
ಬೆಂಗಳೂರು (ಅ.04): ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂಬುದು ಬಹುಕಾಲದ ಬೇಡಿಕೆ. ಈ ಬಗ್ಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸಲಹೆ ಪಡೆದು ರಾಜ್ಯ ಸರ್ಕಾರ ಕೇಂದ್ರಕ್ಕೆ ಅಭಿಪ್ರಾಯ ಸಲ್ಲಿಸಲಿದೆ. ಸಮಾಜವನ್ನು ಹೊರಗಿಟ್ಟು ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಮಾಡುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತ ಹಿಂದಿನ ಪ್ರಸ್ತಾವ ಬಗ್ಗೆ ಕೇಂದ್ರ ಸರ್ಕಾರ ಕೆಲ ಪ್ರಶ್ನೆಗಳನ್ನು ಕೇಳಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಯಾವ ಪ್ರಶ್ನೆಗಳನ್ನು ಕೇಳಿತ್ತು ಎಂಬುದು ಗೊತ್ತಿಲ್ಲ. ಏನೇ ಇದ್ದರೂ ಸಮಾಜದ ಎಲ್ಲಾ ಮುಖಂಡರ ಜತೆ ಚರ್ಚಿಸಿ ಸಲಹೆ ಪಡೆದು ತೀರ್ಮಾನ ಮಾಡಲಾಗುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬುದು ಬಹುಕಾಲದ ಬೇಡಿಕೆ. ಆದರೆ ಹಿಂದುತ್ವ ದುರ್ಬಲಗೊಳ್ಳುತ್ತದೆ ಎಂಬ ಕಾರಣಕ್ಕೆ ಕೇಂದ್ರ ಒಪ್ಪುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಬಸವ ತತ್ವ ಇರುವುದೇ ವೈದಿಕ ಆಚರಣೆ ವಿರುದ್ಧ. ಹಿಂದೆ ಸಿಖ್, ಬೌದ್ಧ, ಜೈನ, ಲಿಂಗಾಯತ ಧರ್ಮಗಳು ಹುಟ್ಟಿಕೊಂಡಿದ್ದೇ ಆಗಿನ ವೈದಿಕ ಧರ್ಮ ಹಾಗೂ ಅಸಮಾನತೆ ವಿರುದ್ಧ. ಹೀಗಾಗಿ ಲಿಂಗಾಯತವನ್ನು ಪ್ರತ್ಯೇಕ ಧರ್ಮವಾಗಿ ಪರಿಗಣಿಸಬೇಕು ಎಂಬ ದೀರ್ಘಕಾಲದ ಬೇಡಿಕೆ ಇದೆ. ಈ ಬಗ್ಗೆ ಸಮಾಜದ ಮುಖಂಡರ ಎಲ್ಲರ ಜತೆ ಚರ್ಚಿಸಿಯೇ ಸರ್ಕಾರ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸರಿಯಿದೆ. ಪ್ರಸ್ತುತ ಆಸ್ಪತ್ರೆಯಿಂದ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ಅವರು ಎಂದಿನಂತೆ ತಮ್ಮ ಚಟುವಟಿಕೆಗಳಿಗೆ ಮರಳಲಿದ್ದಾರೆ. ಜನರ ಪ್ರೀತಿ, ಶುಭ ಹಾರೈಕೆಯಿಂದ ಅವರು ಗುಣಮುಖರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕೆಂಬುದು ಬಹುಕಾಲದ ಬೇಡಿಕೆ. ಈ ಬಗ್ಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸಲಹೆ ಪಡೆದು ರಾಜ್ಯ ಸರ್ಕಾರ ಕೇಂದ್ರಕ್ಕೆ ಅಭಿಪ್ರಾಯ ಸಲ್ಲಿಸಲಿದೆ. ಸಮಾಜವನ್ನು ಹೊರಗಿಟ್ಟು ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಮಾಡುವುದಿಲ್ಲ.
-ಪ್ರಿಯಾಂಕ್ ಖರ್ಗೆ, ಸಚಿವ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.