ರಾಜಕಾರಣಿಗಳು ಸೇರಿದಂತೆ ಅಕ್ಷರಸ್ಥರೇ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.
ಮೈಸೂರು (ಏ.04): ರಾಜಕಾರಣಿಗಳು ಸೇರಿದಂತೆ ಅಕ್ಷರಸ್ಥರೇ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು. ನಗರದ ಹೈವೇ ವೃತ್ತದ ಬಳಿಯ ಒಸನ್ ಡಿಲೈಟ್ (ಝೈಕಾ) ಹೊಟೇಲ್ ನಲ್ಲಿ ರೆಸ್ಪಾನ್ಸಿಬಲ್ ಸಿಟಿಜನ್ಸ್ ವಾಯ್ಸ್ ಸಂಜೆ ಆಯೋಜಿಸಿದ್ದ ಸಾಮಾಜಿಕ ಸೌಹಾರ್ದತೆ ಮತ್ತು ಸಹೋದರತ್ವದ ಕಡೆಗೆ- ಈದ್ ಮಿಲನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಸೋದರತೆ ಮತ್ತು ಭಾತೃತ್ವದ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಸಮಾಜ ಉಳಿಯಬೇಕಾದರೆ ಎಲ್ಲರ ಮನಸ್ಸಿನಲ್ಲಿನ ಕಲ್ಮಶ ದೂರವಾಗಬೇಕಿದೆ.
ನಾವೆಲ್ಲರೂ ಸೇರಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮೈಸೂರಿನಲ್ಲಿ ಸೌಹಾರ್ದತೆಯ ಕೊರತೆ ಇದ್ದರೂ, ಇನ್ನೂ ಮುಂದೆ ಧರ್ಮ ಧರ್ಮವನ್ನು ಎತ್ತು ಕಟ್ಟುವುದು ನಡೆಯುವುದಿಲ್ಲ’ ಎಂದರು. ಮೈಸೂರು ಸರ್ಖಾಜಿ ಉಸ್ಮಾನ್ ಷರೀಫ್, ಅಬ್ದುಲ್ ಸಲಾಂ ಸಾಬ್, ಪ್ರೊ. ಶಬ್ಬೀರ್ ಮುಸ್ತಾಫ, ಶೌಖತ್ ಪಾಷ, ಭಾಸ್ಕರ್, ಕಮಲ್ ಗೋಪಿನಾಥ್, ಸಿ. ಬಸವಲಿಂಗಯ್ಯ, ಸವಿತಾ ಪ. ಮಲ್ಲೇಶ್, ಬಿ.ಎಂ. ಹನೀಫ್, ಮೋಹನ್ ಕುಮಾರ್ ಗೌಡ, ನೆಲೆ ಹಿನ್ನೆಲೆ ಗೋಪಾಲಕೃಷ್ಣ, ಇ. ರತಿರಾವ್, ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ, ಎಂ.ಎಫ್. ಖಲೀಂ ಮೊದಲಾದವರು ಇದ್ದರು.
ಶ್ವೇತಪತ್ರ ಹೊರಡಿಸಲು ಆಗ್ರಹ: ಪಂಚ ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಮುಗ್ಗರಿಸಿ ಬಿದ್ದಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸಿನ ಸ್ಥಿತಿಗತಿ ಕುರಿತು ಜನರ ಮುಂದೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ತಜ್ಞ ಮೋಹನ್ದಾಸ್ ಪೈ ಅವರು ಆರ್ಥಿಕ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿರುವಾಗಲೇ, ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ನಾಲ್ಕು ನಿಗಮಕ್ಕೆ ಎರಡು ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ ನೀಡಿದೆ. ಇದನ್ನು ನೋಡಿದರೆ ಆರ್ಥಿಕ ಸ್ಥಿತಿ ಹದಗೆಟ್ಟು ಕುತ್ತಿಗೆ ಹಿಸುಕಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಮನೆ ಹಾಳು: ವಿಶ್ವನಾಥ್ ವಾಗ್ದಾಳಿ
ವಿಪಕ್ಷ ನಾಯಕರೂ ಕೂಡ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡುತ್ತಿಲ್ಲ. ಸಾಲ ಮರುಪಾವತಿಗೆ ಪರದಾಡುತ್ತಿರುವ ಸಂದರ್ಭದಲ್ಲಿಯೇ ಮತ್ತೆ ಸಾರಿಗೆ ಇಲಾಖೆಗೆ ಸಾಲ ಮಂಜೂರಾಗಲಿದೆಯೇ ಅಥವಾ ಇಲ್ಲವೇ ನೋಡಬೇಕು. ಶೇ. 18ರಷ್ಟು ಬಡ್ಡಿ ಕಟ್ಟಬೇಕು. ಸಿದ್ದರಾಮಯ್ಯ ಅವರ ಕೊಡುಗೆಗಳಿಂದ ಆರ್ಥಿಕತೆ ಅಧೋಗತಿಗೆ ಬಂದು ನಿಂತಿದೆ ಎಂದು ಅವರು ಟೀಕಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಬರೀ ಭಾಷಣ ಬಿಗಿಯುತ್ತಾರೆ. 16ನೇ ಬಜೆಟ್ ಮಂಡಿಸಲು ತಯಾರಾಗುತ್ತಿದ್ದಾರೆ. ಕಳೆದ ವರ್ಷ ಏನು ಬದಲಾವಣೆ ಆಗಿದೆ. ಹೊಸತನದಿಂದ ಆದಾಯ ಸಂಗ್ರಹಿಸಲಾಗಿದೆ ಎಂಬುದು ಇಲ್ಲ. ಹಣಕಾಸು ಚೆನ್ನಾಗಿದ್ದರೆ ಅಥವಾ ಚೆನ್ನಾಗಿಲ್ಲ ಎನ್ನುವುದನ್ನು ಜನರ ಮುಂದೆ ಸತ್ಯಹೇಳಬೇಕೆ ಹೊರತು ಮುಚ್ಚಿಟ್ಟುಕೊಳ್ಳಬಾರದು. ತಕ್ಷಣವೇ ಶ್ವೇತ ಪತ್ರ ಹೊರಡಿಸಿ ಜನರಿಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.