
ಬೆಂಗಳೂರು(ಫೆ.21): ತೆರಿಗೆ, ಅನುದಾನ ತಾರತಮ್ಯದ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರನ್ನು, ಮಾಧ್ಯಮಗಳನ್ನು ಕೂಡಿಸಿಕೊಂಡು ಎಲ್ಲರ ಎದುರು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದು ನೀವು ನಿರೂಪಿಸಿದರೆ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ನಿಮ್ಮಲ್ಲಿರುವ ಮಾಹಿತಿಯನ್ನು ನಾಡಿನ ಮುಂದೆ ಇಡಿ. ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ತೀಕ್ಷ್ಣವಾಗಿ ಹೇಳಿದರು.
ನಮ್ಮ ಶಾಸಕರಿಗೆ ಕರೆ ಮಾಡಿ ಎಚ್‌ಡಿಕೆ ಧಮಕಿ ಹಾಕುತ್ತಿದ್ದಾರೆ: ಡಿಕೆ ಶಿವಕುಮಾರ
ಮುಖ್ಯಮಂತ್ರಿಗಳು ವೀರಾವೇಶದಿಂದ ಸದನದ ಒಳಗೆ ಭಾಷಣ ಮಾಡುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯ ಆಯಿತು ಎನ್ನುತ್ತಾರೆ. ನಾನು ಹೇಳೋದೇ ಸತ್ಯ, ನಾನು ಹೇಳೋದೇ ಸತ್ಯ ಎಂದು ಹೇಳುತ್ತಲೇ ಇದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡು ಎಂದು ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ. ಅದನ್ನು ನಮ್ಮ ಮುಖ್ಯಮಂತ್ರಿಗಳು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕನ್ನಡಿಗರಿಗೆ ಅನ್ಯಾಯ, ಕನ್ನಡಿಗರಿಗೆ ಅನ್ಯಾಯ ಎಂದು ಜಾಗಟೆ ಹೊಡೆಯುತ್ತೀರಿ. ಅಲ್ಲಿ ಆನೆ ತುಳಿದು ಸತ್ತರೆ 15 ಲಕ್ಷ ರು. ಕೊಡುತ್ತೀರಿ. ಇಲ್ಲಿ ಆನೆ ತುಳಿದು ಸತ್ತರೆ ಐದು ಲಕ್ಷ ರು. ಕೊಡುತ್ತೀರಿ. ಅದನ್ನು ಪಡೆಯುವುದಕ್ಕೆ ಐವತ್ತು ಸಲ ಕಚೇರಿಗಳಿಗೆ ಅಳೆಯಬೇಕು. ನಿಮ್ಮ ನೀತಿ ಹೇಗಿದೆ ಎಂದರೆ ರಾಜ್ಯಕ್ಕೆ ಅನ್ಯಾಯ, ಕೇರಳಕ್ಕೆ ನ್ಯಾಯ ಎನ್ನುವಂತೆ ಆಗಿದೆ ಎಂದರು.
ಈಗ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಆಯೋಗ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಟ್ಟು ಹಕ್ಕು ಮಂಡಿಸಿ. ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟರೆ ಅಥವಾ ದೂರಿದರೆ ಉಪಯೋಗ ಇಲ್ಲ. ತೆರಿಗೆ ಪಾಲು, ಅನುದಾನ ಹಂಚಿಕೆ ಮಾಡುವುದು ಆಯೋಗವೇ ಹೊರತು ಕೇಂದ್ರವಲ್ಲ. ಈಗಾಗಲೇ ಕೇಂದ್ರದಿಂದ ಬಂದಿರುವ ಹಣವನ್ನು ಸರ್ಕಾರ ಸದ್ಬಳಕೆ ಮಾಡಿಲ್ಲ. ಆ ಬಗ್ಗೆ ಇವರು ಚಕಾರ ಎತ್ತುತ್ತಿಲ್ಲ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.