಂಬಾದಲ್ಲಿ ಬಿಜೆಪಿ ಯ ಜೊಲ್ಲೆ ದಂಪತಿಗಳಿಗೆ ತೀವ್ರ ಮುಖಭಂಗವಾಗಿದೆ.
ಶಾಸಕ ಗಣೇಶ ಹುಕ್ಕೇರಿ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಗದ್ದುಗೆ ಹಿಡಿದಿದೆ. ಜಿಲ್ಲೆಯ ಒಟ್ಟು ಐದು ಪುರಸಭೆ ಹಾಗೂ 11 ಪಟ್ಟಣ ಪಂಚಾಯತ್ ಗಳ 301 ವಾಡ್೯ ಗಳಿಗೆ ಮತದಾನ ನಡೆದಿತ್ತು. ಬಿಜೆಪಿ ಯಿಂದ 268, ಕಾಂಗ್ರೆಸ್ ದಿಂದ 228 ಅಭ್ಯರ್ಥಿ ಗಳು ಚುನಾವಣೆ ಗೆ ಸ್ಪರ್ಧೆ ಮಾಡಿದ್ದರು.
ಸಚಿವ ಹಾಲಪ್ಪ ಆಚಾರ್‌ಗೆ ಹಿನ್ನಡೆ
ಕೊಪ್ಪಳ ಜಿಲ್ಲೆಯ ಒಟ್ಟು ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುಕನೂರು ಪಪಂ ಅಧಿಕಾರದ ಗದ್ದುಗೆ ಕಾಂಗ್ರೆಸ್ ವಶವಾಗಿದೆ. ಆ ಮೂಲಕ ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ವ ಕ್ಷೇತ್ರದಲ್ಲೇ ತೀವ್ರ ಮುಖಭಂಗವಾಗಿದೆ. ಕುಕನೂರು ಪಪಂ ಒಟ್ಟು 19 ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ 10 ಸ್ಥಾನ ಗೆದ್ದರೆ, ಬಿಜೆಪಿ 9 ಸ್ಥಾನ ಗೆದ್ದಿದೆ. ವಿಶೇಷವೆಂಬಂತೆ ಸಚಿವ ಹಾಲಪ್ಪ ಆಚಾರ್ ಅವರ ಸ್ವ ಕ್ಷೇತ್ರ ಇದಾಗಿದ್ದು, ತಮ್ಮ ಕ್ಷೇತ್ರದಲ್ಲಿ ಪಟ್ಟಣ ಪಂಚಾಯತ್ ಆಡಳಿತ ಕೈ ವಶವಾಗಿದ್ದು, ಸಚಿವರಿಗೆ ತೀವ್ರ ನಿರಾಸೆ ತರಿಸಿದೆ.
ಈ ಬಾರಿ ಪಪಂ ಚುನಾವಣೆಯಲ್ಲಿ ಹಾಲಿ ಸಚಿವ ಹಾಲಪ್ಪ ಆಚಾರ್, ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಜಿದ್ದಿಗೆ ಬಿದ್ದು ಚುನಾವಣಾ ಪ್ರಚಾರ ನಡೆಸಿ ಮತದಾರರಿಂದ ಮತ ಕೇಳಿದ್ದರು. ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು.
ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ, ಬಿಜೆಪಿ 8 ಸ್ಥಾನ ಪಡೆದಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರ ಮತ ಸೇರಿ ಓರ್ವ ಕೈ ಸದಸ್ಯನ ಆಪರೇಷನ್ ಮಾಡಿದ್ದರಿಂದ ಪಪಂ ಕಮಲದ ವಶವಾಗಿತ್ತು. ಈಗ ಮತ್ತೆ ಪಪಂ ಕೈ ವಶವಾಗಿದೆ. ಸಚಿವರಿಗೆ ಸ್ವ ಕ್ಷೇತ್ರದಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಆನಂದ್ ಸಿಂಗ್‌ಗೆ ಆಘಾತ
ಬಳ್ಳಾರಿ(Bellary) ಮತ್ತು ವಿಜಯನಗರ(Vijayanagara) ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಕುರೇಕುಪ್ಪ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಏರ್ಪಟ್ಟಿದ್ದು ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಇನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಮರಿಯಮ್ಮನಹಳ್ಳಿ ಪಪಂನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದೆ.
ಅದೇ ರೀತಿ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ(Hospet) ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ಬಿಜೆಪಿಗೆ ಹಿನ್ನೆಡೆಯಾಗಿದೆ. ಇದರಿಂದ ಸಚಿವ ಆನಂದ್ ಸಿಂಗ್‌ಗೆ ಮುಖಭಂಗವಾಗಿದೆ.