
ಬೆಂಗಳೂರು (ಅ.04): ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ 5 ಹುಲಿಗಳ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದೆ. ಈ ಪ್ರಕರಣವನ್ನು ಇದೀಗ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ. ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲೇ ಮೂರು ತಿಂಗಳ ಹಿಂದೆ ವಿಷಪ್ರಾಶನದಿಂದ 1 ತಾಯಿ ಹುಲಿ ಮತ್ತು 4 ಮರಿ ಹುಲಿಗಳು ಸಾವಿಗೀಡಾಗಿದ್ದವು. ಹಸುವಿನ ಕಳೆಬರಕ್ಕೆ ವಿಷ ಹಾಕಿ ಹುಲಿಗಳು ಮರಣ ಸಾಯುವಂತೆ ಮಾಡಲಾಗಿತ್ತು.
ಈ ಅಮಾನುಷ ಕೃತ್ಯದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನಂತರ ಅರಣ್ಯ ಇಲಾಖೆ ಹೊರರಾಜ್ಯಗಳ ರಾಸುಗಳನ್ನು ರಾಜ್ಯದ ಗಡಿ ಭಾಗದ ಅರಣ್ಯ ಪ್ರದೇಶಕ್ಕೆ ಮೇವಿಗಾಗಿ ಕರೆತರುವುದನ್ನು ನಿಷೇಧಿಸುವುದು, ಅರಣ್ಯ ಸಿಬ್ಬಂದಿಯ ಗಸ್ತು ಹೆಚ್ಚಿಸುವುದು ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ, ಇದೀಗ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಬಹಿರಂಗವಾಗುವಂತಾಗಿದೆ.
ಹುಲಿಗೆ ವಿಷಪ್ರಾಶನ ಶಂಕೆ: ಹುಲಿ ಅನುಮಾನಾಸ್ಪದ ಸಾವಿನ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿರುವ ಅರಣ್ಯ ಇಲಾಖೆ, ಹುಲಿಗೆ 12 ವರ್ಷ ವಯಸ್ಸಾಗಿದ್ದು ಕೋರೆ ಹಲ್ಲುಗಳು ದುರ್ಬಲವಾಗಿವೆ. ಇನ್ನು, ಹುಲಿಯ ಮರಣೋತ್ತರ ಪರೀಕ್ಷೆಯಲ್ಲಿ ಹುಲಿ ಮೈ ಮೇಲೆ ಗುಂಡು ತಾಕಿದ ಕಲೆಗಳು ಕಂಡುಬಂದಿಲ್ಲ ಮತ್ತು ಮೃತ ಹುಲಿ ಯಾವುದೇ ಅಂಗವೂ ಕಾಣೆಯಾಗಿಲ್ಲ. ವಿಷ ಪ್ರಾಶನದಿಂದ ಹುಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹುಲಿಯ ಕಳೆಬರದ ಮಾದರಿಗಳನ್ನು ವಿಧಿವಿಜ್ಞಾನ ಸಂಸ್ಥೆಗೆ ರವಾನಿಸಲಾಗಿದೆ.
ಹುಲಿ ಕೊಂದವರ ಸುಳಿವು: ಅರಣ್ಯ ಸಚಿವರ ಆದೇಶದಂತೆ ರಚಿಸಲಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರು ನೇತೃತ್ವದ ತಂಡ ಹನೂರು ವಲಯಕ್ಕೆ ತೆರಳಿ ತನಿಖೆ ಆರಂಭಿಸಿದೆ. ಅವರೊಂದಿಗೆ ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿ ತನಿಖೆ ನಡೆಸಲಿದ್ದಾರೆ. ಅಲ್ಲದೆ, ಹುಲಿ ಕೊಂದಿದ್ದಾನೆ ಎನ್ನಲಾದ ಶಂಕಿತ ವ್ಯಕ್ತಿಯ ಸುಳಿವು ಅರಣ್ಯ ಇಲಾಖೆಗೆ ದೊರೆತಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಜೂನ್‌ನಲ್ಲಿ 5 ಹುಲಿಗಳ ಕೊಲೆ ನಂತರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಜ್ಞರನ್ನೊಳಗೊಂಡ ತಂಡ ತನಿಖೆ ನಡೆಸಿ ಹಲವು ಶಿಫಾರಸು ಮಾಡಿತ್ತು. ಅದನ್ನೆಲ್ಲ ಜಾರಿ ಮಾಡುತ್ತೇವೆ ಎಂದಿದ್ದ ಅರಣ್ಯ ಇಲಾಖೆ, ಹೊರರಾಜ್ಯದ ಜಾನುವಾರು ರಾಜ್ಯಕ್ಕೆ ಕರೆತರುವುದನ್ನು ನಿಷೇಧಿಸಿತ್ತು. ಜತೆಗೆ ಇಲಾಖೆ ಸಿಬ್ಬಂದಿ ಬೀಟ್ ವ್ಯವಸ್ಥೆ ಹೆಚ್ಚಿಸಲಾಗಿತ್ತು. ಆದರೂ, ಹುಲಿಗಳ ಅನುಮಾನಾಸ್ಪದ ಸಾವು ತಡೆಗೆ ಇಲಾಖೆ ವಿಫಲವಾಗಿದೆ ಎಂದು ವನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.