ಬಳ್ಳಾರಿ, ವಿಜಯನಗರದಲ್ಲಿ ಕಾಂಗ್ರೆಸ್ ಮೇಲುಗೈ, ಆನಂದ್‌ ಸಿಂಗ್‌ಗೆ ಭಾರಿ ಮುಖಭಂಗ

By Suvarna News  |  First Published Dec 30, 2021, 1:24 PM IST

* ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ
* ಬಳ್ಳಾರಿ,  ವಿಜಯನಗರದಲ್ಲಿ ಕಾಂಗ್ರೆಸ್ ಮೇಲುಗೈ
* ರೆಡ್ಡಿ ಬ್ರದರ್ಸ್, ಸಚಿವ ಆನಂದ್‌ ಸಿಂಗ್‌ಗೆ ಭಾರಿ ಮುಖಭಂಗ


ಹೊಸಪೇಟೆ (ವಿಜಯನಗರ), (ಡಿ.30): ರಾಜ್ಯದಲ್ಲಿ ಸೋಮವಾರ ( ಡಿ.27) ರಂದು ನಡೆದಿದ್ದ 19 ಜಿಲ್ಲೆಗಳ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ (Local body Election Result) ಇಂದು (ಡಿ.30) ಪ್ರಕಟವಾಗಿದೆ.

ಅದರಲ್ಲೂ ತೀವ್ರ ಕುತೂಹಲ ಮೂಡಿಸಿದ್ದ ಬಳ್ಳಾರಿ(Bellary) ಮತ್ತು ವಿಜಯನಗರ(Vijayanagara) ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. 

Latest Videos

undefined

ಬಳ್ಳಾರಿ ಜಿಲ್ಲೆಯ ಕುರುಗೋಡು ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಕುರೇಕುಪ್ಪ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಏರ್ಪಟ್ಟಿದ್ದು ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಇನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಮರಿಯಮ್ಮನಹಳ್ಳಿ ಪಪಂನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. 

ಅದೇ ರೀತಿ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ(Hospet) ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ಬಿಜೆಪಿಗೆ ಹಿನ್ನೆಡೆಯಾಗಿದೆ. ಇದರಿಂದ ಸಚಿವ ಆನಂದ್‌ ಸಿಂಗ್‌ಗೆ ಮುಖಭಂಗವಾಗಿದೆ.

ಹೊಸಪೇಟೆ  ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ‌ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ಸೃಷ್ಟಿಯಾಗಿದೆ. ಒಟ್ಟು 35 ವಾರ್ಡ್ ಗಳಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ 10 ಕ್ಷೇತ್ರಗಳಲ್ಲಿ ಗೆದ್ದರೆ, ಆಮ್ ಆದ್ಮಿ ಪಕ್ಷ ಒಂದು ಸ್ಥಾನದಲ್ಲಿ ಗೆಲ್ಲುವುದರ ಮೂಲಕ ಮೊದಲ ಚುನಾವಣೆಯಲ್ಲೇ ಖಾತೆ ತೆರೆದಿದೆ.

ಪಕ್ಷೇತರರು ಬರೋಬ್ಬರಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಅಚ್ಚರಿ ಮೂಡಿಸಿದೆ. ಯಾಕಂದ್ರೆ ಪಕ್ಷೇತರ ಸಂಖ್ಯೆಯಷ್ಟು ಬಿಜೆಪಿ ಗೆದ್ದಿಲ್ಲ. 

ಇದರಿಂದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ (Anand Sing) ಅವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆಯಾಗಿದೆ. ಈ ಸಲ ನಗರಸಭೆಯಲ್ಲಿ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಹಲವು ಸಲ ಆನಂದ್ ಸಿಂಗ್ ಹೇಳಿಕೆ ನೀಡಿದ್ದರು.

ಕುರುಗೋಡು ಪುರಸಭೆ: 15 ಕಾಂಗ್ರೆಸ್, 7 ಬಿಜೆಪಿ, 1 ಪಕ್ಷೇತರ.
ಕುರೇಕುಪ್ಪ ಪುರಸಭೆ : 8 ಕಾಂಗ್ರೆಸ್, 7 ಬಿಜೆಪಿ, 2 ಜೆಡಿಎಸ್, 6 ಪಕ್ಷೇತರರು.
ಹಗರಿಬೊಮ್ಮನಹಳ್ಳಿ ಪುರಸಭೆ: 12 ಕಾಂಗ್ರೆಸ್, 11 ಬಿಜೆಪಿ.
ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ: ಕಾಂಗ್ರೆಸ್ 15, 1 ಬಿಜೆಪಿ. 2 ಪಕ್ಷೇತರ.
ಹೊಸಪೇಟೆ ನಗರಸಭೆ: 12 ಕಾಂಗ್ರೆಸ್, 10 ಬಿಜೆಪಿ, 1 ಎಎಪಿ, 12 ಪಕ್ಷೇತರ ಗೆದ್ದಿದ್ದಾರೆ.

ತವರಲ್ಲೇ ಸಿಎಂ ಬೊಮ್ಮಾಯಿಗೆ ಭಾರಿ ಮುಖಭಂಗ
ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸ್ವಕ್ಷೇತ್ರ ಹಾವೇರಿಯಲ್ಲೇ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

 ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. ಬಂಕಾಪುರ ಪುರಸಭೆಯಲ್ಲಿ ಒಟ್ಟು23 ಸ್ಥಾನಗಳಿದ್ದು, ಈ ಪೈಕಿ ಕಾಂಗ್ರೆಸ್ -14, ಬಿಜೆಪಿ -7, ಪಕ್ಷೇತರ -2 ಸ್ಥಾನ ಪಡೆದಿದೆ. ಹಾಗೂ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್ ‌-11, ಬಿಜೆಪಿ -6, ಪಕ್ಷೇತರ -1 ಸ್ಥಾನ ಲಭಿಸಿದೆ.

ಎಂಎಲ್ಸಿ ಚುನಾವಣೆ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆಯಾಗಿತ್ತು. ನಗರ ಸಂಸ್ಥೆಗಳಾದ್ದರಿಂದ ಬಿಜೆಪಿಯ ಶಕ್ತಿ ಪರೀಕ್ಷೆಯಾಗಿತ್ತು.

 

click me!